ಕೊರೋನಾ ಚಿಕಿತ್ಸೆ: ಉಲ್ಟಾ ಹೊಡೆದ ಖಾಸಗಿ ಆಸ್ಪತ್ರೆಗಳು

By Kannadaprabha NewsFirst Published Jul 13, 2020, 7:38 AM IST
Highlights

ಸರ್ಕಾರಕ್ಕೆ 2000 ಹಾಸಿಗೆ ಬಿಡಲಾಗದು| ಬಿಟ್ಟು ಕೊಡಲೇಬೇಕೆಂದ್ರೆ ಸರ್ಕಾರವೇ ವೈದ್ಯರು, ನರ್ಸ್‌ ನೇಮಿಸಿಕೊಳ್ಳಲಿ| ಸಚಿವ ಸುಧಾಕರ್‌ ಎದುರು ಈ ರೀತಿ ಹೇಳಿದ ಆಸ್ಪತ್ರೆಗಳು| ಈ ರೀತಿ ಮಾಡಿದರೆ ಕ್ರಿಮಿನಲ್‌ ದಾವೆ: ಸಚಿವರ ಎಚ್ಚರಿಕೆ| ಕೊರೋನಾ ಚಿಕಿತ್ಸೆಗೆ 2000 ಹಾಸಿಗೆಗೆ ಸೂಚಿಸಿರುವ ಸರ್ಕಾರ| 

ಬೆಂಗಳೂರು(ಜು.13): ಸರ್ಕಾರ ಕಳುಹಿಸುವ ಕೊರೋನಾ ಸೋಂಕಿತರ ಚಿಕಿತ್ಸೆಗೆ 2000 ಹಾಸಿಗೆ ಒದಗಿಸಲು ಒಪ್ಪಿಕೊಂಡಿದ್ದ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಈಗ ಉಲ್ಟಾ ಹೊಡೆದಿರುವದಲ್ಲದೆ ಸರ್ಕಾರದೊಂದಿಗೆ ವಾಗ್ವಾದ ನಡೆಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಖಾಸಗಿ ಆಸ್ಪತ್ರೆಗಳ ಸಭೆಯಲ್ಲಿ ಈ ಘಟನೆ ನಡೆದಿದ್ದು, ‘ನಾವು ಶೇ.50 ರಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡುತ್ತೇವೆ. ಆದರೆ, ಸರ್ಕಾರಕ್ಕೇ 2000 ಹಾಸಿಗೆ ಬಿಟ್ಟು ಕೊಡಲು ಆಗುವುದಿಲ್ಲ. ಬದಲಿಗೆ ನೇರವಾಗಿ ಬರುವ ಕೋವಿಡ್‌ ಸೋಂಕಿತರನ್ನು ನಾವೇ ದಾಖಲಿಸಿಕೊಂಡು ಅಲ್ಲಿ ಚಿಕಿತ್ಸೆ ನೀಡುತ್ತೇವೆ. ಒಂದು ವೇಳೆ ಸರ್ಕಾರ 2000 ಹಾಸಿಗೆ ಕೊಡಲೇಬೇಕೆಂದು ಒತ್ತಡ ಹೇರಿದರೆ ಹಾಸಿಗೆ ಮಾತ್ರ ನೀಡುತ್ತೇವೆ. ಚಿಕಿತ್ಸೆಗೆ ಬೇಕಾದ ವೈದ್ಯರು, ನರ್ಸ್‌ಗಳು ಹಾಗೂ ಇತರೆ ಆರೋಗ್ಯ ಸಿಬ್ಬಂದಿಗಳನ್ನು ಸರ್ಕಾರವೇ ನೇಮಿಸಿಕೊಳ್ಳಬೇಕು ಎಂದು ಬೆದರಿಕೆ ಹಾಕಿವೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ನಂಬಲರ್ಹ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಕೋವಿಡ್‌ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹಿಂಜರಿದರೆ ಕ್ರಮ: ಸಚಿವ ಶೆಟ್ಟರ್‌

ಖಾಸಗಿ ಆಸ್ಪತ್ರೆಗಳ ಮಾಲೀಕರ ಒಕ್ಕೂಟದ ಪ್ರತಿನಿಧಿಗಳ ಈ ವಾದಕ್ಕೆ ಸಚಿವ ಸುಧಾಕರ್‌ ಅವರು ಕೂಡ ತೀವ್ರ ಗರಂ ಆಗಿ, ‘ಸರ್ಕಾರದ ಆದೇಶ ಹಾಗೂ ಮುಖ್ಯಮಂತ್ರಿಗಳೇ ಸಭೆ ನಡೆಸಿ ಸೂಚಿಸಿದರೂ ಈವರೆಗೆ ಕೇವಲ ಸುಮಾರು 300 ಹಾಸಿಗೆಯನ್ನು ಸರ್ಕಾರಕ್ಕೆ ನೀಡಿದ್ದೀರಿ. ನಿಗದಿತ 2000 ಹಾಸಿಗೆ ಬಿಟ್ಟು ಕೊಡದಿದ್ದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುತ್ತದೆ’ ಎಂಬ ಖಡಕ್‌ ಎಚ್ಚರಿಕೆಯನ್ನೂ ನೀಡಿದ್ದಾರೆ.

ಅದಕ್ಕೂ ಬಗ್ಗದ ಒಕ್ಕೂಟದ ಪದಾಧಿಕಾರಿಗಳು, ‘ನಮ್ಮಲ್ಲಿ ಈಗಾಗಲೇ ಸುಮಾರು 1700 ರಷ್ಟು ಹಾಸಿಗೆಗಳು ಕೋವಿಡ್‌ ಸೋಂಕಿತರಿಂದಲೇ ಭರ್ತಿಯಾಗಿವೆ. ಇದರಲ್ಲಿ ಸರ್ಕಾರದಿಂದ ಕಳುಹಿಸಿರುವ ನೂರಾರು ರೋಗಿಗಳೂ ಇದ್ದಾರೆ. ಈಗ ಸರ್ಕಾರಕ್ಕೆ ಪ್ರತ್ಯೇಕವಾಗಿ 2000 ಹಾಸಿಗೆ ನೀಡಬೇಕೆಂದರೆ ಈಗಾಗಲೇ ದಾಖಲಾಗಿರುವ ಕೋವಿಡ್‌ ರೋಗಿಗಳನ್ನು ಎಲ್ಲಿಗೆ ಕಳುಹಿಸೋಣ? ಕೋವಿಡೇತರ ಸಮಸ್ಯೆಗಳಿರುವ ರೋಗಿಗಳ ಚಿಕಿತ್ಸೆಗೆ ಹಾಸಿಗೆ ಕೊರತೆಯುಂಟಾಗಲಿದೆ. ಒಂದು ವೇಳೆ ಸರ್ಕಾರ ಹಟಕ್ಕೆ ಬಿದ್ದರೆ ನಾವು ನಮ್ಮ ಆಸ್ಪತ್ರೆಯ ಹಾಸಿಗೆಗಳನ್ನು ಬಿಟ್ಟುಕೊಡುತ್ತೇವೆ. ಆದರೆ, ನಮ್ಮ ವೈದ್ಯರು, ನರ್ಸ್‌ ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ನೀಡಲು ಸಾಧ್ಯವಿಲ್ಲ. ಸರ್ಕಾರವೇ ನೇಮಿಸಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಸರ್ಕಾರ ಹೇಳಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ 2000 ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಟ್ಟಿದ್ದೇವೆ. ಆದರೆ, ಆ ಹಾಸಿಗೆಗಳನ್ನು ಸರ್ಕಾರಕ್ಕೇ ಬಿಟ್ಟು ಕೊಡುವುದು ಅಂತ ಅಲ್ಲ. ಈಗಾಗಲೇ ಸುಮಾರು 1600 ಕೋವಿಡ್‌ ರೋಗಿಗಳು ನಮ್ಮಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸರ್ಕಾರಕ್ಕೂ ಗೊತ್ತಿದೆ. ಸರ್ಕಾರವೇನಾದರೂ 2000 ಹಾಸಿಗೆ ಬಿಟ್ಟುಕೊಡಲೇಬೇಕು ಇಲ್ಲದಿದ್ದರೆ ಕ್ರಿಮಿನಲ್‌ ಕೇಸು ಹಾಕುತ್ತೇವೆ ಎಂದರೆ ಇರುವ ರೋಗಿಗಳನ್ನು ಖಾಲಿ ಮಾಡಿಸಿಕೊಡಬೇಕು ಅಷ್ಟೆ. ಬೇರೆ ದಾರಿ ಇಲ್ಲ ಎಂದು ಖಾಸಗಿ ಆಸ್ಪತ್ರೆಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ಡಾ.ರವೀಂದ್ರ ಅವರು ತಿಳಿಸಿದ್ದಾರೆ. 

click me!