
ಬೆಂಗಳೂರು : ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾರ್ಯವೈಖರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಧೋರಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ರಘು ಆಚಾರ್ ಅವರು ಪಕ್ಷದ ಸದಸ್ಯತ್ವ ಹಾಗೂ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ನೀಡುತ್ತಿಲ್ಲ. ಇನ್ನು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಅವರು ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ಚಿತ್ರದುರ್ಗಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ವರ್ಗಾಯಿಸಿಕೊಂಡಿದ್ದಾರೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಂದು ಬಾರಿಯೂ ಚಿತ್ರದುರ್ಗ ಜಿಲ್ಲೆಯ ಪ್ರತಿನಿಧಿಗಳ ಸಭೆ ನಡೆಸಿಲ್ಲ. ಅಲ್ಲದೆ ಕಾಂಗ್ರೆಸ್ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು. ಯೋಜನೆಗೆ ಆರ್ಥಿಕ ಅನುಮೋದನೆ ಮಾತ್ರ ಬಾಕಿ ಉಳಿದಿತ್ತು. ಇದೀಗ ಚಿತ್ರದುರ್ಗಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ವರ್ಗಾಯಿಸಿಕೊಂಡು ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಚಿತ್ರದುರ್ಗಕ್ಕೆ ಅನ್ಯಾಯ ಮಾಡಿದ್ದಾರೆ. ವೈದ್ಯಕೀಯ ಕಾಲೇಜು ಚಿತ್ರದುರ್ಗದಲ್ಲಿ ನಿರ್ಮಾಣವಾಗಿದ್ದರೆ 250 ಹಾಸಿಗೆಗಳ ಆಸ್ಪತ್ರೆ ಹೊಸದಾಗಿ ಶುರುವಾಗುತ್ತಿತ್ತು. ನಮ್ಮ ಜನರಿಗೆ ಈ ರೀತಿಯ ಅನ್ಯಾಯ ಮಾಡಿದರೆ ನೋಡಿಕೊಂಡು ಸುಮ್ಮನಿರಲಾಗುವುದಿಲ್ಲ ಎಂದು ಹೇಳಿದರು.
ಇಬ್ಬರ ಧೋರಣೆ ಖಂಡಿಸಿ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮನಸ್ಸು ಮಾಡಿರುವೆ. ಈ ಬಗ್ಗೆ ಮಂಗಳವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಿದ್ದೇನೆ. ಅನಂತರ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭೇಟಿ ಮಾಡಿ ಮಾತನಾಡುವೆ. ಇದಾದ ನಂತರ ಕೆಪಿಸಿಸಿಗೆ ಕಚೇರಿಗೆ ಮಂಗಳವಾರ ಆಗಮಿಸಲಿರುವ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲು ತೀರ್ಮಾನಿಸಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ