ನವಭಾರತಕ್ಕೆ ಮೋದಿ ಬಲಿಷ್ಠ ಮಾರ್ಗ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

By Kannadaprabha NewsFirst Published Sep 24, 2022, 11:21 AM IST
Highlights

ನವಭಾರತ ಎಂಬುದು ಘೋಷಣೆ ಅಲ್ಲ, ದೂರದೃಷ್ಟಿ ಗುರಿ,ಸುಧಾರಣೆ ತಂದು ಗುರಿ ಸಾಧಿಸಲು ಮೋದಿ ಪಣ, ಮೋದಿ ಅವಧಿಯಲ್ಲಿ ದಾಖಲೆ ತೆರಿಗೆ ಸಂಗ್ರಹ: ರಾಜೀವ್‌ 

ಬೆಂಗಳೂರು(ಸೆ.24): ‘ನವ ಭಾರತ ನಿರ್ಮಾಣ ಗುರಿ ತಲುಪಲು ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠ ಮಾರ್ಗವನ್ನು ಹಾಕಿ ಮುನ್ನಡೆಸುತ್ತಿದ್ದಾರೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು. ನಗರದ ಭಾರತೀಯ ವಿದ್ಯಾಭವನದಲ್ಲಿ ಶುಕ್ರವಾರ ಬಿಜೆಪಿ ಬೆಂಗಳೂರು ಕೇಂದ್ರ ಘಟಕ ಹಮ್ಮಿಕೊಂಡಿದ್ದ ಮೋದಿ-20 ಪುಸ್ತಕ ಬಿಡುಗಡೆ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ನವ ಭಾರತವು ಕೇವಲ ಒಂದು ರಾಜಕೀಯ ಘೋಷಣೆಯಲ್ಲ. ಇದೊಂದು ದೂರದೃಷ್ಟಿ, ತಲುಪಬೇಕಾದ ಗುರಿಯಾಗಿದೆ. ಕಳೆದ ಎಂಟು ವರ್ಷಗಳಿಂದ ಪ್ರಧಾನಿಗಳಾಗಿರುವ ಮೋದಿಯವರು ತಮ್ಮ ಆಡಳಿತದಲ್ಲಿ ಹಲವಾರು ಸುಧಾರಣೆಯನ್ನು ದೇಶದಲ್ಲಿ ತರುವ ಮೂಲಕ ನವಭಾರತ ಗುರಿಯನ್ನು ತಲುಪುವ ಮಾರ್ಗ ಹಾಕಿದ್ದಾರೆ. ಜತೆಗೆ ಆ ಮಾರ್ಗದಲ್ಲಿಯೇ ದೇಶವನ್ನು ಮುನ್ನಡೆಸುತ್ತಿದ್ದಾರೆ’ ಎಂದರು.

ದಶಕಗಳ ಹಿಂದೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರೇ ಹೇಳಿದಂತೆ ದೆಹಲಿಯಲ್ಲಿ ಸರ್ಕಾರದಿಂದ 100 ರು.ಅನುದಾನ ಬಿಡುಗಡೆಯಾದರೆ ವ್ಯಕ್ತಿಗೆ ತಲುಪುತ್ತಿದ್ದದ್ದು, 15 ರು. ಮಾತ್ರ. ಉಳಿದ 85 ರು. ಆಡಳಿತ ವ್ಯವಸ್ಥೆಯ ಪಾಲಾಗುತ್ತಿತ್ತು. ಸದ್ಯ ದೆಹಲಿಯಿಂದ ಬಿಡುಗಡೆಯಾಗುವ ಅನುದಾನ ಒಂದೇ ಒಂದು ಪೈಸೆ ಕೂಡಾ ವ್ಯರ್ಥವಾಗದೇ, ಯಾರ ಪಾಲಾಗದೇ ನೇರವಾಗಿ ಫಲಾನುಭವಿಗೆ ತಲುಪುತ್ತಿದೆ. ಇದಕ್ಕೆ ಕೊರೋನಾ ಸಂದರ್ಭದಲ್ಲಿ 40 ಕೋಟಿ ಜನರಿಗೆ ಬಿಡುಗಡೆಯಾದ ಪರಿಹಾರ ಮೊತ್ತ, 80 ಕೋಟಿ ಜನರಿಗೆ ಸಿಕ್ಕ ಆಹಾರ ಸೌಲಭ್ಯವೇ ಸಾಕ್ಷಿಯಾಗಿದೆ. ಇದು ನವ ಭಾರತದ ಒಂದು ಪ್ರಮುಖ ನಡೆಯಾಗಿದೆ ಎಂದು ಪ್ರಶಂಸಿಸಿದರು.

ಯುವಜನ ಸಬಲೀಕರಣಗೊಳಿಸಲು ಸ್ಯಾಮ್‌ಸಂಗ್ ಮಹತ್ವದ ಹೆಜ್ಜೆ, ಇನೋವೇಶನ್ ಕ್ಯಾಂಪಸ್ ಆರಂಭ!

ದಶಕಗಳ ಹಿಂದೆ ಸರ್ಕಾರಕ್ಕೆ ಬರುತ್ತಿದ್ದ ತೆರಿಗೆ ಆದಾಯ ಪ್ರಮಾಣ ಶೇ.3-4 ರಷ್ಟಿತ್ತು. ಈಗ ತೆರಿಗೆ ಆದಾಯ ಶೇ.25 ಕ್ಕೆ ಹೆಚ್ಚಿದೆ. ಅಂತೆಯೇ ಈ ವರ್ಷ 7.5 ಲಕ್ಷ ಕೋಟಿ ರು.ಮೂಲ ಸೌಕರ್ಯಕ್ಕೆ ನೀಡಿದ್ದಾರೆ. ಎರಡು ದಶಕಗಳ ಹಿಂದೆ ತಂತ್ರಜ್ಞಾನದಲ್ಲಿ ಭಾರತ ಸಾಕಷ್ಟುಹಿಂದುಳಿದಿದ್ದು, ಉಪಕರಣಗಳಿಗೆ ಬೇಕಾದ ಚಿಕ್ಕ ನೆಟ್‌, ಬೋಲ್ಟ್‌ಗಳನ್ನು ವಿದೇಶದಿಂದ ತರಿಸಿಕೊಳ್ಳಬೇಕಿತ್ತು. ಸದ್ಯ ಸ್ವಂತ ಉಪಕರಣಗಳನ್ನು ಬಳಿಸಿ 5ಜಿ ನೆಕ್‌ವರ್ಕ್ ಸ್ಥಾಪಿಸಿದೆ. ಸೆಮಿ ಕಂಡಕ್ಟರ್‌ಗಳನ್ನು ಸಿದ್ಧಪಡಿಸಿ ವಿದೇಶಕ್ಕೆ ಪೂರೈಸಲಾಗುತ್ತಿದೆ. ಕಳೆದ ಒಂದು ದಶಕಕ್ಕೆ ಹೋಲಿಸಿದರೆ ಹತ್ತು ಪಟ್ಟು ಆಧಿಕ ಮೊಬೈಲ… ಉತ್ಪಾದನೆ ಮಾಡುತ್ತಿದ್ದೇವೆ. ಇದು ನವ ಭಾರತದ ಮತ್ತಷ್ಟುನಡೆಗಳು ಎಂದು ವಿವರಿಸಿದರು.

ವಿಧಾನಪರಿಷತ್ತು ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಅಗ್ರಗಣ್ಯ ಕನಸುಗಾರ ಸುಭಾಷ್‌ ಚಂದ್ರ ಬೋಸ್‌ ಆಗಿದ್ದರು. ಸದ್ಯ ಪ್ರಧಾನಿ ಮೋದಿ ಅವರು ಭಾರತದ ಅಗ್ರಗಣ್ಯ ಕನಸುಗಾರರಾಗಿದ್ದಾರೆ. ಚಹಾ ಮಾರಿ ಬದುಕಿದ್ದ ಅವರು ಆ ಸಾಮಾನ್ಯ/ ಬಡ ವರ್ಗದ ಜನರ ಸಂಕಷ್ಟಗಳನ್ನು ಅರಿತುಕೊಂಡು ಅವರೆಲ್ಲರಿಗೂ ಕಾನೂನಾತ್ಮಕವಾಗಿ ಅವಕಾಶ ಕಲ್ಪಸುಕೊಡುತ್ತಿದ್ದಾರೆ. 100 ಕೋಟಿ ಜನರಿಗೆ ಒಂದಲ್ಲ ಒಂದು ಅನುಕೂಲ ನೇರವಾಗಿ ತಲುಪುತ್ತಿವೆ ಎಂದರು.

ಕಲಾವಿದ ಪ್ರಕಾಶ್‌ ಬೆಳವಾಡಿ ಮಾತನಾಡಿ, ಕೇಂದ್ರ ಸಚಿವರುಗಳಾದ ಅಮಿತ್‌ ಶಾ, ಜಯಶಂಕರ್‌, ಆರ್ಥಿಕ, ಸಾಮಾಜಿ ತಜ್ಞರುಗಳು ಪುಸ್ತಕದಲ್ಲಿ ಮೋದಿಯನ್ನು ಕಟ್ಟಿಕೊಟ್ಟಿದ್ದಾರೆ. ಕೇವಲ ಹೊಗಳಿಕೆಯ ಕೃತಿಯಲ್ಲ, ಸದ್ಯ ಬದಲಾಗುತ್ತಿರುವ, ಭವಿಷ್ಯದ ನವಭಾರತವನ್ನು ತೋರಿಸುವ ಗಂಭೀರ ಕೃತಿಯಾಗಿದೆ ಎಂದು ಪುಸಕ್ತ ಕುರಿತು ವಿವರಿಸಿದರು. ವಿಧಾನಪರಿಷತ್ತು ಸದಸ್ಯ ಗೋಪಿನಾಥ ರೆಡ್ಡಿ, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

click me!