
ಮಂಡ್ಯ (ನ.13) : ತಮ್ಮ ಮನೆ ಮುಂದೆ ಚರಂಡಿ ನಿರ್ಮಿಸುವಂತೆ ಗ್ರಾಮ ಪಂಚಾಯತ್‌ಗೆ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಎಷ್ಟು ಮನವಿ ಮಾಡಿದರೂ ಪ್ರಯೋಜನವಾಗದೆ, ಕೊನೆಗೆ ಪ್ರಧಾನಿಗೆ ಪತ್ರ ಬರೆದು ಚರಂಡಿ ನಿರ್ಮಿಸಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ.
ತಮ್ಮ ಮನೆ ಮುಂದೆ ಅಶುಚಿತ್ವ ತಾಂಡವವಾಡುತ್ತಿದ್ದು, ಚರಂಡಿ ನಿರ್ಮಿಸಿಕೊಡುವಂತೆ ಮಂಡ್ಯ ತಾಲೂಕಿನ ಬೂದನೂರು ಗ್ರಾಮದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಗ್ರಾಮ ಪಂಚಾಯತ್‌ಗೆ ಕೋರಿದ್ದರು. ಗ್ರಾ.ಪಂ. ಅಧಿಕಾರಿಗಳು ಸ್ಪಂದಿಸದಿದ್ದಾಗ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಪ್ರಧಾನಿ ಕಾರ್ಯಾಲಯ ತಕ್ಷಣ ಇದಕ್ಕೆ ಸ್ಪಂದಿಸಿದೆ. ಚಂದ್ರಶೇಖರ್ ಅವರ ಮನೆಯ ಮುಂದೆ ಚರಂಡಿ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಅದರನ್ವಯ ನ.9ರಿಂದ ‘ಸ್ವಚ್ಛ ಭಾರತ್ ಮಿಷನ್ ಯೋಜನೆ’ ಅಡಿ ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.
ಉಡುಪಿಯಲ್ಲಿ ಇಸ್ರೋ ಘಟಕ ಸ್ಥಾಪಿಸುವಂತೆ ಪ್ರಧಾನಿ ಮೋದಿಗೆ ಕ್ಯಾಂಪ್ಕೊ ಪತ್ರ; ಯಾಕೆ ಗೊತ್ತಾ?
ಜುಲೈ 5ರಂದು ಪತ್ರ ಬರೆದಿದ್ದರು:
ಮಂಡ್ಯ ತಾಲೂಕು ಬೂದನೂರು ಗ್ರಾಮದ ಸಾಫ್ಟ್‌ವೇರ್ ಎಂಜಿನಿಯರ್ ಚಂದ್ರಶೇಖರ್ ಅವರ ಮನೆಯ ಎದುರು ಚರಂಡಿ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಅಶುಚಿತ್ವ ತಾಂಡವವಾಡುತ್ತಿತ್ತು. ಇದರಿಂದ ಬೇಸರಗೊಂಡಿದ್ದ ಅವರು ಹಲವಾರು ಬಾರಿ ಗ್ರಾಮ ಪಂಚಾಯತಿಗೆ ಮನವಿ ಪತ್ರ ಸಲ್ಲಿಸಿ, ಚರಂಡಿ ನಿರ್ಮಿಸಿಕೊಡುವಂತೆ ಕೋರಿದ್ದರು. ಆದರೆ, ಅವರ ಮನವಿಗೆ ಪಂಚಾಯತಿ ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದರು. ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಅವರು ಮೇಲಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರು.
ಆದರೆ, ಅವರ ಮನವಿಗೆ ಮೇಲಧಿಕಾರಿಗಳಿಂದಲೂ ಸೂಕ್ತ ಸ್ಪಂದನೆ ದೊರಕದಿದ್ದಾಗ ಬೇಸತ್ತು ಜುಲೈ 5ರಂದು ಪ್ರಧಾನಿ ಕಚೇರಿಗೆ ಆನ್ಲೈನ್ ಮೂಲಕ ಪತ್ರ ಬರೆದು ದೂರು ಸಲ್ಲಿಸಿದ್ದರು. ಅವರ ಪತ್ರಕ್ಕೆ ಪ್ರಧಾನಿ ಕಚೇರಿ ಕೂಡಲೇ ಸ್ಪಂದಿಸಿದ್ದು, ಚಂದ್ರಶೇಖರ್ ಅವರ ಮನೆಯ ಮುಂದೆ ಚರಂಡಿ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿಗೆ ಸೂಚನೆ ನೀಡಿತ್ತು. ಬಳಿಕ ಕ್ರಮಕ್ಕೆ ಮುಂದಾದ ಸರ್ಕಾರದ ಅಧೀನ ಕಾರ್ಯದರ್ಶಿಯವರು, ‘ಸ್ವಚ್ಛ ಭಾರತ್ ಮಿಷನ್ ಯೋಜನೆ’ ಅಡಿ ಚರಂಡಿ ನಿರ್ಮಿಸಿ ವರದಿ ನೀಡುವಂತೆ ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದರು. ಇದರಿಂದ ಎಚ್ಚೆತ್ತ ಬೂದನೂರು ಗ್ರಾಮ ಪಂಚಾಯತಿ ಅಧಿಕಾರಿಗಳು ನ.9ರಿಂದ ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ.
ಮೂಲಭೂತ ಸೌಲಭ್ಯವಿಲ್ಲದೆ ಮಂಕಾದ ಮಲೆನಾಡ ಕುಗ್ರಾಮ: ಮನನೊಂದ ಗ್ರಾಮಸ್ಥರಿಂದ ಪ್ರಧಾನಿ ಮೋದಿಗೆ ಪತ್ರ
ಮತ್ತೆ ಮೋದಿ ಮೊರೆ ಹೋಗಲು ನಿರ್ಧಾರ:
ಈ ಮಧ್ಯೆ, ಪ್ರಧಾನಿ ಕಚೇರಿ ಮತ್ತು ಸರ್ಕಾರದ ಅಧೀನ ಕಾರ್ಯದರ್ಶಿ ಅವರಿಂದ ಚರಂಡಿ ನಿರ್ಮಾಣಕ್ಕೆ ಸೂಚನೆ ಬಂದ ನಂತರವೂ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸುತ್ತಿಲ್ಲ. ಮನೆಯ ಮುಂದೆ 30 ಮೀಟರ್ ಚರಂಡಿ ನಿರ್ಮಾಣಕ್ಕೆ ಬದಲಾಗಿ ಕೇವಲ 10 ಮೀಟರ್ ಚರಂಡಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಹಾಗೂ ವೈಜ್ಞಾನಿಕ ಚರಂಡಿ ನಿರ್ಮಾಣಕ್ಕಾಗಿ ಆಗ್ರಹಿಸಿ ಮತ್ತೆ ಪ್ರಧಾನಿ ಕಾರ್ಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ