
ಬೆಂಗಳೂರು(ಸೆ.17): ಬಿಜೆಪಿ ಟಿಕೆಟ್ ಹೆಸರಿನಲ್ಲಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ತಂಡದ ವಂಚನೆ ಕೃತ್ಯವನ್ನು ಆರೋಪಿಗಳ ಸಮಕ್ಷಮದಲ್ಲಿ ಸಿಸಿಬಿ ಮರುಸೃಷ್ಟಿಸಿ ಹೇಳಿಕೆ ಪಡೆದಿದೆ.
ವಂಚನೆ ಕೃತ್ಯದಲ್ಲಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯನ ಪಾತ್ರಧಾರಿಯಾಗಿದ್ದ ಚೆನ್ನನಾಯ್ಕ್ ಅಲಿಯಾಸ್ ಕಬಾಬ್ ನಾಯ್ಕ್‌ನನ್ನು ನಗರದ ಕುಮಾರಕೃಪಾ ಸರ್ಕಾರಿ ಅತಿಥಿ ಗೃಹಕ್ಕೆ ಕರೆದೊಯ್ದು ಪೊಲೀಸರು ಮಹಜರು ನಡೆಸಿದ್ದಾರೆ. ಆ ವೇಳೆ ಅಂದು ತಾನು ಹೇಗೆ ಬಿಜೆಪಿ ನಾಯಕನ ರೀತಿ ನಟಿಸಿದೆ ಎಂಬುದುನ್ನು ನಾಯ್ಕ್ ಮತ್ತೆ ನಟಿಸಿ ತೋರಿಸಿದ್ದಾನೆ. ಬಳಿಕ ವಿಜಯನಗರದ ಬಾಪೂಜಿ ಲೇಔಟ್‌ನಲ್ಲಿರುವ ಹಾಲಶ್ರೀ ಮನೆಗೆ ತೆರಳಿ ಪೊಲೀಸರು ಮಹಜರ್ ನಡೆಸಿದ್ದಾರೆ.
Chaitra Kundapur Fraud Case: ಚೈತ್ರಾಳ 1 ಕೋಟಿ ಆಸ್ತಿ, 65 ಲಕ್ಷ ಚಿನ್ನ, 40 ಲಕ್ಷ ವಶ!
ಕುಮಾರಕೃಪಾ ಸರ್ಕಾರಿ ಅತಿಥಿ ಗೃಹದಲ್ಲಿ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ನಾಯ್ಕ್‌ನನ್ನು ಕೇಂದ್ರ ಬಿಜಿಪಿ ನಾಯಕ ಎಂದು ಚೈತ್ರಾ ತಂಡ ಪರಿಚಿಯಿಸಿತ್ತು. ಆಗ ಪೂಜಾರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಖಾತ್ರಿ ಪಡೆಸಿದ್ದರು. ಈ ನಟನೆಗೆ ನಾಯ್ಕ್‌ಗೆ ಚೈತ್ರಾ ತಂಡವು 93 ಸಾವಿರ ರು. ನೀಡಿತ್ತು. ವಂಚನೆ ಪ್ರಕರಣದಲ್ಲಿ ಚೈತ್ರಾ ಹಾಗೂ ಆಕೆಯ ಸಹಚರರು ಸಿಕ್ಕಿಬಿದ್ದ ಬೆನ್ನಲ್ಲೇ ಮರು ದಿನ ಮಾಧ್ಯಮಗಳ ಮುಂದೆ ಪ್ರತ್ಯಕ್ಷನಾಗಿದ್ದ ನಾಯ್ಕ್‌ನನ್ನು ಸಿಸಿಬಿ ಬಂಧಿಸಿತ್ತು.
ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಚೈತ್ರಾ ಕುಂದಾಪುರ:
ಅನಾರೋಗ್ಯ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ರು. ವಂಚನೆ ಪ್ರಕರಣ ಸಂಬಂಧ ಬಂಧಿತಳಾಗಿರುವ ಚೈತ್ರಾ ಕುಂದಾಪುರ ಶನಿವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಿಸಿಬಿ ಕಚೇರಿಯಲ್ಲಿ ವಿಚಾರಣೆ ವೇಳೆ ದಿಢೀರ್ ಕುಸಿದು ಬಿದ್ದಿದ್ದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆ ಪೊಲೀಸರು ದಾಖಲಿಸಿದ್ದರು. ಎರಡು ದಿನಗಳ ಚಿಕಿತ್ಸೆಗೆ ಸ್ಪಂದಿಸಿರುವ ಆಕೆಯನ್ನು ಭಾನುವಾರ ಆಸ್ಪತ್ರೆಯಿಂದ ಮಾಡಲಿದ್ದು, ಬಳಿಕ ಚೈತ್ರಾಳನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಹಾಲಶ್ರೀ ಕಾರು ಚಾಲಕ ವಶಕ್ಕೆ:
ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಹಾಲಶ್ರೀ ಪತ್ತೆಗೆ ತನಿಖೆ ಮುಂದುವರೆಸಿರುವ ಸಿಸಿಬಿ ಪೊಲೀಸರು, ಶನಿವಾರ ಸ್ವಾಮೀಜಿಯ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಮೋಸದ ಕೃತ್ಯದಲ್ಲಿ ಪೂಜಾರಿ ಅವರಿಂದ 1.5 ಕೋಟಿ ರು. ಹಣ ಪಡೆದ ಆರೋಪ ಸ್ವಾಮೀಜಿ ಮೇಲೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ