
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಅ.4): ಸಾಮಾನ್ಯ ಜನರಿಗೆ ಅದು ಹೇಗಾದರೂ ಇರಲಿ ವಾಸಕ್ಕೆ ಸ್ವಂತ ಮನೆ ಅಂತ ಇದ್ದರೆ ಸಾಕು ಎಂದು ಪರದಾಡುತ್ತಾರೆ. ಆದರೆ ಇಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಟ್ಟರೂ ಅದನ್ನು ಬಳಸದೆ ಖಾಲಿ ಬಿಟ್ಟಿದ್ದಾರೆ. ಇದು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಅನುಮಾನ ಮೂಡುವಂತೆ ಮಾಡಿದೆ.
ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಕಳೆದ ಐದಾರು ವರ್ಷಗಳಿಂದ 41.500 ರೂಪಾಯಿ ಬಾಡಿಗೆ ನೀಡಿ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಐದು ತಿಂಗಳ ಹಿಂದೆಯೇ ತಾಲ್ಲೂಕು ಆಡಳಿತ ಸೌಧದಲ್ಲಿ ಸುಸಜ್ಜಿತವಾದ ಮತ್ತು ಅಗತ್ಯ ಪ್ರಮಾಣದ ಕಟ್ಟಡ ನಿರ್ಮಿಸಿಕೊಡಲಾಗಿದೆ. ಅದನ್ನು ಈ ಇಲಾಖೆಗೆಂದೇ ನಿಗಧಿ ಮಾಡಿದ್ದರೂ ಕಚೇರಿ ಮಾತ್ರ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿಲ್ಲ.
ಇದನ್ನೂ ಓದಿ: ಕೊಪ್ಪಳಕ್ಕೆ ಸಿಎಂ ಆಗಮನ ಹಿನ್ನೆಲೆ, ಕೇಸರಿ ಬಂಟಿಂಗ್ಸ್ ತೆಗೆಯಲು ಸೂಚನೆ, ಪೊಲೀಸರ ನಿರ್ಧಾರಕ್ಕೆ ಹಿಂದೂ ಸಮುದಾಯ ಆಕ್ರೋಶ
ಮಡಿಕೇರಿ ತಾಲ್ಲೂಕು ಆಡಳಿತ ಸೌಧದ ಕಟ್ಟಡದ ಮೊದಲ ಮಹಡಿಯಲ್ಲಿ ಮೂರು ಕೊಠಡಿಗಳನ್ನು ಭೂದಾಖಲೆಗಳ ಸಹಾಯಕ ನಿರ್ದೇಶಕರ ಇಲಾಖೆಗೆ ಕೊಡಲಾಗಿದೆ. ಅದರಲ್ಲಿ ಎರಡು ಕೊಠಡಿ ವಿಶಾಲವಾಗಿದ್ದು, ಒಂದರಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿ ಕಾರ್ಯ ನಿರ್ವಹಿಸುವುದಕ್ಕೆ ನಿಗಧಿಯಾಗಿದೆ. ಮತ್ತೊಂದು ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಡುವುದಕ್ಕೆ ಬಿಡಲಾಗಿದೆ. ಮೂರನೆಯ ಕೊಠಡಿಯನ್ನು ಸಹಾಯಕ ನಿರ್ದೇಶಕರ ಕಚೇರಿಗೆಂದು ಮೀಸಲಿಡಲಾಗಿದೆ. ಹೀಗೆ ಅಗತ್ಯದಷ್ಟು ವಿಶಾಲವಾದ ಕೊಠಡಿಗಳನ್ನು ಇಲಾಖೆಗಾಗಿ ಮೀಸಲಿರಿಸಿ ಐದು ತಿಂಗಳಾದರೂ ಇಂದಿಗೂ ಖಾಸಗಿ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿಲ್ಲ. ಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಎಂದು ಇಲಾಖೆಯ ಆಯುಕ್ತರೇ ಕಳೆದ ತಿಂಗಳ 16 ರಂದೇ ಪತ್ರ ಬರೆದು ಸೂಚಿಸಿದ್ದಾರೆ. ಆದರೂ ಇಲಾಖೆ ಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡದೇ ಇರುವುದಕ್ಕೆ ಸಾಕಷ್ಟು ಅನುಮಾನ ಮೂಡಿದೆ.
ಸಹಾಯಕ ನಿರ್ದೇಶಕರು ತಿಂಗಳಿಗೆ 41.500 ರೂಪಾಯಿಗಳನ್ನು ಬಾಡಿಗೆ ರೂಪದಲ್ಲಿ ಖಾಸಗಿ ವ್ಯಕ್ತಿಗಳಿಗೆ ನೀಡುತ್ತಿರುವುದು ಯಾರ ಹಣ. ಈ ಹಣ ಜನರ ತೆರಿಗೆಯಲ್ಲವೆ.? ಇಷ್ಟೊಂದು ದೊಡ್ಡ ಪ್ರಮಾಣದ ಬಾಡಿಗೆ ಹಣವನ್ನು ನೀಡುತ್ತಿದ್ದರೂ ಖಾಸಗಿ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿರುವ ದುರುದ್ದೇಶದ ಹಿಂದೆ ದಲ್ಲಾಳಿಗಳ ಹಿತಾಸಕ್ತಿ ಇದೆ. ಕೆಲವು ದಲ್ಲಾಳಿಗಳು ಹಳೇ ಕಚೇರಿಯ ಬಳಿಯೇ ಇದ್ದಾರೆ. ತಾಲ್ಲೂಕು ಆಡಳಿತ ಸೌಧಕ್ಕೆ ಕಚೇರಿ ಸ್ಥಳಾಂತರ ಮಾಡಿದರೆ, ಈ ದಲ್ಲಾಳಿಗಳು ಅಲ್ಲಿಗೆ ಬರುವುದಕ್ಕೆ ಒಂದಿಷ್ಟು ಅಡೆತಡೆಗಳಿವೆ. ಹೀಗಾಗಿಯೇ ಸ್ವಂತ, ಹೊಸಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರ ಮಾಡುವುದಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಕೊಡಗು ಅಭಿವೃದ್ಧಿ ಸಮಿತಿ ಮುಖಂಡ ಪ್ರಸನ್ನಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಹಾಯಕ ನಿರ್ದೇಶಕಿ ಸೌಮ್ಯ ಅವರನ್ನು ಕೇಳಿದರೆ ಮಾತನಾಡುವುದಕ್ಕೆ ನಿರಾಕರಿಸಿದ್ದಾರೆ. ಸ್ಥಳಾಂತರ ಮಾಡುವುದಕ್ಕೆ ಅನುದಾನ ಬೇಕಾಗಿದ್ದು ಸರ್ಕಾರಕ್ಕೆ ಬರೆದಿದ್ದೇವೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವ ಗಾದೆಯ ಮಾತಿನಂತೆ ಸರ್ಕಾರವೇ ಸ್ವಂತ ಕಟ್ಟಡ ನಿರ್ಮಿಸಿಕೊಟ್ಟರು ಅದಕ್ಕೆ ಕಚೇರಿಯನ್ನು ಸ್ಥಳಾಂತರ ಮಾಡದೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಯಾಕೆ ಎನ್ನುವುದು ದೊಡ್ಡ ಅನುಮಾನಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ