
ಬೆಂಗಳೂರು (ಮಾ.09): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದರ ನಡುವೆಯೇ ನಟ ದರ್ಶನ್ ಗ್ಯಾಂಗ್‌ನ ಹತ್ತನೇ ಆರೋಪಿ (A10) ವಿನಯ್‌ಗೆ ಆತನ ಪರ ವಾದ ಮಂಡಿಸುತ್ತಿದ್ದ ವಕೀಲ ನಟರಾಜ್ ಅವರೇ ಕೋರ್ಟ್ ಕಾರಿಡಾರ್‌ನಲ್ಲಿ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್ಡಿಗೆ ಕರೆತಂದು ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸ್ಟೋನಿಬ್ರೂಕ್ ರೆಸ್ಟೋರೆಂಟ್ ಮಾಲೀಕ ವಿನಯ್ ಹತ್ತನೇ ಆರೋಪಿಯಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಇಂದು ಪ್ರಕರಣದ ವಿಚಾರಣೆ ಸಂಬಂಧ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಈ ಘಟನೆ ಸಂಭವಿಸಿದೆ. ಆರೋಪಿ ವಿನಯ್ ಕಳೆದ ಕೆಲವು ದಿನಗಳಿಂದ ತನ್ನ ಪರ ವಾದ ಮಂಡಿಸುತ್ತಿರುವ ವಕೀಲ ನಟರಾಜ್ ಅವರನ್ನು ಬದಲಾಯಿಸಲು ಮುಂದಾಗಿದ್ದ ಎನ್ನಲಾಗಿದೆ. ಇಂದು ವಿನಯ್ ಪರವಾಗಿ ವಕಾಲಾತ್ ಸಲ್ಲಿಸಲು ಹೊಸ ವಕೀಲರೊಬ್ಬರು ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ವಿಷಯ ತಿಳಿದ ಹಳೆಯ ವಕೀಲ ನಟರಾಜ್ ಮತ್ತು ವಿನಯ್ ನಡುವೆ ಕೋರ್ಟ್ ಕಾರಿಡಾರ್‌ನಲ್ಲಿಯೇ ತೀವ್ರ ವಾಗ್ವಾದ ಶುರುವಾಗಿದೆ.
ಮಾತಿನ ಚಕಮಕಿ ಜೋರಾದಾಗ ಆರೋಪಿ ವಿನಯ್ ತನ್ನ ವಕೀಲ ನಟರಾಜ್ ಮೇಲೆ ಏರುಧ್ವನಿಯಲ್ಲಿ ಕಿರುಚಾಡಿದ್ದಾನೆ. ಆರೋಪಿಯ ಈ ನಡವಳಿಕೆಯಿಂದ ಆಕ್ರೋಶಗೊಂಡ ವಕೀಲ ನಟರಾಜ್, ನ್ಯಾಯಾಲಯದ ಆವರಣದಲ್ಲೇ ವಿನಯ್ ಕೆನ್ನೆಗೆ 5-6 ಬಾರಿ ಬಲವಾಗಿ ಬಾರಿಸಿದ್ದಾರೆ. ಪೊಲೀಸರು ಮತ್ತು ಇತರ ವಕೀಲರು ನೋಡ ನೋಡುತ್ತಿದ್ದಂತೆಯೇ ನಡೆದ ಈ ಕಪಾಳಮೋಕ್ಷದ ಘಟನೆಯಿಂದ ಕೆಲಕಾಲ ಕೋರ್ಟ್ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಪವಿತ್ರಾ ಗೌಡಗೆ ಮೆಸೇಜ್ ಮಾಡ್ತಿದ್ದ ರೇಣುಕಾಸ್ವಾಮಿಗೆ ಅಪೊಲೊ ಫಾರ್ಮಸಿ ಕೊಡ್ತಿದ್ದ ಸಂಬಳ ರಿವೀಲ್ ಮಾಡಿದ ತಾಯಿ!
ಹೈಪ್ರೊಫೈಲ್ ಕೊಲೆ ಪ್ರಕರಣದ ಆರೋಪಿಯೊಬ್ಬನ ಮೇಲೆ ಆತನದ್ದೇ ವಕೀಲರು ಕೈಮಾಡಿದ್ದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪ ಹೊತ್ತಿರುವ ವಿನಯ್, ಈಗ ತನ್ನ ಉದ್ಧಟತನದಿಂದ ವಕೀಲರಿಂದಲೇ ಏಟು ತಿನ್ನುವಂತಾಗಿದೆ. ಘಟನೆಯ ನಂತರ ಪೊಲೀಸರು ವಿನಯ್‌ನನ್ನು ಅಲ್ಲಿಂದ ಬೇರೆಡೆಗೆ ಕರೆದೊಯ್ದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ದರ್ಶನ್, ಎ2 ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳಿದ್ದಾರೆ. ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದ್ದು, ಚಾರ್ಜ್‌ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಪಿಗಳು ಮತ್ತು ವಕೀಲರ ನಡುವಿನ ಈ ಸಂಘರ್ಷ ಪ್ರಕರಣಕ್ಕೆ ಹೊಸ ಆಯಾಮ ನೀಡುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ