
ದಾವಣಗೆರೆ (ಫೆ.16): ರಾಜ್ಯದಲ್ಲಿ ಸುಮಾರು 30-40 ಸಾವಿರ ಪೌರ ಕಾರ್ಮಿಕರ ರಕ್ತವನ್ನು ಗುತ್ತಿಗೆದಾರರು ನಿರಂತರ ಹೀರುತ್ತಿದ್ದು, ತಕ್ಷಣವೇ ಇಂತಹ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಿ ಬದುಕಿಗೆ ಭದ್ರತೆ ಕಲ್ಪಿಸುವ ಜೊತೆಗೆ ಗುತ್ತಿಗೆದಾರರ ಹಿಡಿತದಿಂದ ಪಾರು ಮಾಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಸದನದ ಗ್ಯಾಲರಿಯಲ್ಲಿ ಪೌರ ಕಾರ್ಮಿಕರಿಗೆ ಸದನ ವೀಕ್ಷಿಸಲು ಅವಕಾಶ ಮಾಡಿಕೊಟ್ಟ ಸಭಾಧ್ಯಕ್ಷ ಯು.ಟಿ.ಖಾದರ್‌ರಿಗೆ ಗೌರವ ಸಲ್ಲಿಸುವ ವೇಳೆ ಮಾತನಾಡಿ ದಾವಣಗೆರೆಯ ಗಾಂಧಿ ನಗರದಲ್ಲಿ. ನನ್ನ ತಾಯಿ ಹನುಮಕ್ಕ, ತಂದೆ ಸಂಗಪ್ಪ. ಇಬ್ಬರೂ ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿದ್ದವರು.
ಗಾಂಧಿನಗರ ಸಮೀಪದ ಆಜಾದ್ ನಗರದಲ್ಲಿ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್‌ರ ಮನೆಯ ಬಳಿ ತಮ್ಮ ತಾಯಿ ಕಸ ಹೊಡೆಯುವ ವೇಳೆ ನಾನೂ ಹೋಗಿ, ಕೈಜೋಡಿಸುತ್ತಿದ್ದೆ. ಹಾಗಾಗಿ ಪೌರ ಕಾರ್ಮಿಕರ ಸಮಸ್ಯೆಗಳ ಕಣ್ಣಾರೆ ಕಂಡು, ಮನೆಯವರು ಅನುಭವಿಸುತ್ತಿದ್ದ ನೋವು, ಸಂಕಷ್ಟಗಳ ನೋಡಿಯೇ ಬೆಳೆದವನು. ನನ್ನ ಹೆತ್ತವರ ಪರಿಶ್ರಮ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಹಾಗೂ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಸದನದಲ್ಲಿ ನಿಂತು ಮಾತನಾಡುವ ಅವಕಾಶ ಸಿಕ್ಕಿದೆ ಎಂದರು. ರಾಜ್ಯದಲ್ಲಿ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿಗೆ ಗುತ್ತಿಗೆದಾರರು ಹಗಲು ದರೋಡೆ ಮಾಡಿ ಒಂದು ರೀತಿ ಭಯೋತ್ಪಾದಕರಂತೆ ರಕ್ತ ಹೀರುತ್ತಿದ್ದಾರೆ. ಕೂಡಲೇ ಸರ್ಕಾರವು ಗುತ್ತಿಗೆ ಪೌರ ಕಾರ್ಮಿಕರ ರಕ್ಷಣೆಗೆ ನಿಲ್ಲಬೇಕು.
ಹಿಂದೆ ಸಿದ್ದರಾಮಯ್ಯನವರು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 10 ಸಾವಿರ ಪೌರ ಕಾರ್ಮಿಕರ ಕಾಯಂಗೊಳಿಸಿದ್ದರು. ಆಗಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್.ಆಂಜನೇಯ ರಾಜ್ಯದಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 25 ಸಾವಿರ ಪೌರ ಕಾರ್ಮಿಕರ ಟೆಂಡರ್ ರದ್ದುಗೊಳಿಸಿ, ಕಾಯಂಗೊಳಿಸುವಂತೆ ಮನವಿ ಮಾಡಿದ್ದರು ಎಂದು ಸ್ಮರಿಸಿದರು. ಆಂಜನೇಯರ ಮನವಿಗೆ ಸ್ಪಂದಿಸಿದ್ದ ಸಿದ್ದರಾಮಯ್ಯ 25 ಸಾವಿರ ಗುತ್ತಿಗೆ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಅದೇ ರೀತಿ ರಾಜ್ಯದಲ್ಲಿ ಇನ್ನೂ 30-40 ಸಾವಿರ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿದ್ದು, ಆ ಎಲ್ಲರನ್ನೂ ಕಾಯಂಗೊಳಿಸಬೇಕು ಎಂದು ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ಇಸ್ಲಾಂ ಇರುವವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ: ಸಂಸದ ಅನಂತಕುಮಾರ ಹೆಗಡೆ
ಪೌರ ಕಾರ್ಮಿಕರಿಗೂ ಕ್ಷೇತ್ರ ಸೃಷ್ಟಿಸಿ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಕೂಡ ಧ್ವನಿಗೂಡಿಸಿ, ವಿಧಾನ ಪರಿಷತ್ ನಲ್ಲಿ ಶಿಕ್ಷಕರ ಕ್ಷೇತ್ರ ಸೃಷ್ಟಿಸಿ, ಅಂತಹವರನ್ನು ಪ್ರತಿನಿಧಿಸುವವರು, ಸಮಸ್ಯೆ ಬಗ್ಗೆ ಧ್ವನಿ ಎತ್ತಲು ಅನುವು ಮಾಡಿದಂತೆ ಪೌರ ಕಾರ್ಮಿಕರಿಗೂ ಕ್ಷೇತ್ರ ಸೃಷ್ಟಿ ಮಾಡಿ, ಪೌರ ಕಾರ್ಮಿಕರ ಧ್ವನಿ ಮೇಲ್ಮನೆಯಲ್ಲಿ ಕೇಳುವಂತಾಗಬೇಕು. ಈ ಮೂಲಕ ಪೌರ ಕಾರ್ಮಿಕರ ಧ್ವನಿಗೆ ಶಕ್ತಿ ತುಂಬಬೇಕಿದೆ. ಅದೇ ರೀತಿ ರಾಜ್ಯದಲ್ಲಿ ಈಗ ಸುಮಾರು ೩೦ ರಿಂದ ೪೦ ಸಾವಿರ ಪೌರಕಾರ್ಮಿಕರಿದ್ದು, ಅವರನ್ನೂ ಕೂಡ ಸೇವೆ ಕಾಯಂಗೊಳಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ