
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ನಟ ದರ್ಶನ್ ತೂಗುದೀಪಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಭಾರಿ ಆಘಾತ ಎದುರಾಗಿದೆ. ತಮ್ಮ 1 ವರ್ಷ ಜೈಲು ಶಿಕ್ಷೆ ಆದೇಶವನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಸಲ್ಲಿಸಿದ್ದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಜಾಮೀನು ಮತ್ತು ತನಿಖಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿದ್ದ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ರಿಜಿಸ್ಟ್ರಾರ್ ಇಂದು ವಜಾ ಮಾಡಿದ್ದಾರೆ. ನ್ಯಾಯಮೂರ್ತಿಗಳ ಪೀಠಕ್ಕೆ ಹೋಗುವ ಮುನ್ನವೇ ದರ್ಶನ್ ಅರ್ಜಿ ವಜಾ ಆಗಿದೆ. ಒಂದು ವರ್ಷದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಮರು ಪರಿಶೀಲನೆ ಮಾಡುವಂತೆ ದರ್ಶನ್ ಪರ ವಕೀಲರು ಮತ್ತೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಈ ನಿರ್ಧಾರದಿಂದಾಗಿ ಕಾನೂನು ಹೋರಾಟದಲ್ಲಿ ನಟ ದರ್ಶನ್‌ಗೆ ಮತ್ತೆ ತೀವ್ರ ಹಿನ್ನಡೆಯಾಗಿದೆ. ಹೀಗಾಗಿ ದರ್ಶನ್ ಒಂದು ವರ್ಷ ಜೈಲು ವಾಸ ಅನಿವಾರ್ಯವಾಗಿದೆ.
ಪ್ರಕರಣದ ಗಂಭೀರತೆ ಮತ್ತು ಕಾನೂನು ಚೌಕಟ್ಟುಗಳನ್ನು ಕೂಲಂಕಷವಾಗಿ ಪರಿಶೀಲಿಸಿ , ದರ್ಶನ್ ಸಲ್ಲಿಸಿದ್ದ ಆದೇಶ ಮಾರ್ಪಾಡು ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದೆ. ಈ ಅರ್ಜಿ "ವಿಚಾರಣೆಗೆ ಅರ್ಹವಲ್ಲ" (Not Maintainable) ಎಂದು ಸ್ಪಷ್ಟಪಡಿಸಿದೆ. ತಾಂತ್ರಿಕ ಮತ್ತು ಕಾನೂನಾತ್ಮಕ ನೆಲೆಗಟ್ಟಿನಲ್ಲಿ ಈ ಅರ್ಜಿಯಲ್ಲಿ ಯಾವುದೇ ಬಲವಾದ ಅಂಶಗಳಿಲ್ಲದ ಕಾರಣ, ನ್ಯಾಯಾಲಯವು ವಿಚಾರಣೆಯ ಆರಂಭಿಕ ಹಂತದಲ್ಲೇ ಇದನ್ನು ತಿರಸ್ಕರಿಸಿದೆ.
ಈ ಮಹತ್ವದ ಬೆಳವಣಿಗೆಯ ಅಧಿಕೃತ ಮಾಹಿತಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ದರ್ಶನ್ ಸಲ್ಲಿಸಿದ್ದ ಅರ್ಜಿಯ ಸ್ಥಿತಿಗತಿಯನ್ನು (Case Status) 'ವಜಾಗೊಳಿಸಲಾಗಿದೆ' (Dismissed) ಎಂದು ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಅಪ್‌ಡೇಟ್ ಮಾಡಲಾಗಿದ್ದು, ಇದು ದರ್ಶನ್ ಅಭಿಮಾನಿಗಳಿಗೆ ಹಾಗೂ ಅವರ ಪರ ವಕೀಲರ ತಂಡಕ್ಕೆ ತೀವ್ರ ನಿರಾಶೆ ತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ