
ಬೆಂಗಳೂರು (ಆ.24): ರಾಜ್ಯದಲ್ಲಿ ನಡೆಯುತ್ತಿರುವ ರಾಯಚೂರು, ವಿಜಯಪುರ, ಹಾಸನ ಸೇರಿ ವಿವಿಧ ವಿಮಾನ ನಿಲ್ದಾಣಗಳು ಮತ್ತು ಏರ್-ಸ್ಟ್ರಿಪ್ ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ಅಡಚಣೆಗಳು ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ಅಡಚಣೆಗಳನ್ನು ತ್ವರಿತವಾಗಿ ಬಗೆಹರಿಸಿ ವಿಮಾನ ನಿಲ್ದಾಣ ನಿರ್ಮಾಣ ಮತ್ತು ವಿಮಾನ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಿಮಾನ ನಿಲ್ದಾಣಗಳು ಹಾಗೂ ಏರ್-ಸ್ಟ್ರಿಪ್ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಈ ವೇಳೆ ರಾಜ್ಯದ ಹಲವು ವಿಮಾನ ನಿಲ್ದಾಣ ಯೋಜನೆಗಳಿಗೆ ತಾಂತ್ರಿಕ ಅಡಚಣೆಗಳು ಎದುರಾಗಿವೆ. ಇನ್ನು ಕೆಲ ಯೋಜನೆಗಳಿಗೆ ಅಗತ್ಯ ಪ್ರಮಾಣದ ಭೂಮಿ ಸಿಕ್ಕಿಲ್ಲ. ಇವೆಲ್ಲವನ್ನೂ ತ್ವರಿತವಾಗಿ ಬಗೆಹರಿಸಬೇಕು. 219 ಕೋಟಿ ರೂ. ವೆಚ್ಚದಲ್ಲಿ, 322 ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಯಚೂರು ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಕಾಮಗಾರಿ ಆರಂಭಕ್ಕೆ ತಾಂತ್ರಿಕ ಅಡಚಣೆಗಳಿದ್ದು, ತಕ್ಷಣ ಅವುಗಳನ್ನು ಬಗೆಹರಿಸಬೇಕು. ಅಗತ್ಯ ಬಿದ್ದರೆ ದೆಹಲಿಗೂ ಹೋಗಿ ಬರಬೇಕು ಎಂದು ಖಡಕ್ ಸೂಚನೆ ರವಾನಿಸಿದರು.
ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣಕ್ಕೆ 7 ಸ್ಥಳಗಳು ಆಯ್ಕೆ; ಸರ್ಕಾರದಿಂದ ಗಂಭೀರ ಚರ್ಚೆ!
ರಾಯಚೂರು ವಿಮಾನ ನಿಲ್ದಾಣ ಯೋಜನೆಗೆ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಯೋಜನೆಗೆ ಬೇಕಾಗಿರುವ ಪರಿಸರ ಇಲಾಖೆಯ ಅನುಮತಿಯನ್ನು ಕೂಡ ಬೇಗನೆ ಪಡೆಯಬೇಕು. ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಚುರುಕಾಗಿ ಮುಗಿಸಬೇಕು. ಭೂಸ್ವಾಧೀನದ ಸಮಸ್ಯೆ ಇದ್ದು ತಕ್ಷಣ ಬಗೆಹರಿಸಬೇಕು ಎಂದು ತಿಳಿಸಿದರು.
ಉಡಾನ್ ಯೋಜನೆ ಸ್ಥಗಿತವಾಗಿರುವ ಕಾರಣ ಬೀದರ್ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ಈ ಸಂಬಂಧ ವಿಮಾನಯಾನ ಸಂಸ್ಥೆಗಳ ಜತೆ ಮಾತುಕತೆ ನಡೆಸಿ, ಪರ್ಯಾಯ ಕ್ರಮಗಳ ಬಗ್ಗೆ ತೀರ್ಮಾನಿಸಬೇಕು. ಪುನಃ ಉಡಾನ್ ಯೋಜನೆ ಚಾಲನೆಗೆ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಇನ್ನು ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ಅಗತ್ಯವಿರುವ ಅಗ್ನಿಶಾಮಕ ವಾಹನಗಳನ್ನು ಖರೀದಿಸಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ, ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕೂ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನಿಡೀದರು.
ಏರ್-ಸ್ಟ್ರಿಪ್ಸ್ ಅಭಿವೃದ್ಧಿಗೆ ಭೂಮಿ ಗುರುತಿಸಿ: ರಾಜ್ಯದಲ್ಲಿನ ಪ್ರವಾಸೋದ್ಯಮ ಪ್ರದೇಶಗಳನ್ನು ಪರಿಗಣಿಸಿ ಚಿಕ್ಕಮಗಳೂರು, ಕೊಡಗು, ಧರ್ಮಸ್ಥಳ ಮತ್ತು ಹಂಪಿಯಲ್ಲಿ ಏರ್-ಸ್ಟ್ರಿಪ್ ನಿರ್ಮಿಸುವುದಾಗಿ ಘೋಷಿಸಲಾಗಿದೆ. ಈ ಪೈಕಿ ಕೊಡಗು ಮತ್ತು ಧರ್ಮಸ್ಥಳದಲ್ಲಿ 140 ಎಕರೆ ಭೂಮಿ ಅಗತ್ಯವಿದೆ. ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತದ ಜತೆ ವ್ಯವಹರಿಸಿ, ಈ ಪ್ರಕ್ರಿಯೆ ಮುಗಿಸಬೇಕು ಎಂದರು.
ಬೆಂಗಳೂರು- ಬೀದರ್ ವಿಮಾನ ಸೇವೆ ಪುನಾರಂಭದ ಬಗ್ಗೆ 2 ವಾರದಲ್ಲಿ ವರದಿ ಕೊಡಿ; ಸಚಿವ ಎಂ.ಬಿ. ಪಾಟೀಲ
ಚಿಕ್ಕಮಗಳೂರಿನಲ್ಲಿ ಈ ಯೋಜನೆಗೆ ಈಗಾಗಲೇ 120 ಎಕರೆ ಜಾಗ ಗುರ್ತಿಸಲಾಗಿದೆ. ಆದರೆ ಇದಕ್ಕೆ ಇನ್ನೂ 17.5 ಎಕರೆ ಅಗತ್ಯವಿದ್ದು, ಇದನ್ನು ಗುರುತಿಸಲು ನಿರ್ದೇಶಿಸಲಾಗಿದೆ. ಜತೆಗೆ ಈ ಸಂಬಂಧ ಡಿಪಿಆರ್ ಸಿದ್ಧ ಪಡಿಸಲು ಪವನ್ ಹನ್ಸ್ ಕಂಪನಿಗೆ ಹೇಳಲಾಗಿದೆ. ಇನ್ನು ಕಾರವಾರದಲ್ಲಿ ಸಿವಿಲ್ ಎನ್ಕ್ಲೇವ್ ಅಭಿವೃದ್ಧಿಗೆ ಇನ್ನೂ 97 ಎಕರೆ ಭೂಮಿ ಬೇಕಾಗಿದೆ. ಇದಕ್ಕಾಗಿ ಈಗಾಗಲೇ 27.34 ಕೋಟಿ ರೂಪಾಯಿಗೂ ಹೆಚ್ಚು ಹಣ ಕೊಡಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ