ಲಂಚ ಪ್ರಕರಣದ ಸಂಬಂಧ ರಾಜ್ಯ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಮಾ. 9ರಂದು ಲೋಕಾಯುಕ್ತ ಪೊಲೀಸರ ಮುಂದೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಮಾಜಿ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಹಾಜರಾಗಲಿದ್ದಾರೆ.
ಬೆಂಗಳೂರು (ಮಾ.09): ಲಂಚ ಪ್ರಕರಣದ ಸಂಬಂಧ ರಾಜ್ಯ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಮಾ. 9ರಂದು ಲೋಕಾಯುಕ್ತ ಪೊಲೀಸರ ಮುಂದೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಮಾಜಿ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಹಾಜರಾಗಲಿದ್ದಾರೆ.
ಜಾಮೀನು ಆದೇಶ ಲಭ್ಯವಾದ 48 ತಾಸಿನಲ್ಲಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ನ್ಯಾಯಾಲಯವು ಮಂಗಳವಾರ ಷರತ್ತು ವಿಧಿಸಿತ್ತು. ಅಂತೆಯೇ ನಗರದ ಅಂಬೇಡ್ಕರ್ ವಿಧಿಯಲ್ಲಿರುವ ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಗುರುವಾರ ಬೆಳಗ್ಗೆ 10.30 ಗಂಟೆಗೆ ಪ್ರಕರಣದ ತನಿಖಾಧಿಕಾರಿ ಬಾಲಾಜಿ ಅವರ ಮುಂದೆ ಶಾಸಕರು ಹಾಜರಾಗಲಿದ್ದಾರೆ. ಈಗಾಗಲೇ ಶಾಸಕರ ವಿಚಾರಣೆಗೆ ಅಗತ್ಯವಾದ ಪ್ರಶ್ನಾವಳಿಯನ್ನು ಕೂಡಾ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ತನಿಖಾಧಿಕಾರಿಗಳು ಸಿದ್ಧಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಬದ್ಧ: ಮಾಡಾಳು ವಿರೂಪಾಕ್ಷಪ್ಪ
ವಿಚಾರಣೆಗೆ ಹಾಜರಾಗಲು ವಿರುಪಾಕ್ಷಪ್ಪ ಅವರು ಸ್ವಕ್ಷೇತ್ರ ಚನ್ನಗಿರಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ತಮ್ಮ ಮನೆಯಲ್ಲಿ ಪತ್ತೆಯಾದ 6.1 ಕೋಟಿ ರು ಹಣಕ್ಕೆ ಲೆಕ್ಕ ನೀಡಲು ಅವರು ಅಗತ್ಯವಾದ ದಾಖಲೆಗಳನ್ನು ಕೂಡಾ ತಂದಿದ್ದು, ಗುರುವಾರ ತನಿಖಾಧಿಕಾರಿಗಳಿಗೆ ಹಣದ ಲೆಕ್ಕವನ್ನು ಒದಗಿಸಲಿದ್ದಾರೆ ಎಂದು ಗೊತ್ತಾಗಿದೆ.
ಕೆಎಸ್‌ಡಿಎಲ್ ಕಚೇರಿ ಮೇಲೆ ದಾಳಿ: ಲಂಚ ಪ್ರಕರಣದ ತನಿಖೆ ಮುಂದುವರೆಸಿರುವ ಲೋಕಾಯುಕ್ತ ಪೊಲೀಸರು, ಬುಧವಾರ ಮತ್ತೆ ಕೆಎಸ್‌ಡಿಎಲ್ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಕೆಎಸ್‌ಡಿಎಲ್‌ನಲ್ಲಿ ವಿರೂಪಾಕ್ಷಪ್ಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕರೆದಿದ್ದ ಟೆಂಡರ್‌ಗಳ ಬಗ್ಗೆ ನಿಗಮದ ಅಧಿಕಾರಿಗಳಿಂದ ಲೋಕಾಯುಕ್ತ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಈ ಸಂಬಂಧ ಕೆಲ ದಾಖಲೆಗಳನ್ನು ಕೂಡಾ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆಯಲ್ಲಿ ಸಿಕ್ಕಿದ್ದು ನಮ್ಮದೇ ಹಣ, ದಾಖಲೆ ಇದೆ: ಮಾಡಾಳು ವಿರೂಪಾಕ್ಷಪ್ಪ
ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಕೆ ಸಾಧ್ಯತೆ?: ಲಂಚ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪನವರಿಗೆ ಹೈಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಂಬಂಧ ಕೂಡಾ ಲೋಕಾಯುಕ್ತ ಪೊಲೀಸರು ಚಿಂತನೆ ನಡೆಸಿದ್ದಾರೆ. ಈ ಸಂಬಂಧ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರೊಂದಿಗೆ ಸಹ ಪೊಲೀಸರು ಚರ್ಚೆ ನಡೆಸಿದ್ದಾರೆ. ಅಲ್ಲದೆ ಮಾ.17 ರಂದು ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್‌ಗೆ ಪ್ರಬಲವಾದ ಆಕ್ಷೇಪಣೆ ಸಲ್ಲಿಕೆಗೆ ಕೂಡಾ ಪೊಲೀಸರು ಸಿತೆ ಮಾಡಿಕೊಳ್ಳುತ್ತಿದ್ದಾರೆ.