
ಬೆಂಗಳೂರು (ಡಿ.19): ಬಲವಂತದ ಶುಲ್ಕ ವಸೂಲಿ, ಎರಡನೇ ಕಂತಿನ ಶುಲ್ಕ ಪಾವತಿಗೆ ಒತ್ತಡ ಹಾಗೂ ಶುಲ್ಕ ಪಾವತಿಸದಿದ್ದರೆ ಆನ್‌ಲೈನ್ ಶಿಕ್ಷಣ ಕಡಿತಗೊಳಿಸುವುದಾಗಿ ಹೇಳುತ್ತಿರುವ ಖಾಸಗಿ ಶಾಲೆಗಳ ಕ್ರಮ ಖಂಡಿಸಿ ಹಾಗೂ ಶುಲ್ಕ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಪೋಷಕ ಸಂಘಟನೆಗಳು ಡಿ.20ರಂದು ನಗರದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ.
ಆರ್‌ಟಿಇ ಪೇರೆಂಟ್ಸ್ ಅಂಡ್ ಸ್ಟೂಡೆಂಟ್ಸ್ ಅಸೋಸಿಯೇಷನ್(ಆರ್‌ಟಿಸಿ-ಸ್ತೂಪ) ಮತ್ತು ವಾಯ್‌್ಸ ಆಫ್ ಪೇರೆಂಟ್ಸ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾನುವಾರ ಬೆಳಗ್ಗೆ 10ಕ್ಕೆ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಶುಲ್ಕ ವಸೂಲಿಗೆ ಪೋಷಕರ ಮೇಲೆ ಒತ್ತಡ ಹೇರುತ್ತಿರುವ ಹಾಗೂ ಆನ್‌ಲೈನ್ ಶಿಕ್ಷಣ ನಿಲ್ಲಿಸುವುದಾಗಿ ಬೆದರಿಕೆ ಹಾಕುವ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೋವಿಡ್ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಈ ಬಾರಿ ಶೇ.75ರಷ್ಟುಬೋಧನಾ ಶುಲ್ಕ ಕಡಿಮೆ ಮಾಡಬೇಕು. ಉಳಿದಂತೆ ಬೇರೆ ಯಾವುದೇ ಶುಲ್ಕ ವಿಧಿಸಬಾರದು. ಎರಡನೇ ಹಂತದ ಶುಲ್ಕ ಪಾವತಿಗೆ ಸರ್ಕಾರ ಯಾವುದೇ ಆದೇಶ ಮಾಡಬಾರದು. ಆರ್‌ಟಿಇ ಕಾಯ್ದೆಯಡಿ ಪ್ರವೇಶ ಪಡೆದ ಮಕ್ಕಳಿಗೂ ಶುಲ್ಕ ಪಡೆಯುತ್ತಿರುವ ಶಾಲೆಗಳ ವಿರುದ್ಧ ಕ್ರಮ ವಹಿಸಬೇಕು ಎಂಬುದು ಸೇರಿದಂತೆ ಒಟ್ಟು ಆರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪೋಷಕ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ.
ರಾಜ್ಯದಲ್ಲಿ ಶೀಘ್ರ ಶಾಲೆ ಆರಂಭ : ಇನ್ನೆರಡು ದಿನದಲ್ಲಿ ಫೈನಲ್ ನಿರ್ಧಾರ .
ಸರ್ಕಾರ ಮೊದಲ ಕಂತಿನ ಶುಲ್ಕ ಪಾವತಿಗೆ ಮಾತ್ರ ಅವಕಾಶ ನೀಡಿದೆ. ಆದರೆ, ಬಲವಂತವಾಗಿ ಶುಲ್ಕ ವಸೂಲಿ ಮಾಡಬಾರದೆಂದು ಕೂಡ ಹೇಳಿದೆ. ಆದರೂ, ಕೋವಿಡ್ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲೂ ನಾವು ಮೊದಲ ಕಂತು ಪಾವತಿಸಿದ್ದೇವೆ. ಈಗ ಶಾಲೆಗಳು ಮತ್ತೆ ಎರಡನೇ ಕಂತು ಪಾವತಿಗೆ ಒತ್ತಡ ಹಾಕುತ್ತಿವೆ. ಇಲ್ಲದಿದ್ದರೆ ಆನ್‌ಲೈನ್ ಶಿಕ್ಷಣ ನಿಲ್ಲಿಸುವ ಬೆದರಿಕೆ ಮುಂದುವರೆಸಿವೆ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಗಳು ಎರಡನೇ ಕಂತಿನ ಶುಲ್ಕ ವಸೂಲಿಗೆ ಒತ್ತಡ ಹಾಕಿದರೆ ದೂರು ನೀಡಬಹುದೆಂದು ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ, ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಶಾಲೆಗಳ ಆಡಳಿತ ಮಂಡಳಿ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕಾದ ಡಿಡಿಪಿಐ, ಬಿಇಒಗಳು ಶಾಲೆಗಳ ಪರವೇ ಮಾತನಾಡುತ್ತಿದ್ದಾರೆ. ಶುಲ್ಕ ಕಟ್ಟದಿದ್ದರೆ ಶಾಲೆ ಹೇಗೆ ನಡೆಸಲು ಸಾಧ್ಯ ಎಂದು ಪೋಷಕರನ್ನೇ ಪ್ರಶ್ನಿಸುತ್ತಿದ್ದಾರೆ. ಸರ್ಕಾರ ಕೂಡಲೇ ಇಲಾಖೆಯ ಅಧಿಕಾರಿಗಳಿಗೆ ಪೋಷಕರ ನೆರವಿಗೆ ಬರುವಂತೆ ಸೂಚನೆ ನೀಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ