
ಹುಬ್ಬಳ್ಳಿ[ಫೆ.03]: ದೇಶದಲ್ಲೇ ಮೊದಲ ಸಹಕಾರಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಿ, 95 ಸಾವಿರ ಕ್ಯಾನ್ಸರ್ ಪ್ರಕರಣಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗಿಗಳ ಮುಖದಲ್ಲಿ ನಗು ಅರಳಿಸಿದ್ದ ಖ್ಯಾತ ವೈದ್ಯ ಪದ್ಮಶ್ರೀ ಡಾ.ಆರ್.ಬಿ.ಪಾಟೀಲ್(93) ಶನಿವಾರ ಮಧ್ಯಾಹ್ನ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ ಯಮುನಕ್ಕ (85), ಪುತ್ರ ಡಾ.ಬಸವರಾಜ ಪಾಟೀಲ್, ಪುತ್ರಿಯರಾದ ಡಾ. ಸರೋಜಾ ಬೈರಿ, ಡಾ. ಶೈಲಾ ಮುದರಡ್ಡಿ ಇದ್ದಾರೆ. ಅಂತ್ಯಕ್ರಿಯೆ ಬಸವನ ಬಾಗೇವಾಡಿ ತಾಲೂಕಿನ ಕವಲಗಿ-ಅಂಗಡಿ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೂಲತಃ ಬಸವನ ಬಾಗೇವಾಡಿಯವರಾದ ರೇವಣಸಿದ್ದಪ್ಪಗೌಡ ಪಾಟೀಲ್ ಮುಂಬೈ ಹಾಗೂ ಇಂಗ್ಲೆಂಡ್‌ಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಬಳಿಕ ಹುಬ್ಬಳ್ಳಿಯ ‘ಸಹಕಾರಿ ಆಸ್ಪತ್ರೆ’ಯಲ್ಲಿ ವೃತ್ತಿಜೀವನ ಆರಂಭಿಸಿದರು. 1977ರಲ್ಲಿ ಬಡರೋಗಿಗಳಿಗೆ ಅನುಕೂಲವಾಗಲೆಂದು ‘ಕರ್ನಾಟಕ ಕ್ಯಾನ್ಸರ್ ಥೆರಪಿ, ಸಂಶೋಧನಾ ಕೇಂದ್ರ’ (ಆಸ್ಪತ್ರೆ)ವನ್ನು ಮಿತ್ರರು, ದಾನಿಗಳ ನೆರವಿನಿಂದ ಆರಂಭಿಸಿದರು. ಜನಸಂಖ್ಯಾ ನಿಯಂತ್ರಣ ಆಂದೋಲನದಲ್ಲಿ ಭಾಗವಹಿಸಿ ಪುರುಷರು-ಸ್ತ್ರೀಯರು ಸೇರಿದಂತೆ ಒಟ್ಟು 5 ಸಾವಿರ ಮಂದಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ಹಿರಿಮೆ ಇವರದು. ಡಾ.ಪಾಟೀಲ್ ಅನುಪಮ ಸೇವೆಗೆ ಕೇಂದ್ರ ಸರ್ಕಾರ 1996ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ