ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಕಟ್‌!

By Kannadaprabha NewsFirst Published Aug 9, 2020, 12:39 PM IST
Highlights

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಶುಲ್ಕ ಪಾವತಿಸುವಂತೆ ಒತ್ತಡ ಹೇರಬಾರದು ಎಂದು ಸರ್ಕಾರದ ಸೂಚನೆ| ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಶುಲ್ಕ ವಸೂಲಾತಿಯಲ್ಲಿ ನಿರತವಾದ ಖಾಸಗಿ ಶಾಲಾ ಆಡಳಿತ ಮಂಡಳಿಗಳು| ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಕೆ|

ಬೆಂಗಳೂರು(ಆ.09): ಕೆಲವು ಖಾಸಗಿ ಶಾಲೆಗಳು ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನಿರ್ಬಂಧಿಸಿರುವ ಕುರಿತಂತೆ ನೊಂದಿರುವ ಅನೇಕ ಪೋಷಕರು ನ್ಯಾಯಕ್ಕಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೆಟ್ಟಿಲೇರಿದ್ದಾರೆ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಶುಲ್ಕ ಪಾವತಿಸುವಂತೆ ಒತ್ತಡ ಹೇರಬಾರದು ಎಂದು ಸರ್ಕಾರ ಸೂಚಿಸಿದೆ. ಆದರೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಶುಲ್ಕ ವಸೂಲಾತಿಯಲ್ಲಿ ನಿರತವಾಗಿವೆ. ಕೆಲ ಖಾಸಗಿ ಶಾಲೆಗಳು ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಆನ್‌ಲೈನ್‌ ತರಗತಿಗಳಿಂದ ಹೊರಗಿಟ್ಟಿವೆ. ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳನ್ನು ಬ್ಲಾಕ್‌ ಮಾಡಿ, ಶುಲ್ಕ ಪಾವತಿ ಮಾಡಿದವರಿಗೆ ಮಾತ್ರ ತರಗತಿ ನಡೆಸುತ್ತಿವೆ. ಒಂದು ಕಡೆ ಶುಲ್ಕ ಪಾವತಿಗೆ ಒತ್ತಡ ಹೇರಲಾಗುತ್ತಿದೆ. ಇನ್ನೊಂದೆಡೆ ಕೆಲವು ಶಾಲೆಗಳಂತೂ ಶುಲ್ಕ ಪಾವತಿ ಮಾಡದ ಮಕ್ಕಳಿಗೆ ಆನ್‌ಲೈನ್‌ ತರಗತಿ ನಿರ್ಬಂಧಿಸಿವೆ. ಅಲ್ಲದೆ ಶಾಲೆಗಳಲ್ಲಿ ತರಗತಿಗಳು ಆರಂಭವಾದ ಬಳಿಕ ಯಾವುದನ್ನೂ ಪುನರ್ಮನನ ಮಾಡುವುದಿಲ್ಲ ಎಂಬ ಸೂಚನೆ ಪೋಷಕರನ್ನು ಕಳವಳಕ್ಕೀಡುಮಾಡಿದೆ.

Latest Videos

ಆನ್‌ಲೈನ್‌ ಕ್ಲಾಸ್‌ನಲ್ಲಿ ಮಾದರಿಯಾದ ಗ್ರಾಮೀಣ ಶಾಲೆ; ಪಾಠದ ವಿಡಿಯೊ ವೈರಲ್

ಖಾಸಗಿ ಶಾಲೆಯ ಆಡಳಿತ ಮಂಡಳಿಗಳ ಈ ನಡೆ ಬಗ್ಗೆ ಕೆರಳಿರುವ ಪೋಷಕರು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಕ್ರಮಕೈಗೊಳ್ಳುವಂತೆ ದೂರು ಸಲ್ಲಿಸುತ್ತಿದ್ದಾರೆ. ಅಲ್ಲದೆ ಖಾಸಗಿ ಶಾಲೆಗಳಲ್ಲಿ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿರುವ ಬಗ್ಗೆ ರಾಜ್ಯದ ‘ಮಕ್ಕಳ ಸಹಾಯವಾಣಿ’ಗೂ 15ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ವಿಬ್‌ಗಯಾರ್‌ ಶಾಲೆಯ ವಿರುದ್ಧ 8 ದೂರುಗಳು, ಗುರುಕುಲ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಖಾಸಗಿ ಶಾಲೆಗಳ ವಿರುದ್ಧ ಒಟ್ಟು 15 ದೂರುಗಳು ಮಕ್ಕಳ ಸಹಾಯವಾಣಿಯಲ್ಲಿ ದಾಖಲಾಗಿವೆ.

ಈ ಬಗ್ಗೆ ಮಾತನಾಡಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಅಂತೋಣಿ ಸೆಬಾಸ್ಟಿನ್‌, ಖಾಸಗಿ ಶಾಲೆಗಳಲ್ಲಿ ಶುಲ್ಕ ಕಟ್ಟಿಲ್ಲ ಎಂಬ ಕಾರಣದಿಂದ ಮಕ್ಕಳಿಗೆ ಆನ್‌ಲೈನ್‌ ತರಗತಿಗಳನ್ನು ನೀಡುತ್ತಿಲ್ಲ ಎಂಬ ದೂರುಗಳು ನಿತ್ಯವೂ ಆಯೋಗಕ್ಕೆ ಬರುತ್ತಿವೆ. ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌ ಸೌಲಭ್ಯಗಳಿರುವುದಿಲ್ಲ. ಇದರಿಂದ ಮಕ್ಕಳು ಆನ್‌ಲೈನ್‌ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಬಗ್ಗೆ ಗಮನಹರಿಸುವಂತೆ ಹಾಗೂ ಖಾಸಗಿ ಶಾಲೆಗಳ ಶುಲ್ಕ ಬೇಡಿಕೆ ಕುರಿತಂತೆ ಕ್ರಮಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
 

click me!