
ಬೆಂಗಳೂರು, (ಜ.22): 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೋ. ದೊಡ್ಡರಂಗೇಗೌಡ ಅವರು ಆಯ್ಕೆಯಾಗಿದ್ದಾರೆ.
ಇಂದು (ಶುಕ್ರವಾರ) ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರೊ. ದೊಡ್ಡರಂಗೇಗೌಡ ಅವರನ್ನ ಆಯ್ಕೆ ಮಾಡಲಾಗಿದೆ.
ಫೆ.26ರಿಂದ 3 ದಿನ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ
ಇದೇ ಫೆ.26ರಿಂದ 28ರವರೆಗೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರೊ. ದೊಡ್ಡರಂಗೇಗೌಡ್ರು ವಹಿಸಿಕೊಳ್ಳಲಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಹಾವೇರಿಯಲ್ಲಿ ಫೆಬ್ರವರಿ 26ರಿಂದ 28ರವರೆಗೆ ನಡೆಯುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದೊಡ್ಡರಂಗೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
'ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಗೊ.ರು.ಚನ್ನಬಸಪ್ಪ, ವೀಣಾ ಶಾಂತೇಶ್ವರ, ಎಸ್.ಆರ್. ಗುಂಜಾಳ್, ಕೆ.ಎಸ್. ಭಗವಾನ್ ಸೇರಿದಂತೆ ವಿವಿಧ ಸಾಹಿತಿಗಳ ಹೆಸರು ಚರ್ಚೆಗೆ ಬಂದಿದ್ದವು. ಅಂತಿಮವಾಗಿ ದೊಡ್ಡರಂಗೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಮನು ಬಳಿಗಾರ್ ತಿಳಿಸಿದರು.
ಪ್ರತಿಭೆ ಮತ್ತು ಅರ್ಹತೆ ಇದ್ದವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನ ನಡೆಸಲು ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿ, ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಸಾಹಿತ್ಯದ ಮೂಲಕ ಕನ್ನಡ ನಾಡಿನ ಹಲವಾರು ವಿಶಿಷ್ಟ ಗೌರವಗಳಿಗೆ ಪಾತ್ರರಾಗಿರುವ ದೊಡ್ಡರಂಗೇಗೌಡರು ಫೆಬ್ರುವರಿ 7, 1946ರಲ್ಲಿ ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಜನಿಸಿದ್ದಾರೆ.
1972 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಗೌಡರ ಕವನ ಸಂಕಲನ ‘ಕಣ್ಣು ನಾಲಗೆ ಕಡಲು ಕಾವ್ಯ’ ಕೃತಿಗೆ ಪ್ರಶಸ್ತಿ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ