
ಬೆಂಗಳೂರು/ಬಳ್ಳಾರಿ : ‘ಇ.ಡಿ. ಡೀಲ್’ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಕೃತ್ಯ ಬೆಳಕಿಗೆ ಬಂದ ನಂತರ ಅಜ್ಞಾತರಾಗಿರುವ ಬಳ್ಳಾರಿ ಗಣಿ ಧಣಿ ಜನಾರ್ದನ ರೆಡ್ಡಿ ಹಾಗೂ ಅವರು ಪಡೆದಿದ್ದಾರೆ ಎನ್ನಲಾದ 57 ಕೆ.ಜಿ. ಚಿನ್ನದ ಪತ್ತೆಗೆ ಗುರುವಾರ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ತೀವ್ರವಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ನಡುವೆ ಪ್ರಕರಣದ ಕುರಿತು ಸಿಸಿಬಿ ವಿಚಾರಣೆ ಎದುರಿಸಿದ ಆ್ಯಂಬಿಡೆಂಟ್ ಕಂಪನಿ ಮಾಲೀಕ ಸೈಯದ್ ಅಹಮದ್ ಫರೀದ್ ಇನ್ನಷ್ಟುಕೆಲವು ಪ್ರಭಾವಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ. ಇದರ ಬೆನ್ನಲ್ಲೇ ಈ ತಿಂಗಳ 15 ರೊಳಗೆ ವಿಚಾರಣೆ ಹಾಜರಾಗುವಂತೆ ರೆಡ್ಡಿ, ಅವರ ಆಪ್ತರಾದ ಅಲಿಖಾನ್ ಹಾಗೂ ಬ್ರಿಜೇಶ್ ರೆಡ್ಡಿಗೆ ಸಿಸಿಬಿ ನೋಟಿಸ್ ಜಾರಿಗೊಳಿಸಿದೆ.
ತಮ್ಮ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿರುವ ತನಿಖೆ ಮೇಲೆ ಪ್ರಭಾವ ಬೀರಲು ಆ್ಯಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಜತೆ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಸಹಾಯಕ ಅಲಿಖಾನ್ ವ್ಯವಹಾರ ಕುದುರಿಸಿದ್ದರು. ಇದಕ್ಕೆ ರೆಡ್ಡಿ ಆಪ್ತ ಸ್ನೇಹಿತ ರಿಯಲ್ ಎಸ್ಟೇಟ್ ಉದ್ಯಮಿ ಬ್ರಿಜೇಶ್ ರೆಡ್ಡಿ ಮಧ್ಯವರ್ತಿ ಆಗಿದ್ದರು ಎಂಬ ಆರೋಪ ಬಂದಿದೆ.
ಈ ಕೃತ್ಯ ಬೆಳಕಿಗೆ ಬಂದ ನಂತರ ಬಂಧನ ಭೀತಿಯಿಂದ ರೆಡ್ಡಿ ಅಜ್ಞಾತವಾಗಿದ್ದರೆ, ಅವರ ಆಪ್ತ ಸಹಾಯಕ ಅಲಿಖಾನ್ ನ್ಯಾಯಾಲಯದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ. ಇನ್ನುಳಿದ ಆರೋಪಿಗಳು ಸಹ ಸಿಸಿಬಿ ಬಂಧನಕ್ಕೊಳಗಾಗಿ ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.
ಹೈದರಾಬಾದ್‌ನಲ್ಲಿ ಬೀಡು ಬಿಟ್ಟಸಿಸಿಬಿ: ಡೀಲ್ ಪ್ರಕರಣದಲ್ಲಿ ರೆಡ್ಡಿ ಬೆನ್ನು ಹತ್ತಿರುವ ಸಿಸಿಬಿ ತಂಡವು, ಗುರುವಾರ ಸಹ ರೆಡ್ಡಿ ಸ್ನೇಹಿತರ ಮನೆಗಳು ಹಾಗೂ ಕೆಲವು ಹೋಟೆಲ್‌ಗಳಲ್ಲಿ ಹುಡುಕಾಟ ನಡೆಸಿದೆ. ಮತ್ತೊಂದು ತನಿಖಾ ತಂಡವು ಬಳ್ಳಾರಿಯಲ್ಲಿರುವ ರೆಡ್ಡಿ ನಿವಾಸ ಹಾಗೂ ಅವರ ಕಚೇರಿಗಳಲ್ಲಿ ದಿನವೀಡಿ ತಪಾಸಣೆ ನಡೆಸಿತು. ಆದರೆ ಎಲ್ಲೂ ಸಹ ರೆಡ್ಡಿ ಇರುವಿಕೆ ಸುಳಿವು ಸಿಗದೆ ಪೊಲೀಸರು ಬೆವರು ಹರಿಸಿದ್ದಾರೆ.
ಹೈದರಾಬಾದ್‌ನ ನ್ಯಾಯಾಲಯಗಳಿಗೆ ಸಹ ಭೇಟಿ ನೀಡಿದ ಅಧಿಕಾರಿಗಳು, ಟ್ರಾನ್ಸಿಟ್ ಬೇಲ್‌ಗೆ ಅರ್ಜಿ ಸಲ್ಲಿಸಿರುವ ಶಂಕೆ ಮೇರೆಗೆ ಕೋರ್ಟ್‌ಗಳಲ್ಲಿ ಮಾಹಿತಿ ಕಲೆ ಹಾಕಿದ್ದಾರೆ.
ಬಳ್ಳಾರಿಯಲ್ಲೂ ದಾಳಿ: ಬೆಳಗ್ಗೆ ಬಳ್ಳಾರಿಯಲ್ಲಿ ರೆಡ್ಡಿ ಮನೆ ಮೇಲೆ ದಾಳಿ ನಡೆಸಿ ಎಸಿಪಿ ಮಂಜುನಾಥ ಚೌಧರಿ ನೇತೃತ್ವದ ತಂಡವು, ಸಂಜೆವರೆಗೆ ಮನೆಯಲ್ಲಿ ಅಲ್ಮೇರಾ, ಲಾಕರ್, ಗೋಡೆ ಹೀಗೆ ಪ್ರತಿಯೊಂದು ಕಡೆ ಕೂಲಂಕಷವಾಗಿ ಶೋಧಿಸಿತು. ಅಲ್ಲದೆ ಇಡೀ ಶೋಧ ಕಾರ್ಯಾಚರಣೆಯನ್ನು ಅವರು ವಿಡಿಯೋ ಚಿತ್ರೀಕರಣ ಸಹ ಮಾಡಿಕೊಂಡಿದ್ದಾರೆ.
ಇದೇ ವೇಳೆ ಮನೆಯಲ್ಲಿದ್ದ ರೆಡ್ಡಿ ಪತ್ನಿ ಅರುಣಾ, ಅವರ ಮಾವ ಪರಮೇಶ್ವರ್ ರೆಡ್ಡಿ, ಅತ್ತೆ ನಾಗರತ್ನ ಹಾಗೂ ದಾಳಿ ವಿಚಾರ ತಿಳಿದು ಆಗಮಿಸಿದ ಶಾಸಕ ಶ್ರೀರಾಮುಲು ಅವರನ್ನು ಸಹ ಸಿಸಿಬಿ ಪ್ರಶ್ನಿಸಿ ಹೇಳಿಕೆ ಪಡೆದಿದೆ. ಬಳ್ಳಾರಿಯಲ್ಲಿನ ರೆಡ್ಡಿ ಮನೆಯಲ್ಲಿ ಕೆಲವು ದಾಖಲೆಗಳು ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ಹೆಚ್ಚಿನ ತನಿಖೆ ಸಲುವಾಗಿ ಬೆಂಗಳೂರಿಗೆ ಕಳುಹಿಸಿದ್ದಾರೆ. ಇದೇ ಪ್ರಕರಣ ಸಂಬಂಧ ಬುಧವಾರ ರಾತ್ರಿ ಬೆಂಗಳೂರಿನಲ್ಲಿರುವ ರೆಡ್ಡಿ ಪಾರಿಜಾತ ನಿವಾಸ ಹಾಗೂ ಅವರ ಆಪ್ತ ಸಹಾಯಕ ಅಲಿಖಾನ್ ಮನೆಗಳಲ್ಲಿ ತನಿಖಾ ತಂಡಗಳು ಜಾಲಾಡಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ