
ಪುತ್ತೂರು (ಜೂ.4): ಪುತ್ತೂರಿನ ಹಿರಿಯರಾದ, ವಿಶ್ವ ಹಿಂದೂ ಪರಿಷತ್ ಮುಖಂಡ ಯು. ಪೂವಪ್ಪ (80) ಇರುವಲ್ಲಿಗೆ ಭಾನುವಾರ ರಾತ್ರಿ ಹೋಗಿರುವ ಪೊಲೀಸರು ಅವರು ಉಟ್ಟ ಬಟ್ಟೆಯಲ್ಲಿಯೆ ಫೊಟೋ ಸೆರೆ ಹಿಡಿದ ಘಟನೆ ನಡೆದಿದೆ.
ವಿಶ್ವ ಹಿಂದೂ ಪರಿಷತ್ ನ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ಯು. ಪೂವಪ್ಪ ಅವರು ಕಲ್ಲಾರೆಯಲ್ಲಿನ ತಮ್ಮ ಮನೆ ಸಮೀಪದ ಶ್ರೀ ರಾಘವೇಂದ್ರ ಮಠದಲ್ಲಿ ಮಲಗಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಪೊಲೀಸರು ಪೂವಪ್ಪ ಅವರಲ್ಲಿ ನಿಮ್ಮ ಫೋಟೊ ತೆಗೆಯಬೇಕೆಂದು ಹೇಳಿದ್ದಾರೆ. ಈ ವೇಳೆ ಪೊಲೀಸರಿಗೆ ಪ್ರಶ್ನೆ ಹಾಕಿದ ಪೂವಪ್ಪ ಅವರಲ್ಲಿ, ಮೇಲಾಧಿಕಾರಿಗಳ ಆದೇಶ ಇದೆ ಹಾಗಾಗಿ ಫೋಟೊ ತೆಗೆಯಲಾಗುತ್ತಿದೆ ಎಂದು ಪೊಲೀಸರು ಹೇಳಿದರಂತೆ.
ಆಗ ಪೂವಪ್ಪ ಅವರು ‘ನನ್ನ ಫೋಟೊ ತೆಗೆದು ಯಾವ ಪ್ರಯೋಜನವಿಲ್ಲ. ಮೊದಲು ಎರಡೂ ಸಮುದಾಯವನ್ನ ಒಟ್ಟು ಸೇರಿಸಿ ದ.ಕ. ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಮಾತುಕತೆ ನಡೆಸಿ ಅದು ಬಿಟ್ಟು ನಮ್ಮ ಫೋಟೊ ತೆಗೆದುಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ನನಗೆ 80 ವರ್ಷ ಆಯಿತು ಇನ್ನು ನಾನು ಹೋಗಿ ಗಲಾಟೆ ಮಾಡ್ಲಿಕೆ ಸಾಧ್ಯ ಆಗುತ್ತಾ? ವಿಚಾರಣೆ ಹಿಂದೂಗಳಿಗೆ ಮಾತ್ರ ಆದ್ರೆ ಕಷ್ಟ, ಬದಲಾಗಿ ಎರಡೂ ಕಡೆಯವರನ್ನ ಕರೆದು ವಿಚಾರಿಸಿ’ ಎಂದು ಬುದ್ಧಿವಾದ ಹೇಳಿದ್ದಾರೆ. ಪೊಲೀಸರು ನನಗೆ ಗೌರವ ಕೊಟ್ಟು ವಿಚಾರಿಸಿದ್ದಾರೆ, ಬಳಿಕ ಪೊಲೀಸರಿಗೂ ಸಲಹೆ ಕೊಟ್ಟಿದೇನೆ. ಸಾಧ್ಯ ಆಗುವುದಾದ್ರೆ ಎರಡೂ ಸಮುದಾಯವನ್ನ ಒಟ್ಟು ಸೇರಿಸಿ ವಿಚಾರಣೆ ಮಾಡಿ ಎಂದಿದ್ದೇನೆ. ನಾನು ಪೊಲೀಸರು ಬರುವಾಗ ಒಂದು ಟವಲ್ ಸುತ್ತಿಕೊಂಡಿದ್ದೆ. ಆ ಬಟ್ಟೆಯಲ್ಲಿ ಫೋಟೊ ತೆಗೆದುಕೊಂಡು ಪೊಲೀಸರು ಹೋಗಿದ್ದಾರೆ ಎಂದು ಪೂವಪ್ಪ ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಕೆಲವೊಂದು ಮನೆಗೆ ಪೊಲೀಸರು ರಾತ್ರಿ ಹೊತ್ತಿನಲ್ಲಿ ಹೋಗಿ ಮನೆಯವರನ್ನು ಎಬ್ಬಿಸಿ ಮನೆಯ ಮುಂಬಾಗ ನಿಲ್ಲಿಸಿ ಅವರ ಜಿಪಿಎಸ್ ಫೋಟೋ ತೆಗೆಯುವ ಪ್ರಕ್ರಿಯೆ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ