P Ramaiah Passes Away: ಮಾಜಿ ಎಂಎಲ್‌ಸಿ, ಹಿರಿಯ ಪತ್ರಕರ್ತ ಪಿ.ರಾಮಯ್ಯ ನಿಧನ, ದೇವೇಗೌಡ ಸೇರಿ ಗಣ್ಯರು ಸಂತಾಪ

Kannadaprabha News, Ravi Janekal |   | Kannada Prabha
Published : Feb 11, 2026, 06:18 AM ISTUpdated : Feb 11, 2026, 06:32 AM IST
P Ramaiah Passes Away

ಸಾರಾಂಶ

ಹಿರಿಯ ಪತ್ರಕರ್ತ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ (93) ಅವರು ನಿಧನರಾಗಿದ್ದಾರೆ. 'ಹಿಂದೂ ರಾಮಯ್ಯ' ಎಂದೇ ಖ್ಯಾತರಾಗಿದ್ದ ಇವರು, 'ಪತ್ರಿಕೋದ್ಯಮದ ತಪಸ್ವಿ' ಎಂದು ಕರೆಯಲ್ಪಡುತ್ತಿದ್ದರು ಮತ್ತು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಬೆಂಗಳೂರು (ಫೆ.11): ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ(93) ಅವರು ನಿಧನರಾಗಿದ್ದಾರೆ‌. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ.ರಾಮಯ್ಯ ಅವರು, ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ.ಬಾಲಾಜಿ ತಿಳಿಸಿದ್ದಾರೆ.

1933ರ ಸೆ.12 ರಂದು ಜನಿಸಿದ ರಾಮಯ್ಯ ಅವರು, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮ್ಮಕಳನ್ನು ಅಗಲಿದ್ದಾರೆ . ''ದಿ ಹಿಂದೂ'' ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು, ಹಿಂದೂ ರಾಮಯ್ಯ ಎಂದೇ ಜನಪ್ರಿಯರಾಗಿದ್ದರು. ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು, ಪತ್ರಿಕಾ ಅಕಾಡೆಮಿ ಹಾಗೂ ವಿವಿಧ ಪತ್ರಕರ್ತ ಕಲ್ಯಾಣ ಸಮಿತಿಗಳ ಸದಸ್ಯರಾಗಿದ್ದರು.

ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ. ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು.

ಸತ್ಯ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿದ್ದ ಇವರನ್ನು ‘ಪತ್ರಿಕೋದ್ಯಮದ ತಪಸ್ವಿ'' ಎಂದು ಕರೆಯಲಾಗುತ್ತದೆ. ಇವರ ಅನುಭವ ಕಥನ ‘ನಾನು ಹಿಂದೂ ರಾಮಯ್ಯ’ ಕೃತಿಯು ಇವರ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಪಿ.ರಾಮಯ್ಯನವರು ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಸಂಪರ್ಕಗಳನ್ನು ಬಳಸಿ, ಸರ್ಕಾರದ ನೀತಿ ನಿರೂಪಣೆಗೆ ಸಾಕಷ್ಟು ಕೊಡುಗೆ ನೀಡಿದ್ದರು.

ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥೀವ ಶರೀರವನ್ನು ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಅವರ ಮನೆಯಲ್ಲಿ ಇಡಲಾಗುವುದು. ಬಳಿಕ, ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪಿ. ರಾಮಯ್ಯ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ ತೀವ್ರ ಸಂತಾಪ

ನಾಡಿನ ಹಿರಿಯ ಪತ್ರಕರ್ತ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ. ರಾಮಯ್ಯ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ನನ್ನ ದಶಕಗಳ ಕಾಲದ ಆತ್ಮೀಯ ಒಡನಾಡಿ, ಹಿತೈಷಿ ಹಾಗೂ ಚಿರಕಾಲದ ಮಿತ್ರರಾಗಿದ್ದ ರಾಮಯ್ಯನವರನ್ನು ಕಳೆದುಕೊಂಡ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವಾಗಿದೆ' ಟ್ವೀಟ್ ಮೂಲಕ ಎಂದು ಅವರು ಸ್ಮರಿಸಿದ್ದಾರೆ. 'ದಿ ಹಿಂದೂ' ಪತ್ರಿಕೆಯ ವರದಿಗಾರರಾಗಿ ಹಾಗೂ ಜನಪ್ರತಿನಿಧಿಯಾಗಿ ಅವರು ಸಲ್ಲಿಸಿದ ಅಪಾರ ಸೇವೆಯನ್ನು ಕೊಂಡಾಡಿರುವ ಗೌಡರು, ಅವರ ನಿಧನದಿಂದ ಪತ್ರಿಕೋದ್ಯಮದ ಪ್ರಬಲ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತನ್ನ ಮರ ಕಡಿದಿದ್ದಕ್ಕೆ ವಿಧಾನಸೌಧ ಬಳಿ ಸರ್ಕಾರಿ ಶ್ರೀಗಂಧ ಮರ ಕತ್ತರಿಸಿದ ರೈತ!
ನನ್ನನ್ನು ಕರೆದಿಲ್ಲ, ನಾನು ದಿಲ್ಲಿಗೆ ಹೋಗಲ್ಲ : ಸಿಎಂ