ರಾಜ್ಯದಲ್ಲಿ ಒಬ್ಬ ಶಾಸಕರಿದ್ದಾರೆ. ಅವರು ಇನ್ನೂ ಬಿಜೆಪಿ ಬಿಟ್ಟಿಲ್ಲ, ಕಾಂಗ್ರೆಸ್ ಸೇರಿಲ್ಲ. ಅತ್ತ ಕಡೆ ಯಡಿಯೂರಪ್ಪ ಮನೆಯಲ್ಲೂ ಕಾಣಿಸುತ್ತಾರೆ. ಇತ್ತ ಕಡೆ ಸಿದ್ದರಾಮಯ್ಯ ಮನೆಯಲ್ಲೂ ಇರುತ್ತಾರೆ. ಅವರ ರಕ್ತದಲ್ಲಿ ಇರುವುದು ‘ಕಾಂಗ್ರೆಸ್ ಬ್ಲಡ್ಡು’ ಅಂತ ಕೆಪಿಸಿಸಿ ಅಧ್ಯಕ್ಷರೇ ಹೇಳುತ್ತಾರೆ.
ರಾಜ್ಯದಲ್ಲಿ ಒಬ್ಬ ಶಾಸಕರಿದ್ದಾರೆ. ಅವರು ಇನ್ನೂ ಬಿಜೆಪಿ ಬಿಟ್ಟಿಲ್ಲ, ಕಾಂಗ್ರೆಸ್ ಸೇರಿಲ್ಲ. ಅತ್ತ ಕಡೆ ಯಡಿಯೂರಪ್ಪ ಮನೆಯಲ್ಲೂ ಕಾಣಿಸುತ್ತಾರೆ. ಇತ್ತ ಕಡೆ ಸಿದ್ದರಾಮಯ್ಯ ಮನೆಯಲ್ಲೂ ಇರುತ್ತಾರೆ. ಅವರ ರಕ್ತದಲ್ಲಿ ಇರುವುದು ‘ಕಾಂಗ್ರೆಸ್ ಬ್ಲಡ್ಡು’ ಅಂತ ಕೆಪಿಸಿಸಿ ಅಧ್ಯಕ್ಷರೇ ಹೇಳುತ್ತಾರೆ.
ರಾಜ್ಯ ರಾಜಕಾರಣದಲ್ಲಿ ಇದು ಅಕ್ಷರಶಃ ವಿಪ್ಲವದ ಕಾಲ. ಇಲ್ಲಿ ಯಾರು, ಯಾರಿಗೆ, ಯಾವಾಗ ಮತ್ತು ಏಕೆ ಆಪರೇಷನ್ ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ.
ಒಂದು ಕಡೆ ಕಾಂಗ್ರೆಸ್‌ನ 50-60 ಶಾಸಕರನ್ನು ಸೆಳೆದು ಸರ್ಕಾರವನ್ನೇ ಉರುಳಿಸಿ ಬಿಡುತ್ತೇವೆ ನೋಡ್ತಾ ಇರಿ ಎಂದು ಕಮಲ ಪಡೆ ಅರ್ಭಟಿಸುತ್ತಿದ್ದರೆ, ಬಿಜೆಪಿಯ 20ಕ್ಕೂ ಹೆಚ್ಚು ಮಂದಿ ಅರ್ಜಿ ಹಾಕೊಂಡು ಕಾಯ್ತಾ ಇದಾರೆ, ನಾವು ಪ್ಲೀಸ್ ವೇಟ್ ಅಂದಿದ್ದೇವೆ ಅಂತಾರೆ ಹಸ್ತ ಪಡೆ ಸಾಮ್ರಾಟರು.
ಬಂದಿದ್ದು ಬರ ನೋಡಲು, ಕಂಡಿದ್ದು ಹಸಿರು! ಒಣಗಿದ ಬೆಳೆ ಬಿಟ್ಟು ಹಸಿರು ಜಾಗ ತೋರಿಸಿದ ಡೀಸಿ!
ಇನ್ನು ಜೆಡಿಎಸ್ ಎಂಬ ಮನೆಯೊಳಗೆ ಒಂದು ಕೋಣೆಯಲ್ಲಿ ಬಿಜೆಪಿ ಫ್ಲಾಗು, ಇನ್ನೊಂದು ಕೋಣೆಯಲ್ಲಿ ಕಾಂಗ್ರೆಸ್ ಫ್ಲಾಗು ಹಾರಾಡುತ್ತಿದ್ದರೆ, ಅದರ ಪಕ್ಕದ ಟೇಬಲ್ ಮೇಲೆ ಲ್ಯಾಪ್ಟಾಪ್ ಹಿಡಿದು ಕುಳಿತ ಕುಮಾರಸ್ವಾಮಿ ಫುಲ್ ಬ್ಯುಸಿ.
ಏನು ಮಾಡ್ತಾವರೇ ಅಂತ ನೋಡಿದರೆ, ಕುಮಾರವ್ಯಾಸ ನಾಚುವಂತಹ ಪ್ರಾಸದ ಚುಂಗು ಹಿಡಿದು ಕಾಂಗ್ರೆಸ್ ಮೇಲೆ ಎಕ್ಸ್ ದಾಳಿ ಮಾಡುತ್ತಾ ಫುಲ್ ಬ್ಯುಸಿಯಾಗಿದ್ದಾರೆ.
ಇಂತಿಪ್ಪ ಕಾಲಘಟ್ಟದಲ್ಲಿ ಒಂದು ದಿನ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರ ಮನೆಗೆ ಅತಿಥಿಯಾಗಿ ಬಂದವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ. ಹೀಗೆ ಕಾಂಗ್ರೆಸ್ ಅಧ್ಯಕ್ಷರನ್ನು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರ ಮನೆಗೆ ಕರೆತಂದಿದ್ದು ಬಿಜೆಪಿ ಶಾಸಕ.
ಸದರಿ ಶಾಸಕರು ಇನ್ನೂ ಬಿಜೆಪಿ ಬಿಟ್ಟಿಲ್ಲ, ಕಾಂಗ್ರೆಸ್ ಸೇರಿಲ್ಲ. ಅತ್ತ ಕಡೆ ಯಡಿಯೂರಪ್ಪ ಮನೆಯಲ್ಲೂ ಕಾಣಿಸುತ್ತಾರೆ. ಇತ್ತ ಕಡೆ ಸಿದ್ದರಾಮಯ್ಯ ಮನೆಯಲ್ಲೂ ಇರುತ್ತಾರೆ. ಅವರ ರಕ್ತದಲ್ಲಿ ಇರುವುದು ಕಾಂಗ್ರೆಸ್ ಬ್ಲಡ್ಡು ಅಂತ ಕೆಪಿಸಿಸಿ ಅಧ್ಯಕ್ಷರೂ ಹೇಳುತ್ತಾರೆ.
ಸೋ, ಸದರಿ ಶಾಸಕರು ನಾನು ಮನವೊಲಿಸುತ್ತೇನೆ ಬನ್ನಿ ಸಾ ಅಂತ ಅಧ್ಯಕ್ಷರನ್ನು ಕರೆದುಕೊಂಡು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರ ಮನೆಗೆ ಹೋದರು. ಮಾತು ಆಡಿದರು. ಕಥೆಯೂ ಆಯಿತು. ಆದರೆ, ರಿಸಲ್ಟ್ ಇನ್ನೂ ಬಂದಿಲ್ಲ.
ಯಾಕೆ ಅಂತ ಕೇಳಿದರೆ ಬರುತ್ತೆ , ಬರುತ್ತೆ. ಈಗ ಪಕ್ಷಕ್ಕೆ ಬರೋ ಜೆಡಿಎಸ್ ಶಾಸಕರ ನಂಬರ್ 8 ಇದೆ. ಅದು 12 ಆದಕೂಡಲೇ ಜೆಡಿಎಸ್ ಉಡೀಸ್ ಆಗೋ ರಿಸಲ್ಟ್ ಬಂದೇ ಬರುತ್ತೆ ಅಂತ ಕೆಪಿಸಿಸಿ ನಾಯಕರು ತಮ್ಮ ಆಪ್ತರ ಬಳಿ ಹೇಳುತ್ತಾರೆ.
ಆ ಮಾಹಿತಿಯನ್ನು ತಮ್ಮ ಗುಪ್ತ ಪಡೆಯಿಂದ ಪಡೆದ ಜೆಡಿಎಸ್ ಅಧ್ಯಕ್ಷರು, ತಮ್ಮ ಟ್ವೀಟರ್ ಖಾತೆ ತೆಗೆದು ಮತ್ತೊಂದು ಪ್ರಾಸಬದ್ಧ ಟ್ವೀಟ್ ಮಾಡಲು ಅಣಿಯಾದರಂತೆ.
ದೇವರು ವರವನು ಕೊಟ್ರೆ, ನಾ ಎಲ್ಲ ಕೇಳುವೆ ಸಿದ್ದುವೇ!!!
ದೇವರನ್ನು ವರ ಕೇಳುವುದ್ ಬಿಟ್ಟು ಬ್ಯಾರೆ ಯಾರನ್ ಕೇಳುದರ್ರೀ... ಹೌದೋ ಅಲ್ಲೋ...
ಹೀಗಂತ ನೆರೆದಿದ್ದ ಜನ ಸಮೂಹವನ್ನು ಕಾನೂನು ಸಚಿವ ಎಚ್.ಕೆ.ಪಾಟೀಲರು ಪ್ರಶ್ನೆ ಮಾಡಿದರೆ ಜನಸ್ತೋಮ ಹೌದು ಹೌದು ಎಂದು ಅಬ್ಬರಿಸಿತು.
ಸಂದರ್ಭ- ಗದಗ ನಗರದಲ್ಲಿ ಈಚೆಗೆ ನಡೆದ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಇದೇ ಚಾನ್ಸು ಅಂತ ಎಚ್.ಕೆ.ಪಾಟೀಲರು ಗದಗ ನಗರದ ಬೇಡಿಕೆಗಳ ದೊಡ್ಡ ಪಟ್ಟಿಯನ್ನು ಮುಖ್ಯಮಂತ್ರಿಯವರ ಮುಂದೆ ಇಟ್ಟರು.
ಇದನ್ನು ಕೇಳಿ ಗಾಬರಿಯಾದ ಸಿದ್ದರಾಮಯ್ಯ ಅವರು, ನೀವು ಸಚಿವ ಸಂಪುಟದಲ್ಲಿ ಹಿರಿಯ ಸಚಿವರಿದ್ದೀರಿ. ಇಷ್ಟೊಂದು ಬೇಡಿಕೆಗಳನ್ನು ಒಮ್ಮೆಲೇ ತಂದರೆ ಕೊಡಲು ಸಾಧ್ಯವೇ ಹೇಳಿ ಎಂದು ಪ್ರಶ್ನಿಸಿದರು.
ಇದಕ್ಕೆ ಭಾಷಣ ಮಾಡುತ್ತಲೇ ಪ್ರತಿಕ್ರಿಯೆ ನೀಡಿದ ಸಚಿವ ಎಚ್ಕೆ, ನೋಡ್ರೀ.. ನಾವು ದೇವಸ್ಥಾನಕ್ಕೆ ಹೊಕ್ಕಿವಿ.. ನಮ್ಮ ಬೇಡಿಕೆಯನ್ನ ಕಣ್ಮುಚ್ಚಿ ದೇವರ ಮುಂದ್ ಕೇಳಕೊಂತೀವಿ, ಕೇಳಿಕೊಂಡ ತಕ್ಷಣ ದೇವ್ರು ಕೊಟ್ಟ ಬಿಡತಾನೇನ್.. ಇಲ್ಲಾ ಅಲ್ಲಾ.
ಕೆಲವೊಮ್ಮೆ ಬರೇ ಹೂವಾ ಕೊಡತಾನ, ಕೆಲವೊಮ್ಮೆ ದೇವರ ಮ್ಯಾಲಿನ ಹೂ ಕೆಳಗ ಬೀಳ್ತದ.. ಅದನ್ ಅದೃಷ್ಟ ಅನ್ಕೊತೀವಿ ಹೌದಲ್ಲ್ರೀ ಎಂದು ಜನರನ್ನು ಪ್ರಶ್ನಿಸಿದರು. ಇದಕ್ಕೆ ಜನರೂ ಹೌದ್ರಿ ಹೌದ್ರಿ ಅಂದ್ರು.
ಇದರಿಂದ ಪ್ರೇರಿತರಾದ ಸಚಿವರು, ಹಂಗ ಗದಗಿನ ಜನಾ ತಮ್ಮ ಮನವಿಯನ್ನ ನನ್ನ ಮೂಲಕ ದೇವ್ರಿಗೆ (ಸಿಎಂಗೆ) ಸಲ್ಲಿಸ್ಯಾರಾ.. ವರ ಈಗ ಅಲ್ಲದಿದ್ರೂ ಮುಂದಾರ ಸಿಗತ್ ಅನ್ನು ವಿಶ್ವಾಸ್ರೀ... ಎಂದು ನಗುತ್ತಲೇ ಹೇಳಿದರು.
ಇದನ್ನು ಕೇಳಿದರೂ ಕೇಳದಂತೆ ಸುಮ್ಮನೆ ಕುಳಿತಿದ್ದರು ಸಿದ್ದರಾಮಯ್ಯ ಥೇಟ್ ದೇವರ ತರಹ!
ರಿಪೋರ್ಟರ್ಸ್ ಡೈರಿ: ಕಳ್ಳ ಸುಳ್ಳ ಹೇಳಿಕೆಯಿಂದ ಈಶ್ವರಪ್ಪ ಎಸ್ಕೇಪ್!
ಉತ್ತರ ಕನ್ನಡಕ್ಕೆ ಸಚಿವರ ಬರ!
ಇಡೀ ಕರ್ನಾಟಕಕ್ಕೆ ಒಂಥರಾ ಬರ ಬಂದಿದ್ದರೆ ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಬೇರೆಯೇ ರೀತಿ ಬರ ಬಂದಿದೆ. ಹಾಗಂತ ಇಲ್ಲಿ ರಾಜ್ಯದಲ್ಲಿ ಇರುವ ಸಾಮಾನ್ಯ ಬರ ಇಲ್ಲ ಅಂತೇನಿಲ್ಲ. ನಾಡನ್ನು ಕಾಡಿರುವ ಬರ ಉ.ಕ. ಜಿಲ್ಲೆಯನ್ನೂ ಕಾಡಿದೆ. ಇದರ ಜತೆಗೆ ಬೇರೆ ರೀತಿಯ ಬರವೂ ಜಿಲ್ಲೆಯ ಕೆಲ ತಾಲೂಕುಗಳನ್ನು ಕಾಡತೊಡಗಿದೆ.
ಆ ಬರದ ಹೆಸರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಬರುವಿಕೆಯ ಬರ!
ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ 11 ತಾಲೂಕುಗಳು ಬರಪೀಡಿತವಾಗಿವೆ. ಆದರೆ ಉಸ್ತುವಾರಿ ಸಚಿವರು ಅಧಿಕಾರ ವಹಿಸಿಕೊಂಡ 5 ತಿಂಗಳಾದರೂ ಜಿಲ್ಲೆಯ ಕೆಲವು ತಾಲೂಕುಗಳನ್ನು ನೋಡೇ ಇಲ್ಲ. ಎಲ್ಲ ಜಿಲ್ಲೆಯ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆ ವ್ಯಾಪ್ತಿಯ ಪ್ರತಿಯೊಂದು ತಾಲೂಕುಗಳಿಗೆ ಪ್ರವಾಸ ಮಾಡಿ ಬರ ಪರಿಸ್ಥಿತಿ ಪರಿಶೀಲಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬರ ಪರಿಸ್ಥಿತಿ ಪರಿಶೀಲನೆಗೆ ಇದುವರೆಗೂ ಒಂದೇ ಒಂದು ತಾಲೂಕಿನಲ್ಲೂ ಪ್ರವಾಸ ಮಾಡಿಲ್ಲ.
ಅಷ್ಟೇ ಅಲ್ಲ, ಸಚಿವ ಮಂಕಾಳ ವೈದ್ಯ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಹಳಿಯಾಳ, ದಾಂಡೇಲಿ, ಜೋಯಿಡಾ ಹಾಗೂ ಮುಂಡಗೋಡ ಈ ತಾಲೂಕುಗಳಿಗೆ ಒಮ್ಮೆಯೂ ಭೇಟಿ ನೀಡಿಲ್ಲ. ಕೆಲವು ತಾಲೂಕುಗಳಿಗೆ ಕೇವಲ ಒಮ್ಮೆ ಮಾತ್ರ ಭೇಟಿ ನೀಡಿದ್ದಾರೆ.
ಯಾಕೆ ಹೀಗೆ ಅಂತ ಅವರ ಆಪ್ತರನ್ನು ಕೇಳಿದರೆ, ಈ ಪ್ರಶ್ನೆಗೆ ಉತ್ತರ ಆರ್.ವಿ.ದೇಶಪಾಂಡೆ ಅವರಿಗೆ ಗೊತ್ತು ಎನ್ನುತ್ತಾರೆ. ಆಯ್ತು ಅವರನ್ನೇ ಕೇಳೋಣ ಅಂದ್ರೆ ದೇಶಪಾಂಡೆ ಅವರನ್ನು ಹುಡುಕುವುದು ಎಲ್ಲಿ.
ಒಟ್ಟಾರೆ ಉ.ಕ.ಗೆ ಈಗ ಬರವೋ!!!