Sexual Harassment: ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರೂ ರೇಪ್‌: ಹೈಕೋರ್ಟ್‌

Published : Mar 24, 2022, 07:00 AM IST
Sexual Harassment: ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರೂ ರೇಪ್‌: ಹೈಕೋರ್ಟ್‌

ಸಾರಾಂಶ

*  ಅತ್ಯಾಚಾರ ಕೇಸು ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿ *  ಬಲವಂತದ ಲೈಂಗಿಕ ಕ್ರಿಯೆ ತಪ್ಪು *  ಪತಿಗೆ ವಿನಾಯ್ತಿ ನೀಡದಿರುವ ಕುರಿತು ಶಾಸಕಾಂಗ ಯೋಚಿಸಲಿ  

ಬೆಂಗಳೂರು(ಮಾ.24):  ಮದುವೆ ಎಂಬುದು ಪತ್ನಿಯ ಮೇಲೆ ಪೈಶಾಚಿಕ ಕೃತ್ಯ ನಡೆಸಲು ಪರವಾನಗಿ ನೀಡಲು ಅಲ್ಲ. ಪತ್ನಿ ‘ಲೈಂಗಿಕ ದಾಸಿ’ ಎಂಬ ಭಾವನೆಯಿಂದ ಲೈಂಗಿಕ ದೌರ್ಜನ್ಯ(Sexual Harassment) ಎಸಗುವ ಪತಿ ವಿರುದ್ಧ ಅತ್ಯಾಚಾರ ಪ್ರಕರಣ(Rape Case) ದಾಖಲಿಸಿ ದೋಷಾರೋಪ ಪಟ್ಟಿಹೊರಿಸಬೇಕು ಎಂದು ಹೈಕೋರ್ಟ್‌(High Court of Karnataka) ಮಹತ್ವದ ತೀರ್ಪು ನೀಡಿದೆ.

ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್‌, ಪತ್ನಿ(Wife) ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗುವುದು ಅತ್ಯಾಚಾರ ಎಂಬುದಾಗಿ ಪರಿಗಣಿಸಲ್ಪಡುತ್ತದೆ. ವೈವಾಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗೆ ನೀಡುವ ವಿನಾಯಿತಿ ರದ್ದುಪಡಿಸುವ ಬಗ್ಗೆ ಶಾಸಕಾಂಗ ಯೋಚಿಸುವುದು ಸೂಕ್ತ ಎಂದು ಹೈಕೋರ್ಟ್‌ ಸಲಹೆ ನೀಡಿದೆ.

Bengaluru ಪತಿ ವಿರುದ್ಧವೇ ಅತ್ಯಾಚಾರ ಕೇಸ್ ದಾಖಲಿಸಿದ ಪತ್ನಿ!

ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಮತ್ತು ಅತ್ಯಾಚಾರ ಎಸಗಿದ ಆರೋಪ ಸಂಬಂಧ ಪತ್ನಿ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಒಡಿಶಾ ಮೂಲದ ಹೃಷಿಕೇಶ್‌ ಸಾಹೂ (43) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಈ ಪೀಠ ಅದೇಶ ಮಾಡಿದೆ.

ಪತ್ನಿ ದಾಖಲಿಸುವ ಅತ್ಯಾಚಾರ ಪ್ರಕರಣದಲ್ಲಿ ಪತಿಗೆ(Husband) ವಿನಾಯಿತಿ ಇದೆ ಎಂಬ ಅರ್ಜಿದಾರನ ವಾದವನ್ನು ತಳ್ಳಿ ಹಾಕಿರುವ ಹೈಕೋರ್ಟ್‌, ಪತಿಯ ವಿರುದ್ಧ ದಾಖಲಾಗುವ ವೈವಾಹಿಕ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಪತ್ನಿಯ ಶರೀರ ಮತ್ತು ಮಾನಸಿಕ ಸ್ಥಿತಿಗತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ವೈವಾಹಿಕ ಅತ್ಯಾಚಾರ ಪ್ರಕರಣಗಳಲ್ಲಿ(Marital Rape Case) ಪತಿಗೆ ಇರುವ ವಿನಾಯಿತಿ ರದ್ದುಪಡಿಸುವುದು ಸೂಕ್ತವಾಗಿದೆ ಎಂದು ಆದೇಶಿಸಿದೆ.

ಪತ್ನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶಿಸುವುದಿಲ್ಲ. ಪ್ರಕರಣದಲ್ಲಿ ಮಾಡಿರುವ ಕೌಟುಂಬಿಕ ಹಾಗೂ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಹಿಳೆ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪಗಳನ್ನು ವಿಚಾರಣಾ ನ್ಯಾಯಾಲಯ ನಿರ್ಧರಿಸಬೇಕಿದೆ. ಹೀಗಾಗಿ, ವಿಚಾರಣಾ ನ್ಯಾಯಾಲಯ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಪ್ರಕರಣದಲ್ಲಿ ಪತಿ ವಿರುದ್ಧ ದೋಷಾರೋಪ ಪಟ್ಟಿರಚನೆ ಪ್ರಕ್ರಿಯೆ ಮುಂದುವರಿಸಬೇಕು ಎಂದು ಆದೇಶಿಸಿದ ಹೈಕೋರ್ಟ್‌ ಹೃಷಿಕೇಶ್‌ ಅರ್ಜಿಯನ್ನು ವಜಾಗೊಳಿಸಿದೆ.

Minor Girl Rape in Pune ಅಪ್ಪ, ಅಣ್ಣ, ಅಜ್ಜ, ಅಂಕಲ್ ಎಲ್ಲರಿಂದಲೂ ಪುಟ್ಟ ಹುಡುಗಿಯ ಮೇಲೆ ರೇಪ್!

ಪ್ರಕರಣದ ವಿವರ:

ಒಡಿಶಾ ಮೂಲದ ಹೃಷಿಕೇಶ್‌ ಸಾಹೂ ಮತ್ತವರ ಪತ್ನಿ ಬೆಂಗಳೂರಿನಲ್ಲಿ(Bengaluru) ನೆಲೆಸಿದ್ದರು. ಪತಿ ವಿರುದ್ಧ ಪತ್ನಿ ಬೆಂಗಳೂರು ಪೂರ್ವ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಅತ್ಯಾಚಾರದ ಆರೋಪ ಮಾಡಿದ್ದರು. ಅಲ್ಲದೆ, ಪತಿಯು ತನ್ನನ್ನು ಲೈಂಗಿಕ ಗುಲಾಮಳಂತೆ ನಡೆಸಿಕೊಂಡಿದ್ದಲ್ಲದೆ, ಅಪ್ರಾಪ್ತ ಮಗಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದರು. ತನ್ನ ವಿರುದ್ಧದ ಅತ್ಯಾಚಾರ ಆರೋಪ ಕೈಬಿಡಲು ವಿಚಾರಣಾ ನ್ಯಾಯಾಲಯ ನಿರಾಕರಿಸಿದ್ದರಿಂದ ಹೃಷಿಕೇಶ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಪತ್ನಿ ದಾಖಲಿಸುವ ಅತ್ಯಾಚಾರ ಪ್ರಕರಣದಲ್ಲಿ ಪತಿಗೆ ವಿನಾಯಿತಿ ಇದ್ದು, ತನ್ನ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.

ಆದೇಶದ ಸಾರಾಂಶ:

ದೇಶದ ಪ್ರತಿಯೊಂದು ಕಾನೂನೂ (ಶಾಸನ) ಸಂವಿಧಾನದ ಪರಿಚ್ಛೇದ 14 ಕಲ್ಪಿಸಿರುವ ಸಮಾನತೆ ಒಳಗೊಂಡಿದೆ.ಅತ್ಯಾಚಾರ ಕೃತ್ಯವನ್ನು ಎಸಗಿದ ವ್ಯಕ್ತಿ ಅಥವಾ ಪತಿಗೆ ವಿನಾಯ್ತಿ ನೀಡಿದರೆ ಸಮಾನತೆ ನಿಯಮ ಉಲ್ಲಂಘಿಸಿದಂತಾಗುತ್ತದೆ. ಪುರುಷನಾಗಲಿ ಅಥವಾ ಮಹಿಳೆಯಾಗಲಿ ಸಂವಿಧಾನದಲ್ಲಿ ಸಮಾನವಾಗಿ ಪರಿಗಣಿಸಲ್ಪಡುತ್ತಾರೆ.ಹೀಗಿರುವಾಗ ಅತ್ಯಾಚಾರ ಅಪರಾಧದಿಂದ ಪತಿಗೆ ವಿನಾಯ್ತಿ ನೀಡುವ ಮೂಲಕ ಪುರುಷ-ಮಹಿಳೆ ಮಧ್ಯೆ ಅಸಮಾನತೆ ಸೃಷ್ಟಿಸಬಾರದು. ಅನೇಕ ದೇಶಗಳಲ್ಲಿ ವೈವಾಹಿಕ ಅತ್ಯಾಚಾರ ಎನ್ನುವುದು ಅಪರಾಧ ಕೃತ್ಯವೆನಿಸಿಕೊಂಡಿದೆ ಎಂದು ನ್ಯಾಯಪೀಠ ಹೇಳಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!