ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: ಇಬ್ಬರು ಸಾವು

Published : May 21, 2024, 01:09 PM IST
ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: ಇಬ್ಬರು ಸಾವು

ಸಾರಾಂಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ದೇವನಹಳ್ಳಿಯಲ್ಲಿ ತಗ್ಗು ಪ್ರದೇಶದ ಮನೆ, ಅಪಾರ್ಟ್‌ಮೆಂಟ್‌ಗಳ ನೆಲಮಾಳಿಗೆಗೆ ನೀರು ನುಗ್ಗಿದೆ. ಮೈಸೂರು ಹಾಗೂ ತುಮಕೂರಿನಲ್ಲಿಯೂ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಬೆಂಗಳೂರು(ಮೇ.21):  ಕೊಡಗು, ಮಲೆನಾಡು, ಕರಾವಳಿ ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಸೋಮವಾರ ಇಬ್ಬರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ಶಾಲೆಯ ಕಂಪೌಂಡ್‌ ಗೋಡೆ ಕುಸಿದು 3ನೇ ತರಗತಿಯ ಬಾಲಕಿ ಅಸುನೀಗಿದ್ದರೆ, ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಹರೇಕಳ ನ್ಯೂಪಡ್ಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಗೋಡೆ ಕುಸಿದು, ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುತ್ತಿದ್ದ 3ನೇ ತರಗತಿ ವಿದ್ಯಾರ್ಥಿನಿ ಶಾಝಿಯಾ ಬಾನು (7) ಎಂಬಾಕೆ ಮೃತಪಟ್ಟಿದ್ದಾಳೆ. ಇದೇ ವೇಳೆ, ಕುಕ್ಕೆ ಸುಬ್ರಮಣ್ಯದಲ್ಲಿ ಅಂಗಡಿಗಳ ಬಳಿ ಕಬ್ಬಿಣ ಹಿಡಿದ ಜನರಿಗೆ ಸಿಡಿಲ ಶಾಕ್ ತಗುಲಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಕಂಡು ಬಂದಿದ್ದು, ಮುಂದಿನ 2 ದಿನ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.

ಕೊಡಗಿನಲ್ಲಿ ಮಳೆ: ಬತ್ತಿದ್ದ ಕಾವೇರಿ ನದಿಯಲ್ಲಿ ಹರಿವು ಶುರು

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಹೊಂಗೆ ಹಳ್ಳ ಉಕ್ಕಿ ಹರಿಯುತ್ತಿದೆ. ಅಜ್ಜಂಪುರ ತಾಲೂಕಿನ ಐತಿಹಾಸಿಕ ಶಿವನಿ ಕೆರೆಗೆ ಭಾರಿ ಪ್ರಮಾಣದ ನೀರು ಬಂದಿದೆ. ಹೊಳೆಹೊನ್ನೂರಿನಲ್ಲಿ ತಗ್ಗು ಪ್ರದೇಶದ ಕಟ್ಟಡಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಕಡೂರು ಪಟ್ಟಣದ ಹಳೆಪೇಟೆಯಲ್ಲಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ, ಕೆ.ಎಚ್. ರಂಗಪ್ಪ (48) ಎಂಬುವರು ಅಸುನೀಗಿದ್ದಾರೆ. ಶಿವಮೊಗ್ಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಸಾರ್ವಜನಿಕರು, ವಾಹನ ಸವಾರರು, ಸ್ಥಳೀಯರು ಪರದಾಡುವಂತಾಯಿತು.

ಕೊಡಗಿನಲ್ಲಿಯೂ ಮಳೆ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಮಳೆಗಾಲದ ವಾತಾವರಣ ಕಂಡು ಬಂತು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಇಳ್ಳೇನಹಳ್ಳಿಯಲ್ಲಿ ಸಿಡಿಲಿಗೆ ಹಸುವೊಂದು ಮೃತಪಟ್ಟಿದೆ. ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿಯೂ ಮಳೆಯಾಗಿದ್ದು, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಟಿ.ಕಲ್ಲಹಳ್ಳಿಯಲ್ಲಿ ಚಪ್ಪರ ಮುರಿದು 8 ಕುರಿಗಳು ಮೃತಪಟ್ಟಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ದೇವನಹಳ್ಳಿಯಲ್ಲಿ ತಗ್ಗು ಪ್ರದೇಶದ ಮನೆ, ಅಪಾರ್ಟ್‌ಮೆಂಟ್‌ಗಳ ನೆಲಮಾಳಿಗೆಗೆ ನೀರು ನುಗ್ಗಿದೆ. ಮೈಸೂರು ಹಾಗೂ ತುಮಕೂರಿನಲ್ಲಿಯೂ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್ - ಪೊಲೀಸರ ಬಲೆಗೆ ಬಿದ್ದ ಮೂವರು!