ನಾನು ದಿಲ್ಲಿಯಲ್ಲಿರುವ ನಿಮ್ಮ ಮಗ: ಪ್ರಧಾನಿ ನರೇಂದ್ರ ಮೋದಿ

By Kannadaprabha NewsFirst Published Jan 20, 2023, 12:26 PM IST
Highlights

1993ರಲ್ಲಿಯೇ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಶಿಫಾರಸು ಮಾಡಲಾಗಿತ್ತು. ಇದನ್ನು ಸಾಕಾರಗೊಳಿಸಲು ಬಿಜೆಪಿ ಸರ್ಕಾರವೇ ಬರಬೇಕಾಯಿತು, ಅಲ್ಲಿಂದ ಇಲ್ಲಿಯವರೆಗೆ ಆಡಳಿತ ಮಾಡಿದವರು ಅದೇನು ಮಾಡಿದರೋ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ಅಸಮಾಧಾನ ಹೊರಹಾಕಿದರು. 

ಕಲಬುರಗಿ (ಜ.20): 1993ರಲ್ಲಿಯೇ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಶಿಫಾರಸು ಮಾಡಲಾಗಿತ್ತು. ಇದನ್ನು ಸಾಕಾರಗೊಳಿಸಲು ಬಿಜೆಪಿ ಸರ್ಕಾರವೇ ಬರಬೇಕಾಯಿತು, ಅಲ್ಲಿಂದ ಇಲ್ಲಿಯವರೆಗೆ ಆಡಳಿತ ಮಾಡಿದವರು ಅದೇನು ಮಾಡಿದರೋ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಜತೆಗೆ, ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿರುವ ತಾಂಡಾ, ಹಟ್ಟಿ, ಹಾಡಿಗಳನ್ನು ಕೇಂದ್ರ ಸರ್ಕಾರದ ಯೋಜನೆಗಳಡಿ ಗುಡಿಸಲು ಮುಕ್ತಗೊಳಿಸಿ, ಶೀಘ್ರ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ, ಕಂದಾಯ ಇಲಾಖೆಯಿಂದ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ ಜಿಲ್ಲೆಗಳ 342 ತಾಂಡಾ, ಹಟ್ಟಿ, ಹಾಡಿ, ಗೊಲ್ಲರಹಟ್ಟಿ, ಗ್ರಾಮಗಳ 52,072 ಅಲೆಮಾರಿ ಜನಾಂಗದವರಿಗೆ ಕಾಯಂ ಸೂರು ಒದಗಿಸುವ ನಿಟ್ಟಿನಲ್ಲಿ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಧಾನಿ ಮೋದಿ ಸಾಮಾಜಿಕ ಪರಿವರ್ತಕ: ಸಿಎಂ ಬೊಮ್ಮಾಯಿ ಬಣ್ಣನೆ

ಬಿಜೆಪಿ ಸರ್ಕಾರವು ಸೌಲಭ್ಯ ವಂಚಿತ ಸಮುದಾಯಗಳ ಜತೆಗಿದೆ ಎಂದು ಹೇಳಿದ ಪ್ರಧಾನಿ, ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡ ತಾಂಡಾ, ಹಟ್ಟಿ, ಹಾಡಿಗಳಲ್ಲಿ ಸರ್ಕಾರದ ಯೋಜನೆಗಳಡಿ ಗುಡಿಸಲು ಮುಕ್ತ ಗ್ರಾಮಗಳನ್ನಾಗಿಸಲು, ಜನರಿಗೆ ಪಕ್ಕಾ ಮನೆ, ಶೌಚಾಲಯ, ವಿದ್ಯುತ್‌, ನಲ್ಲಿ ನೀರು, ಅಡುಗೆ ಅನಿಲ ಸಂಪರ್ಕ ಸೇರಿ ಎಲ್ಲ ಮೂಲ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದರು.

ಜನವರಿ ಮಾಸ ನಮಗೆಲ್ಲ ಅತ್ಯಂತ ಮಹತ್ವದ್ದು. ಇದೇ ತಿಂಗಳಲ್ಲಿ ನಮ್ಮ ಸಂವಿಧಾನ ಜಾರಿಗೆ ಬಂತು. ಇಂಥ ಪವಿತ್ರ ತಿಂಗಳಲ್ಲೇ ಕರ್ನಾಟಕ ಸರ್ಕಾರ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ, ಅಲೆಮಾರಿ ಜನಾಂಗದವರಿಗೆ ಹಕ್ಕು ಪತ್ರ ನೀಡುವ ಮೂಲಕ ಬಹುದೊಡ್ಡ ಹೆಜ್ಜೆ ಇರಿಸಿದೆ. ಇದು ಬಂಜಾರ ಸಮುದಾಯದ ಲಕ್ಷಾಂತರ ಜನಕ್ಕೆ ಅತಿದೊಡ್ಡ ದಿನವಾಗಿದ್ದು, ರಾಜ್ಯದ ತಾಂಡಾಗಳಲ್ಲಿನ ಸಾವಿರಾರು ಕುಟುಂಬಗಳ ಉಜ್ವಲ ಭವಿಷ್ಯವನ್ನು ಸರ್ಕಾರ ಸುನಿಶ್ಚಿತಗೊಳಿಸಿದೆ ಎಂದರು.

ಮೋದಿ ರಾಜ್ಯ ಭೇಟಿ ಲಗೋರಿ, ಖೋ ಖೋ ಇದ್ದಂತೆ: ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ

ಬಂಜಾರ ಸಮುದಾಯ ಬಹಳಷ್ಟು ವರ್ಷ ಕಾಯಂ ನೆಲೆ, ಸೂರು ಇಲ್ಲದೆ ಸಂಕಷ್ಟಎದುರಿಸಿದೆ. ತಮ್ಮ ಹಕ್ಕಿಗಾಗಿ ಬಹು ದೀರ್ಘಕಾಲ ಹೋರಾಡಿದೆ. ಈಗ ಅವರು ಕೂಡ ಗೌರವ, ಅಭಿಮಾನದಿಂದ ಬದುಕುವ ಕಾಲ ಬಂದಿದೆ. ಬರುವ ದಿನಗಳಲ್ಲಿ ತಾಂಡಾ, ಹಾಡಿ, ಹಟ್ಟಿಮತ್ತಿತರ ಪ್ರದೇಶಗಳಲ್ಲಿ ಪಕ್ಕಾ ಮನೆಗಳನ್ನು ನಿರ್ಮಿಸುವುದಲ್ಲದೆ, ಸಮುದಾಯದ ಮಕ್ಕಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌, ಕೌಶಲ್ಯ ತರಬೇತಿ, ಉದ್ಯೋಗ ದೊರಕಿಸಲು ಶ್ರಮಿಸಲಾಗುವುದು. ಬಂಜಾರ ಸಮುದಾಯದವರು ಇನ್ನು ನಿಶ್ಚಿಂತೆಯಿಂದ ತಮ್ಮ ಬದುಕು ಕಟ್ಟಿಕೊಳ್ಳಬೇಕು. ಸಂಕಷ್ಟಗಳನ್ನು ಪರಿಹರಿಸಲು ತಮ್ಮ ಮಗನೊಬ್ಬ ದಿಲ್ಲಿಯಲ್ಲಿ ಕೂತಿದ್ದಾನೆ ಎಂದು ತಿಳಿದುಕೊಳ್ಳಬೇಕು ಎಂದರು.

click me!