ಭಾರೀ ಮಳೆ: ಕೆಆರೆಎಸ್‌ ಭರ್ತಿಗೆ ಇನ್ನು ಎರಡೇ ಅಡಿ..!

By Kannadaprabha News  |  First Published Jul 10, 2022, 5:09 AM IST

*  ಘಟ್ಟಪ್ರದೇಶಗಳಲ್ಲಿ ನಿರಂತರ ಮಳೆ
*  ಮೈದುಂಬಿದ ನದಿಗಳು, ಜಲ ಸಂಗ್ರಹ ಏರಿಕೆ
*  ರಾಜ್ಯದ ಅಣೆಕಟ್ಟುಗಳಿಗೆ ಭಾರೀ ಒಳ ಹರಿವು
 


ಬೆಂಗಳೂರು(ಜು.10):  ಈಗಾಗಲೇ ಭಾರಿ ಮಳೆಗೆ ತತ್ತರಿಸಿರುವ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳವಾರದ ತನಕ ‘ಅತ್ಯಂತ ಭಾರಿ’ ಮಳೆಯ ‘ರೆಡ್‌ ಅಲರ್ಟ್‌’ (20 ಸೆಂ.ಮೀ ಗಿಂತ ಹೆಚ್ಚು ಮಳೆಯ ಸಂಭವ) ಘೋಷಿಸಲಾಗಿದೆ.

ರಾಜ್ಯದ ಮಲೆನಾಡು ಮತ್ತು ಘಟ್ಟಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿದ್ದು ಅಣೆಕಟ್ಟೆಗಳಿಗೂ ಭಾರೀ ಪ್ರಮಾಣದ ನೀರು ಹರಿದುಬಂದಿದೆ. ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲೊಂದಾದ ಹಾರಂಗಿ ಜಲಾಶಯ ನಾಲ್ಕು ದಿನಗಳ ಹಿಂದೆಯೇ ಭರ್ತಿಯಾಗಿತ್ತು. ಇದೀಗ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಲು ಕೇವಲ 2 ಅಡಿ ಬಾಕಿಯಿದ್ದು, ಮೈಸೂರಿನ ಕಬಿನಿ ಜಲಾಶಯವೂ ಶೀಘ್ರ ಭರ್ತಿಯಾಗುವ ಸಾಧ್ಯತೆ ಇದೆ. ಇದೇವೇಳೆ ಉತ್ತರ ಕರ್ನಾಟಕದ ಪ್ರಮುಖ ಜಲಾಶಯವಾದ ತುಂಗಭದ್ರಾ ಜಲಾಶಯ ಸಹ ಬಹುಬೇಗನೇ ಭರ್ತಿಯಾಗುವ ಸಾಧ್ಯತೆ ಇದೆ.

Tap to resize

Latest Videos

Mandya: 110 ಅಡಿಯತ್ತ ಕೆಆರ್‌ಎಸ್‌ ಜಲಾಶಯ: ಒಳ ಹರಿವು ಹೆಚ್ಚಳ

ಕಳೆದೊಂದು ವಾರದಿಂದ ಕಾವೇರಿ ಉಗಮ ಸ್ಥಾನ ಕೊಡಗು ಹಾಗೂ ಹೇಮಾವತಿ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಹೆಚ್ಚು ನೀರು ಹರಿದುಬರುತ್ತಿದ್ದು, ಜಲಾಶಯ ಪೂರ್ಣ ತುಂಬಲು 2 ಅಡಿ ಮಾತ್ರ ಬಾಕಿ ಇದೆ. 2009 ಹಾಗೂ 2018ರಲ್ಲಿ ಜುಲೈ ತಿಂಗಳಲ್ಲೇ ಕಾವೇರಿ ಜಲಾಶಯ ಭರ್ತಿಯಾಗಿತ್ತು. ವರುಣನ ಕೃಪೆಯಿಂುದ ಈ ಬಾರಿಯೂ ಜುಲೈ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗುತ್ತಿದೆ. ಇನ್ನು 37.103 ಟಿಎಂಸಿ ಸಂಗ್ರಹಣಾ ಸಾಮರ್ಥ್ಯದ ಹಾಸನ ಜಿಲ್ಲೆಯ ಗೊರೂರಲ್ಲಿರುವ ಹೇಮಾವತಿ ಜಲಾಶಯ ಭರ್ತಿಯಾಗಲು ಕೇವಲ 6 ಅಡಿ ಬಾಕಿ ಇದ್ದು, ಒಳಹರಿವು ಹೆಚ್ಚಾದ್ದರಿಂದ 250 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ನಾಲ್ಕು ದಿನಗಳ ಹಿಂದೆಯೇ ಭರ್ತಿಯಾಗಿರುವ ಹಾರಂಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರಿನ ಒಳಹರಿವು ಹಿನ್ನೆಲೆಯಲ್ಲಿ ಶನಿವಾರ ಅಣೆಕಟ್ಟಿನಿಂದ ನಾಲ್ಕು ಕ್ರಸ್ವ್‌ ಗೇಟ್‌ಗಳ ಮೂಲಕ ನದಿಗೆ 14 ಸಾವಿರ ಕ್ಯುಸೆಕ್‌ ಪ್ರಮಾಣದ ನೀರನ್ನು ಬಿಡಲಾಗಿದೆ.

ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಒಂದು ದಿನದ ಅಂತರದಲ್ಲಿ 9 ಟಿಎಂಸಿ ನೀರು ಹರಿದು ಬಂದಿದೆ. ಹಾಗಾಗಿ ಜಲಾಶಯ ಬಹುಬೇಗನೆ ಭರ್ತಿಯಾಗುವ ಸಾಧ್ಯತೆ ಇದ್ದು ಯಾವುದೇ ಕ್ಷಣದಲ್ಲಿ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗುವುದೆಂದು ತುಂಗಭದ್ರಾ ಮಂಡಳಿ ಎಚ್ಚರಿಸಿದ್ದು, ನದಿಪಾತ್ರದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ಆಂಧ್ರಪ್ರದೇಶದ ಕರ್ನೂಲ್‌ ಜನತೆಗೆ ಅಲರ್ಟ್‌ ಸಂದೇಶ ರವಾನಿಸಲಾಗಿದೆ.

ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿರುವ ಲಿಂಗನಮಕ್ಕಿ ಜಲಾಶಯಕ್ಕೆ ಶನಿವಾರ ಸುಮಾರು 48 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದೆ. ಪರಿಣಾಮ ಒಂದೇ ದಿನದಲ್ಲಿ ಸುಮಾರು 3 ಅಡಿ ಹೆಚ್ಚಾಗಿದ್ದು, ಗರಿಷ್ಠ 1819 ಅಡಿಯ ಈ ಜಲಾಶಯದ ಶನಿವಾರದ ನೀರಿನಮಟ್ಟ 1775.35 ಅಡಿಗೇರಿದೆ. ಭದ್ರಾ ಜಲಾಶಯಕ್ಕೂ ಉತ್ತಮ ನೀರು ಹರಿದು ಬರುತ್ತಿದೆ. ಜಲಾಶಯದ ಮಟ್ಟ168.8 ಅಡಿಗೆ ತಲುಪಿದ್ದು, ಜಲಾಶಯಕ್ಕೆ 28016 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಗಾಜನೂರು ಜಲಾಶಯಕ್ಕೆ 58,770 ಕ್ಯುಸೆಕ್‌ ಒಳಹರಿವು ಇದ್ದು 51,380 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.
 

click me!