
ಬೆಂಗಳೂರು(ಜೂ.17): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಕರ ವಿರುದ್ಧ ಐಪಿಸಿ ಕಾಯ್ದೆಯಡಿ ಪೋಲೀಸ್ ಕ್ರಮ ಕೈಗೊಳ್ಳಲು ಕೂಡ ಅನುಮತಿ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಕಾಯ್ದೆಯಲ್ಲಿ ಕೆಲ ತಿದ್ದುಪಡಿಗಳನ್ನು ತರಲು ಕೇಂದ್ರ ಮುಂದಾಗಿದೆ. ಈ ವೇಳೆ ಜಿಎಸ್‌ಟಿ ವಿಚಾರದಲ್ಲಿ ರಾಜ್ಯಕ್ಕಿರುವ ಆತಂಕಗಳನ್ನು ಪರಿಗಣಿಸುವಂತೆ ಕೇಂದ್ರಕ್ಕೆ ವಿವರಿಸಿದ್ದೇವೆ. ಪ್ರಸ್ತುತ ಜಿಎಸ್‌ಟಿ ಪಾವತಿದಾರರು ವಂಚನೆ ಮಾಡಿರುವುದು ಖಚಿತವಾದರೆ ಅವರ ವಿರುದ್ಧ ವಾಣಿಜ್ಯ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಇಂತವರ ವಿರುದ್ಧ ಐಪಿಸಿ ಕಾಯ್ದೆಯಡಿ ಪೊಲೀಸ್ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವಂತೆ ಶಿಫಾರಸು ಮಾಡಿದ್ದೇವೆ. ಇದರಿಂದ ಜಿಎಸ್‌ಟಿ ವಂಚಿಸುವುದನ್ನು ತಡೆಯಲು ಸಹಕಾರಿಯಾಗಲಿದೆ ಎಂದರು.
ಗೋಹತ್ಯೆ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಇಲ್ಲ: ಸಚಿವ ಎಚ್.ಕೆ.ಪಾಟೀಲ್
ಪ್ರಸ್ತುತ ವರ್ತಕರು ಜಿಎಸ್‌ಟಿ ಪಾವತಿಸಿದ್ದಾರಾ, ಇಲ್ಲಾವಾ? ಪಾವತಿಸಿದ್ದರೆ ಎಷ್ಟುಪಾವತಿ ಮಾಡಿದ್ದಾರೆ? ಎಂಬುದನ್ನು ತಿಳಿಯಲು ಆರ್‌ಟಿಐನಡಿ ಅರ್ಜಿ ಹಾಕಿ ಮಾಹಿತಿ ಪಡೆಯಬೇಕಾಗಿದೆ. ಇದನ್ನು ಬದಲಿಸಿ ಪ್ರತಿ ವರ್ತಕರ ಜಿಎಸ್‌ಟಿ ಮಾಹಿತಿ ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು ಎಂಬುದು ರಾಜ್ಯ ಸರ್ಕಾರದ ನಿಲುವಾಗಿದೆ. ಇದನ್ನು ತಿದ್ದುಪಡಿಯಲ್ಲಿ ಪರಿಗಣಿಸಬೇಕು ಎಂದು ಕೋರಲಾಗಿದೆ. ಅದೇ ರೀತಿ ಜಿಎಸ್‌ಟಿ ಪಾವತಿ ಮಾಡುವುದೂ ಸೇರಿದಂತೆ ಹಲವು ವಿಷಯಗಳು ಜಿಎಸ್‌ಟಿ ನಿಯಮಾವಳಿಯ ವ್ಯಾಪ್ತಿಯಲ್ಲಿವೆ. ಆದರೆ ಇದು ಕಾಯ್ದೆಯ ರೂಪದಲ್ಲಿರಬೇಕು ಎಂಬುದು ನಮ್ಮ ನಿಲುವು. ಈ ಬಗ್ಗೆಯೂ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ