
ಬೆಂಗಳೂರು (ನ.15): ಸಾಲು ಮರದ ತಿಮ್ಮಕ್ಕ ನಿಧನಕ್ಕೆ ಕೇಂದ್ರದ ಮಾಜಿ ಸಚಿವ, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನನ್ನ ಹೀರೋಗಳಲ್ಲಿ ಒಬ್ಬರಾದ ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ಅವರು ಪರಿಸರ ಬಗ್ಗೆ ಕಾಳಜಿ ಹೊಂದಿರುವ ನಿಜವಾದ ಯೋಧರಾಗಿದ್ದರು. ಪರಿಸರವನ್ನು ಉಳಿಸಲು ಭಾರತದ ಅನೇಕ ತಲೆಮಾರುಗಳ ಜನರಿಗೆ ಅವರು ಸ್ಪೂರ್ತಿಯಾಗಿದ್ದಾರೆ. ಇಂಥ ವಿಶೇಷ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬ ಸದಸ್ಯರು, ಹಿತೈಷಿಗಳು ಮತ್ತು ಅವರ ಅದ್ಭುತವಾದ ಜೀವನದಿಂದ ಸ್ಪೂರ್ತಿ ಪಡೆದಿರುವ ಎಲ್ಲರಿಗೂ ನನ್ನ ಸಂತಾಪಗಳು. ಓಂ ಶಾಂತಿ ಎಂದು ರಾಜೀವ್ ಚಂದ್ರಶೇಖರ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ನೆರವಿಗೆ ಧಾವಿಸಿದ್ದ ಆರ್‌ಸಿ: 2017ರಲ್ಲಿ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಾಲು ಮರದ ತಿಮ್ಮಕ್ಕ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದ ರಾಜೀವ್ ಚಂದ್ರಶೇಖರ್ ಅವರು, ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಿದ್ದರು. ತಿಮ್ಮಕ್ಕ ಅವರು ಆಸ್ಪತ್ರೆಯ ವೈದ್ಯಕೀಯ ಬಿಲ್ ಭರಿಸಲು ಪರದಾಡುತ್ತಿದ್ದ ವಿಚಾರ ತಿಳಿದು, ನೇರವಾಗಿ ಆಸ್ಪತ್ರೆಗೆ ತೆರಳಿ ಬಿಲ್ ಪಾವತಿಸಿದ್ದರು. ಅದಕ್ಕೂ ಮೊದಲು ಒಮ್ಮೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ, ನಿಮ್ಮ ಪರಿಸರ ಕಾಳಜಿ ಮತ್ತು ಸಮಾಜಕ್ಕೆ ನೀಡಿದ ಅಪೂರ್ವ ಕೊಡುಗೆ ಗೌರವಾರ್ಥವಾಗಿ ನಾನೇ ಬಿಲ್ ಪಾವತಿಸುತ್ತೇನೆ ಎಂದು ರಾಜೀವ್ ಹೇಳಿದ್ದರು.
ತಿಮ್ಮಕ್ಕಗೆ ಸಂದ ಪ್ರಶಸ್ತಿ-ಪುರಸ್ಕಾರಗಳು: ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ, ನಾಡೋಜ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಮಾಣಪತ್ರ, ಕೇಂದ್ರೀಯ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೆಯ ಪ್ರಮಾಣಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರೀ ಫಿಲಿಪ್ಸ್ ಧೀರತೆ ಪ್ರಶಸ್ತಿ, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತ ಪ್ರಶಸ್ತಿ, ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ. ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್‌ನಿಂದ ವಿಶಾಲಾಕ್ಷಿ ಪ್ರಶಸ್ತಿಗಳು ತಿಮ್ಮಕ್ಕ ಅವರಿಗೆ ಸಂದಿವೆ.
ಎಲ್ಲರಿಗೂ ತಿಮ್ಮಕ್ಕ ಸ್ಫೂರ್ತಿಯಾಗಲಿ: ಆಸ್ಪತ್ರೆ ಬಳಿ ಭಾವುಕರಾಗಿ ಮಾತನಾಡಿದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್, ರಾಜ್ಯದ ಜನ ಅಜ್ಜಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು. ಇಷ್ಟು ವರ್ಷ ಅಜ್ಜಿ ತುಂಬಾ ಚೆನ್ನಾಗಿ ಬದುಕಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಯುವ ಸಮುದಾಯ ನಡೆಯಬೇಕು ಎಂದರು.
ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದ ತಿಮ್ಮಕ್ಕ ಅವರು ಸಾಕು ಮಗ ಉಮೇಶ್ ಅವರ ತಲೆಯನ್ನು ಭಾವುಕರಾಗಿ ಸವರುವುದು, ಆಗ ಉಮೇಶ್ ‘ಸಾಕು ಬಿಡು ಅಜ್ಜಿ’ ಎಂದು ಹೇಳುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ