ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆಗೆ ಕರವೇ ಕೆಂಡ; ನಾರಾಯಣ ಗೌಡರ ಹೋರಾಟಕ್ಕೆ ಮಣಿದು ಹೊಸ ಅಧಿಸೂಚನೆ ಹೊರಡಿಸಿದ ಇಲಾಖೆ!

Published : Dec 19, 2025, 02:16 PM IST
Language War Victory Railway Dept Issues New Notification to Allow Kannada After KRV Protest

ಸಾರಾಂಶ

ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಭಾಷಾ ತಾರತಮ್ಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಿದೆ. ಕರವೇ ಒತ್ತಡಕ್ಕೆ ಮಣಿದು ಬೆಂಗಳೂರು ವಿಭಾಗದ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ರೈಲ್ವೆ ಇಲಾಖೆ ಒಪ್ಪಿದೆ.

ಬೆಂಗಳೂರು (ಡಿ.19): ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ ಎನಾರಾಯಣ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಕರ್ನಾಟಕದಲ್ಲಿ ನಡೆಯುವ ರೈಲ್ವೆ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು. 2008ರಿಂದಲೂ ನಾವು ಈ ಬಗ್ಗೆ ನಿರಂತರ ಹೋರಾಟ ಮಾಡುತ್ತಿದ್ದೇವೆ. ಕನ್ನಡದಲ್ಲಿ ಪರೀಕ್ಷೆ ನಡೆಸಿದಾಗ ಮಾತ್ರ ನಮ್ಮ ನೆಲದ ಮಕ್ಕಳಿಗೆ ಉದ್ಯೋಗ ಸಿಗಲು ಸಾಧ್ಯ' ಎಂದು ಅವರು ಸ್ಪಷ್ಟಪಡಿಸಿದರು.

ಬೆಂಗಳೂರು ವಿಭಾಗದ ತಾರತಮ್ಯಕ್ಕೆ ಕರವೇ ವಿರೋಧ

ಡಿಸೆಂಬರ್ 13ರಂದು ರೈಲ್ವೆ ಇಲಾಖೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಭಾಷಾ ತಾರತಮ್ಯ ಎದ್ದುಕಾಣುತ್ತಿತ್ತು. ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳಲ್ಲಿ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಆದರೆ, ಬೆಂಗಳೂರು ವಿಭಾಗದಲ್ಲಿ ಮಾತ್ರ ಕೇವಲ ಹಿಂದಿ ಮತ್ತು ಇಂಗ್ಲಿಷ್‌ಗೆ ಸೀಮಿತಗೊಳಿಸಲಾಗಿತ್ತು. ಈ ತಾರತಮ್ಯವನ್ನು ಖಂಡಿಸಿ ಕರವೇ ಹೋರಾಟಕ್ಕಿಳಿದ ಹಿನ್ನೆಲೆಯಲ್ಲಿ, ಈಗ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಹೊಸ ಅಧಿಸೂಚನೆ ಹೊರಡಿಸಿದೆ.

ಸಚಿವ ಸೋಮಣ್ಣರ ಅಸಹಾಯಕತೆ, ಹಿಂದಿ ಅಧಿಕಾರಿಗಳ ದರ್ಪ!

ಈ ಭಾಷಾ ವಿವಾದದ ಕುರಿತು ಕೇಂದ್ರ ಸಚಿವ ವಿ ಸೋಮಣ್ಣ ಅವರೊಂದಿಗೆ ಚರ್ಚಿಸಿರುವುದಾಗಿ ನಾರಾಯಣ ಗೌಡ ತಿಳಿಸಿದ್ದಾರೆ. ಸಚಿವ ಸೋಮಣ್ಣ ಅವರ ಬಳಿ ಮಾತನಾಡಿದಾಗ ಅವರು ತಮ್ಮ ಹತಾಶೆ ಅಸಹಾಯಕತೆ ಹೊರಹಾಕಿದ್ದಾರೆ. ಇಲಾಖೆಯಲ್ಲಿ ಹಿಂದಿ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ' ಎಂದು ಗೌಡರು ಗಂಭೀರ ಆರೋಪ ಮಾಡಿದರು. ಅಧಿಕಾರಿಗಳ ದರ್ಪದ ನಡುವೆಯೂ ಕರವೇ ಒತ್ತಡಕ್ಕೆ ಮಣಿದು ಪರೀಕ್ಷಾ ಕ್ರಮದಲ್ಲಿ ಬದಲಾವಣೆ ತರಲಾಗಿದೆ.

2008ರ ಐತಿಹಾಸಿಕ ಹೋರಾಟದ ನೆನಪು

ತಮ್ಮ ಹೋರಾಟದ ಇತಿಹಾಸವನ್ನು ಸ್ಮರಿಸಿದ ನಾರಾಯಣ ಗೌಡ, 2008ರಲ್ಲಿ ನಾವು ನಡೆಸಿದ ಹೋರಾಟ ದೇಶದ ಗಮನ ಸೆಳೆದಿತ್ತು. ಅಂದು ಎರಡು ವರ್ಷಗಳ ಕಾಲ ಡಿ-ಗ್ರೂಪ್ ಪರೀಕ್ಷೆ ನಡೆಸಲು ಬಿಟ್ಟಿರಲಿಲ್ಲ. ಆಗಿನ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಕೂಡ ಆಯಾ ರಾಜ್ಯದ ಭಾಷೆಯಲ್ಲೇ ಪರೀಕ್ಷೆ ನಡೆಸಬೇಕು ಎಂದು ಒಪ್ಪಿಕೊಂಡಿದ್ದರು. ಅದರ ಫಲವಾಗಿಯೇ ಇಂದು ಸಾವಿರಾರು ಕನ್ನಡಿಗರು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನೆನಪಿಸಿಕೊಂಡರು.

ಹಿಂದಿ ಇಂಗ್ಲಿಷ್‌ನಲ್ಲಿ ಬರೆದರೆ ಮಾತ್ರ ಪ್ರಮೋಷನ್!

ಕೇವಲ ನೇರ ನೇಮಕಾತಿ ಮಾತ್ರವಲ್ಲದೆ, ಇಲಾಖೆಯ ಒಳಗಿನ ಬಡ್ತಿ (Promotion) ಪರೀಕ್ಷೆಗಳಲ್ಲೂ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂದು ಕಿಡಿಕಾರಿದ ನಾರಾಯಣಗೌಡರು, ಪ್ರಮೋಷನ್ ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸುತ್ತಿರುವುದು ಸರಿಯಲ್ಲ. ಇಲಾಖಾ ಪರೀಕ್ಷೆಗಳೂ ಕನ್ನಡದಲ್ಲೇ ನಡೆಯಬೇಕು. ಈ ಬಗ್ಗೆ ನಾವು ಪಟ್ಟು ಹಿಡಿದಿದ್ದೇವೆ ಮತ್ತು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಐಎಎಲ್ ನಿರ್ಬಂಧವಿದ್ದರೂ ಬೆಂಗಳೂರು 2ನೇ ಏರ್‌ಪೋರ್ಟ್‌ ನಿರ್ಮಾಣ ಪ್ರಕ್ರಿಯೆ ಆರಂಭ: ಎಂ.ಬಿ. ಪಾಟೀಲ
ಭಾರತದಲ್ಲಿ 40 ಲಕ್ಷ ಮಂದಿಯಲ್ಲಿದೆ ಲೈಸೆನ್ಸ್ ಗನ್, ಯಾವ ರಾಜ್ಯಕ್ಕೆ ಮೊದಲ ಸ್ಥಾನ?