
ಲಿಂಗಸೂಗೂರು(ಅ.17): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗಣವೇಷ ಧರಿಸಿ ಭಾಗವಹಿಸಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಪ್ರವೀಣ್ ಕುಮಾರ್ ಕೆ.ಪಿ. ಅವರನ್ನು ಅಮಾನತುಗೊಳಿಸಲು ಆದೇಶ ನೀಡಲಾಗಿದೆ. ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು, 2021ರ ನಿಯಮ 3 ರಂತೆ ಅಧಿಕಾರಿಯು ನಡೆದುಕೊಂಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ಕಾರಿ ನೌಕರರು ಅಮಾನತು:
ಅಕ್ಟೋಬರ್ 12 ರಂದು ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಏರ್ಪಡಿಸಲ್ಪಟ್ಟಿದ್ದ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್ ಅವರು ಸಂಘದ ಸಮವಸ್ತ್ರ ಧರಿಸಿ, ಕೈಯಲ್ಲಿ ದೊಣ್ಣೆ ಹಿಡಿದು ಗಣವೇಷಧಾರಿಗಳ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಈ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿವೆ. ಮಾಹಿತಿ ಖಚಿತಪಡಿಸಿಕೊಂಡ ನಂತರ ಕ್ರಮ ಜರುಗಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಅಮಾನತು ಮಾಡುವಂತೆ ಸೂಚಿಸಿದ್ದಾರೆ. ಇದೇ ರೀತಿ, ಇತ್ತೀಚೆಗೆ ಮತ್ತೊಬ್ಬ ಪಿಡಿಓ ಆರೆಸ್ಸೆಸ್ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಿರುವ ಹಿನ್ನೆಲೆ ಅವರನ್ನೂ ಅಮಾನತುಗೊಳಿಸಲು ಸೂಚನೆ ನೀಡಿರುವ ಖರ್ಗೆ ಅವರು, ಸರ್ಕಾರಿ ನೌಕರರು ರಾಜಕೀಯ ಅಥವಾ ಸಾಂಸ್ಕೃತಿಕ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರಿ ಸೇವಕರು ನಿಯಮಗಳನ್ನು ಉಲ್ಲಂಘಿಸುವುದು ಅನುಮತಿಸಲಾಗದು. ಇಂತಹ ಘಟನೆಗಳು ಆಡಳಿತದ ನೈತಿಕತೆಗೆ ಧಕ್ಕೆ" ಎಂದು ಅವರು ಹೇಳಿದ್ದಾರೆ.
ಆರೆಸ್ಸೆಸ್ ಚಟುವಟಿಕೆಯಲ್ಲಿ ಭಾಗಿಯಾದ ಸರ್ಕಾರಿ ನೌಕರರ ಮಾಹಿತಿ ಸಂಗ್ರಹ:
ಯಾವ ಯಾವ ಸರ್ಕಾರಿ ನೌಕರರು ಆರ್‌ಎಸ್‌ಎಸ್‌ನಂತಹ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂಬ ಮಾಹಿತಿ ಸಂಗ್ರಹಿಸುತ್ತಿದೆ. ವಿವಿಧ ಇಲಾಖೆಗಳಾದ ಶಿಕ್ಷಣ, ಆರೋಗ್ಯ, ಸಾರ್ವಜನಿಕ ಕಾರ್ಯಗಳು ಸೇರಿದಂತೆ ಅಧಿಕಾರಿ, ಸಿಬ್ಬಂದಿ ಮತ್ತು ನೌಕರರ ಬಗ್ಗೆಯೂ ವಿವರಗಳನ್ನು ಪಡೆಯಲಾಗುತ್ತಿದೆ. ಇದಕ್ಕಾಗಿ ಕೆಲವು ಹಿರಿಯ ಅಧಿಕಾರಿಗಳು ಈ ಮಾಹಿತಿಯನ್ನು ಕಲೆಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಪ್ರವೀಣ್ ಕುಮಾರ್ ಅವರ ಅಮಾನತು ಆದೇಶವು ತೀವ್ರ ಚರ್ಚೆ, ವಿವಾದ ಹುಟ್ಟುಹಾಕಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸಂಘಪರಿವಾರ ತೀವ್ರವಾಗಿ ಖಂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ