ಮುಂಡರಗಿ: ಮಹಿಳೆಯರಿಗೆ ತಪ್ಪಿಲ್ಲ ಬಯಲು ಬಹಿರ್ದೆಸೆ, ಬಯಲುಮುಕ್ತ ಶೌಚಾಲಯ ಕಡತಕ್ಕೆ ಸೀಮಿತ

Kannadaprabha News, Ravi Janekal |   | Kannada Prabha
Published : Oct 21, 2025, 07:23 AM IST
Open defecation in Mundargi

ಸಾರಾಂಶ

ಮುಂಡರಗಿ ಪಟ್ಟಣದಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶೌಚಾಲಯಗಳನ್ನು ನಿರ್ಮಿಸಿದ್ದರೂ, ಬಯಲು ಬಹಿರ್ದೆಸೆ ಇನ್ನೂ ನಿಂತಿಲ್ಲ. ಇದರಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಬ್ಬು ವಾಸನೆ ಹರಡಿದ್ದು, ಜನರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಓಡಾಡುವಂತಾಗಿದೆ.

ಶರಣು ಸೊಲಗಿ

ಮುಂಡರಗಿ (ಅ.21): ಮುಂಡರಗಿ ಪಟ್ಟಣವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಬೇಕೆಂದು ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಕೋಟ್ಯಂತರ ರು.ಗಳನ್ನು ಖರ್ಚು ಮಾಡಿ ಶೌಚಾಲಯಗಳನ್ನು ನಿರ್ಮಿಸುತ್ತಿದ್ದರೂ ಪಟ್ಟಣದಲ್ಲಿ ಬಹಿರ್ದೆಸೆಗೆ ಇನ್ನೂ ಬಯಲು ಗತಿ ಎನ್ನುವಂತಾಗಿದೆ!

ಪಟ್ಟಣದ ಗದಗ- ಮುಂಡರಗಿ ರಸ್ತೆ, ಘಟ್ಟಿರಡ್ಡಿಹಾಳ ರಸ್ತೆ, ರಾಮೇನಹಳ್ಳಿ ರಸ್ತೆ, ಶಿರೋಳ ರಸ್ತೆ, ಬ್ಯಾಲವಾಡಗಿ ರಸ್ತೆ, ಎಸ್.ಎಸ್. ಪಾಟೀಲ ನಗರ, ಹೆಸರೂರು ರಸ್ತೆ ಆಶ್ರಯ ಕಾಲನಿ, ಹೊಸ ಎಪಿಎಂಸಿ ರಸ್ತೆ, ಹಳೆ ಎಪಿಎಂಸಿ ಆವರಣ, ತುಂಗಭದ್ರಾ ನಗರ, ಕೊಪ್ಪಳ ರಸ್ತೆ ಸೇರಿದಂತೆ ಪಟ್ಟಣದ ವಿವಿಧ ಭಾಗಗಳಲ್ಲಿನ ರಸ್ತೆಗಳಲ್ಲಿ ಬೆಳಗಿನ ಜಾವ ತೆರಳಿದರೆ ಮಹಿಳೆಯರು, ಪುರುಷರು ಹಾಗೂ ಮಕ್ಕಳು ರಸ್ತೆಗಳ ಅಕ್ಕಪಕ್ಕ, ಜಮೀನುಗಳಲ್ಲಿ, ಮುಳ್ಳಿನ ಕಂಟಿಗಳ ಮರೆಯಲ್ಲಿ ಬಹಿರ್ದೆಸೆಗೆ ಹೋಗುತ್ತಾರೆ.

ಶಾಲೆಯ ಮುಂದೆಯೇ ಬಹಿರ್ದೆಸೆ:

ಪಟ್ಟಣದ ಎಸ್.ಎಸ್. ಪಾಟೀಲ ನಗರದ ಸಮೀಪದಲ್ಲಿ ಖಾಸಗಿ ಶಾಲೆ ಇದ್ದು, ಶಾಲೆಯ ಮುಂದೆಯೇ ಬಹಿರ್ದೆಸೆ ಮಾಡಿರುವುದು ಕಂಡುಬರುತ್ತಿದೆ. ರುದ್ರಭೂಮಿ ಎಂದರೆ ದೇವಸ್ಥಾನ ಎನ್ನುತ್ತಾರೆ. ದುರಂತವೆಂದರೆ ಅನ್ನದಾನೀಶ್ವರ ರುದ್ರಭೂಮಿಯಲ್ಲಿಯೇ ನಿತ್ಯ ಅನೇಕರು ಬಹಿರ್ದೆಸೆಗೆ ತೆರಳುತ್ತಾರೆ. ಜಲಮಂಡಳಿ ಆವರಣ, ತೋಟಗಾರಿಕೆ ಕಚೇರಿ ಹಾಗೂ ಕೃಷಿ ಇಲಾಖೆ ಕಚೇರಿ ಅಕ್ಕಪಕ್ಕ ಬಯಲು ಬಹಿರ್ದೆಸೆ ಮಾಡುತ್ತಾರೆ.

ಮುಂಡರಗಿ ಪುರಸಭೆಯಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕಾಗಿ ಲಕ್ಷಾಂತರ ರು. ಅನುದಾನ ನೀಡಿದ್ದಾರಾದರೂ ಇದುವರೆಗೂ ಬಯಲು ಬಹಿರ್ದೆಸೆ ಮಾತ್ರ ನಿಂತಿಲ್ಲ. ಈ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ಪುರಸಭೆಯಿಂದ ನಡೆಯುತ್ತಿಲ್ಲ. ಅನೇಕ ಕಡೆ ಪುರಸಭೆಯಿಂದ ಅನುದಾನ ಪಡೆದು ಶೌಚಾಲಯ ನಿರ್ಮಿಸಿಕೊಂಡಿದ್ದರೂ ಅದನ್ನು ಬಳಕೆ ಮಾಡಿಕೊಳ್ಳದೇ ಬಯಲಿಗೆ ಹೋಗುವುದು ಕಂಡುಬರುತ್ತಿದೆ.

ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ:

ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳಲ್ಲಿ ನಿತ್ಯವೂ ಬಯಲು ಬಹಿರ್ದೆಸೆ ಮಾಡುತ್ತಿರುವುದರಿಂದ ಗಬ್ಬುವಾಸನೆ ಹರಡಿ ನಿತ್ಯ ಆ ರಸ್ತೆಯಲ್ಲಿ ಸಂಚರಿಸುವವರು ಸಾಂಕ್ರಾಮಿಕ ರೋಗಕ್ಕೆ ಹೆದರಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ಪಟ್ಟಣದಲ್ಲಿ ಇನ್ನಷ್ಟು ಸಮುದಾಯ ಶೌಚಾಲಯಗಳ ನಿರ್ಮಾಣವಾಗಬೇಕಿದೆ. ಪುರಸಭೆ ಆಡಳಿತ ಮಂಡಳಿ ಮತ್ತು ಪುರಸಭೆ ಅಧಿಕಾರಿಗಳು ಈ ಕುರಿತು ಯಾವ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಿದೆ.

ಜನರಿಗೆ ತೊಂದರೆ: ರುದ್ರಭೂಮಿಯಿಂದ ಪ್ರಾರಂಭವಾಗಿ ಜಲ ಮಂಡಳಿ ಆವರಣ, ತೋಟಗಾರಿ, ಕೃಷಿ ಇಲಾಖೆ ಸೇರಿದಂತೆ ವಿವಿದೆ ನಿತ್ಯವೂ ಬಯಲು ಮಲವಿಸರ್ಜನೆ ಯಾವುದೇ ಅಡೆತಡೆ ಇಲ್ಲದೇ ನಡೆಯುತ್ತಿದ್ದು, ಬೇರೆಡೆಯಿಂದ ಪಟ್ಟಣಕ್ಕೆ ಬರುವವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರ್ತಕ ಕೊಟ್ರೇಶ ಅಂಗಡಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: Aadi Lakshmi Purana Serial - ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ