
ಬೆಂಗಳೂರು (ಅ.11): ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಕುರಿತ ಹೇಳಿಕೆಗಾಗಿ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ವಿರುದ್ಧ ಸಾಮಾಜಿಕ ಜಾಲಾತಾಣಗಳಲ್ಲಿ ಅವಹೇಳನಕಾರಿ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಬಂಧಿತ ಆರು ಮಂದಿಗೆ ಜಾಮೀನು ಮತ್ತು ಓರ್ವ ಆರೋಪಿಗೆ ನಿರೀಕ್ಷಣಾ ಜಾಮಿನು ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ.
ಜಾಮೀನು ಕೋರಿ ಬಂಧಿತರಾದ ಕೆ.ಪ್ರಮೋದ್, ಮಂಜುನಾಥ್, ಸಿ.ವೈ.ರಾಜೇಶ್, ಟಿ.ಓಬಣ್ಣ, ಕೆ.ಎಂ.ಗಂಗಾಧರ್, ಚಿನ್ಮಯ್ ಶೆಟ್ಟಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮತ್ತೊಬ್ಬ ಆರೋಪಿ ಬಿ.ಎ.ವಿಕಾಸ್ ನಿರೀಕ್ಷಣಾ ಜಾಮೀನು ಕೋರಿದ್ದ.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರ ಪೀಠ, ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಹೀಗಾಗಿ ಬಂಧಿತ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡುತ್ತಿರುವುದಾಗಿ ಎಂದು ತಿಳಿಸಿದೆ.
ಇದನ್ನೂ ಓದಿ: ನಟಿ ರಮ್ಯಾಗೆ ಕೆಟ್ಟ ಮೆಸೇಜ್: ಆರೋಪಿಗಳ ಮೊಬೈಲ್ ಪ್ರಯೋಗಾಲಯಕ್ಕೆ ರವಾನೆ
ಅಲ್ಲದೆ, ಎಲ್ಲ ಬಂಧಿತ ಆರೋಪಿಗಳು ಒಂದು ಲಕ್ಷ ರು. ಮೊತ್ತಕ್ಕೆ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಭದ್ರತಾ ಖಾತರಿ ನೀಡಬೇಕು. ಇನ್ನೂ ನಿರೀಕ್ಷಣಾ ಜಾಮೀನು ಕೋರಿರುವ ಆರೋಪಿ ವಿಕಾಸ್, ಮುಂದಿನ ಎರಡು ವಾರದಲ್ಲಿ ತನಿಖಾಧಿಕಾರಿ ಅಥವಾ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು. ಒಂದು ಲಕ್ಷ ರು. ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತಾ ಖಾತರಿ ನೀಡಬೇಕು ಎಂದು ಸೂಚಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೊರ್ಟ್ ರದ್ದು ಪಡಿಸಿತ್ತು. ಈ ಸಂದರ್ಭದಲ್ಲಿ ನಟಿ ರಮ್ಯಾ, ಸುಪ್ರೀಂ ಕೋರ್ಟ್ ಆದೇಶದ ಕುರಿತಂತೆ ತಮ್ಮ ಅಭಿಪ್ರಾಯವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಹಲವರು ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಅವರನ್ನು ಅವಹೇಳನಾಕಾರಿ ಪದಗಳಿಂದ ನಿಂದಿಸಿದ್ದರು.
ಈ ಸಂಬಂಧ ರಮ್ಯಾ ಅವರು ಒಟ್ಟು 43 ಮಂದಿಯ ವಿರುದ್ಧ ಜು.28ರಂದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಅನೇಕ ಆರೋಪಿಗಳನ್ನು ಬಂಧಿಸಿದ್ದರು. ಅವರ ಪೈಕಿ ಅರ್ಜಿದಾರ ಆರೋಪಿಗಳು ಜಾಮೀನು ಕೋರಿದ್ದರು. ಮತ್ತೋರ್ವ ಆರೋಪಿ ವಿಕಾಸ್‌ಗೆ ಬಂಧನ ಭೀತಿ ಕಾಡಿದ್ದರಿಂದ ನಿರೀಕ್ಷಣಾ ಜಾಮೀನು ಕೋರಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ