
ಬೆಂಗಳೂರು (ಮಾ.3): ಐಷಾರಾಮಿ ಅಪಾರ್ಟ್‌ಮೆಂಟ್, ಕೈತುಂಬಾ ಹಣ, ನೋಡೋಕೆ ಉತ್ತಮ ಶಿಕ್ಷಣ ಪಡೆದಿರುವ ಯುವಕ-ಯುವತಿಯರಂತೆ ಕಾಣ್ತಾರೆ ಆದ್ರೆ ಇವರ ಅಸಲಿ ಕೆಲಸ ಕಂಡು ಸಿಸಿಬಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಒಂದರ ಮೇಲೆ ದಾಳಿ ಮಾಡಿರುವ ಸಿಸಿಬಿ ನಾರ್ಕೊಟಿಕ್ಸ್ ವಿಭಾಗದ ಪೊಲೀಸರು ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಬೃಹತ್ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಬಾಗಲೂರಿನಲ್ಲಿರುವ 'ಪ್ರೆಸ್ಟಿಜ್ ಫೈನ್ ಬೇರಿ ಪಾರ್ಕ್' ಅಪಾರ್ಟ್‌ಮೆಂಟ್‌ನ ಪ್ಲಾಟ್ ಒಂದರಲ್ಲಿ ಈ ದಂಧೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕೇರಳ ಮೂಲದ ಅಶ್ವಿನ್ (27) ಮತ್ತು ಮೊಬಿನಾ (25) ಎಂಬುವವರನ್ನು ಬಂಧಿಸಿದ್ದಾರೆ. ಡ್ರಗ್ ಪೆಡ್ಲಿಂಗ್‌ನ್ನೇ ತಮ್ಮ ಕಸುಬು ಮಾಡಿಕೊಂಡಿದ್ದ ಈ ಖತರ್ನಾಕ್ ಖದೀಮರು ಯಾರಿಗೂ ಅನುಮಾನ ಬರದಂತೆ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು ಅಕ್ರಮ ವ್ಯವಹಾರ ನಡೆಸುತ್ತಿದ್ದರು.
ತನಿಖೆಯ ವೇಳೆ ಈ ಅಂತರಾಷ್ಟ್ರೀಯ ಡ್ರಗ್ ನೆಟ್ವರ್ಕ್ ಸಂಪರ್ಕ ಬಯಲಾಗಿದೆ. ಥೈಲ್ಯಾಂಡ್‌ನಲ್ಲಿ ನೆಲೆಸಿರುವ ವಿನ್ಸೆಂಟ್ ಎಂಬಾತ ಈ ಇಡೀ ದಂಧೆಯ ಮಾಸ್ಟರ್ ಮೈಂಡ್. ಈತ ವಿಮಾನದ ಮೂಲಕ ಆಗಾಗ ಸ್ವಲ್ಪ ಸ್ವಲ್ಪವೇ ಡ್ರಗ್ಸ್ ಅನ್ನು ಬೆಂಗಳೂರಿಗೆ ರವಾನಿಸುತ್ತಿದ್ದ. ವಿನ್ಸೆಂಟ್ ನೀಡುತ್ತಿದ್ದ ಸೂಚನೆಯಂತೆ ಅಶ್ವಿನ್ ಮತ್ತು ಮೊಬಿನಾ ಅವರು ಮಾದಕ ದ್ರವ್ಯಗಳನ್ನು ಸ್ವೀಕರಿಸಿ, ಆತ ಹೇಳಿದ ಜಾಗಗಳಲ್ಲಿ ಗ್ರಾಹಕರಿಗೆ ಡ್ರಗ್ಸ್ ತಲುಪಿಸುವ ಕೆಲಸ ಮಾಡುತ್ತಿದ್ದರು.
ಈ ಕಾರ್ಯಾಚರಣೆಯಲ್ಲಿ ಪೊಲೀಸರು ಅಚ್ಚರಿ ಪಡುವ ವಿಷಯವೊಂದನ್ನು ಪತ್ತೆ ಹಚ್ಚಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 8,335 LSD ಸ್ಟ್ರಿಪ್ಸ್ ವಶಪಡಿಸಿಕೊಳ್ಳಲಾಗಿದೆ. ಒಂದು ಎಲ್‌ಎಸ್‌ಡಿ ಸ್ಟ್ರಿಪ್ ಬೆಲೆ ಬರೋಬ್ಬರಿ 6 ಸಾವಿರ ರೂಪಾಯಿಗಳಾಗಿದ್ದು, ಇವುಗಳನ್ನು ಯಾರಿಗೂ ಅನುಮಾನ ಬರದಂತೆ ದೇವರ ಚಿತ್ರಗಳು ಹಾಗೂ ವಿವಿಧ ಚಿತ್ರಕಲೆಗಳ ರೂಪದಲ್ಲಿ ಮುದ್ರಿಸಿ ಮಾರಾಟ ಮಾಡಲಾಗುತ್ತಿತ್ತು. ಇದರೊಂದಿಗೆ 534 ಗ್ರಾಂ ಚರಸ್ ಹಾಗೂ 5 ಕೆಜಿ ಹೈಡ್ರೋ ಗಾಂಜಾವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಸ್ತುತ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ದಂಧೆಯಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ. ಅಕ್ರಮ ವ್ಯವಹಾರಕ್ಕೆ ಬಳಸಲಾದ ಫ್ಲಾಟ್‌ನ ಮಾಲೀಕನಿಗೆ ಈ ಬಗ್ಗೆ ಮಾಹಿತಿ ಇತ್ತೇ ಅಥವಾ ಆತನ ಪಾತ್ರವೇನಾದರೂ ಇದೆಯೇ ಎಂಬ ಬಗ್ಗೆ ಸಿಸಿಬಿ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ