ದಾಖಲೆ ಮಟ್ಟಕ್ಕೆ ಏರಿದೆ ಈರುಳ್ಳಿ ದರ : ಮುಟ್ಟಿದ್ರೆ ಕಣ್ಣಲ್ಲಿ ನೀರು!

By Kannadaprabha NewsFirst Published Dec 4, 2019, 9:50 AM IST
Highlights

ಮಹಾರಾಷ್ಟ್ರದ ಪುಣೆ ಈರುಳ್ಳಿ ಬೆಲೆ ಏರಿಕೆ ಬೆನ್ನಲ್ಲೇ ಕರ್ನಾಟಕದಲ್ಲಿ ಬೆಳೆಯುವ ಉತ್ಕೃಷ್ಟಗುಣಮಟ್ಟದ ಈರುಳ್ಳಿ ಬೆಲೆಯೂ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 120 ರು. ಮುಟ್ಟಿದ್ದು, ಗ್ರಾಹಕರಿಗೆ ಬಿಸಿ ತಟ್ಟಲಿದೆ.

ಬೆಂಗಳೂರು [ಡಿ.04]:  ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ.ಜಿ.ಗೆ ನೂರರ ಗಡಿ ದಾಟಿದೆ. ಮಹಾರಾಷ್ಟ್ರದ ಪುಣೆ ಈರುಳ್ಳಿ ಬೆಲೆ ಏರಿಕೆ ಬೆನ್ನಲ್ಲೇ ಕರ್ನಾಟಕದಲ್ಲಿ ಬೆಳೆಯುವ ಉತ್ಕೃಷ್ಟಗುಣಮಟ್ಟದ ಈರುಳ್ಳಿ ಬೆಲೆಯೂ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 120 ರು. ಮುಟ್ಟಿದ್ದು, ಗ್ರಾಹಕರಿಗೆ ಬಿಸಿ ತಟ್ಟಲಿದೆ.

ಈ ವರ್ಷ ಭಾರಿ ಮಳೆಗೆ ನೆಲಕಚ್ಚಿರುವ ಈರುಳ್ಳಿಗೆ ಮಹಾನಗರಗಳಲ್ಲಿ ಬೇಡಿಕೆ ಕುದುರಿತ್ತು. ನವೆಂಬರ್‌ ಮೊದಲ ವಾರದಿಂದ ಏರಿಕೆಯ ಹಾದಿ ಹಿಡಿದಿದ್ದ ಈರುಳ್ಳಿ ದರ ನಿರಂತರವಾಗಿ ಹೆಚ್ಚಳ ಕಂಡು ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 10000 ರು. (ಕೆ.ಜಿ.100) ವರೆಗೆ ತಲುಪಿತ್ತು. ನಂತರದ ದಿನಗಳಲ್ಲಿ ಸಗಟು ದರ ಕ್ವಿಂಟಾಲ್‌ಗೆ 7000-8000 (ಕೆ.ಜಿ.ಗೆ 80-85) ರು.ಗೆ ಇಳಿಕೆಯಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿ. 80ರಿಂದ 120 ರು.ವರೆಗೆ ಮಾರಾಟವಾಗುತ್ತಿತ್ತು. ಈಗ ಸಗಟು ದರ ಇನ್ನಷ್ಟುಏರಿಕೆಯಾಗಿರುವುದು ಗ್ರಾಹಕರು ಈರುಳ್ಳಿ ಖರೀದಿಗೆ ಯೋಚಿಸುವಂತಾಗಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಬೇಡಿಕೆಗೆ ತಕ್ಕಷ್ಟುಪೂರೈಕೆಯಾಗುತ್ತಿಲ್ಲ. ಹೀಗಾಗಿ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಈಗ ನಿರಾಸೆಯಾಗಿದೆ. ಜನವರಿ-ಫೆಬ್ರವರಿ ಮಾಸದಲ್ಲಿ ಹೊಸ ಬೆಳೆ ಬರಲಿದ್ದು, ಅಲ್ಲಿಯವರೆಗೆ ದರ ಏರಿಕೆ ಸಾಮಾನ್ಯ ಎನ್ನಲಾಗುತ್ತಿದೆ.

ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಉತ್ಪಾದನೆಯಾಗುವುದು ಮಹಾರಾಷ್ಟ್ರದಲ್ಲಿ. ಮಹಾರಾಷ್ಟ್ರದಲ್ಲಿ ಸಗಟು ದರ ಕೆ.ಜಿ.ಗೆ 130 ರು., ಗುಜರಾತ್‌ ಮಾರುಕಟ್ಟೆಯಲ್ಲಿ ಕೆ.ಜಿ. 100 ರು. ನಿಗದಿಯಾಗಿ ತಲ್ಲಣ ಸೃಷ್ಟಿಸಿದೆ. ದೇಶದೆಲ್ಲೆಡೆ ಈರುಳ್ಳಿ ಕೊರತೆ ಇರುವುದರಿಂದ ಬೇಡಿಕೆ ಹೆಚ್ಚಿದೆ. ಸಗಟು ಮಾರು​ಕ​ಟ್ಟೆ​ಯಲ್ಲಿ ಹೊಸ ಹಾಗೂ ಹಳೆಯ ಈರುಳ್ಳಿಗೂ ಉತ್ತಮ ಬೆಲೆ ಇದೆ. ರಾಜ್ಯದಲ್ಲಿ ಬೆಳೆದಿರುವ ಚಿಕ್ಕ ಗಾತ್ರದ ಈರುಳ್ಳಿಯ ದರ ಒಂದು ಕ್ವಿಂಟಾಲ್‌ಗೆ 3000ದಿಂದ 6000 ರು. ಇದೆ. ಸಗಟು ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ ಕ್ವಿಂಟಾಲ್‌ಗೆ 8000-10000 ರು., ಉತ್ತಮ ಗುಣಮಟ್ಟದ ಈರುಳ್ಳಿಗೆ ಕ್ವಿಂಟಾಲ್‌ಗೆ 10000-12000 ರು.ವರೆಗೆ ಬೆಲೆ ನಿಗದಿಯಾಗಿದೆ ಎಂದು ಎಪಿಎಂಸಿ ಈರುಳ್ಳಿ ವರ್ತಕರಾದ ಬಿ.ರವಿಶಂಕರ್‌ ತಿಳಿಸಿದರು.

ಇಳಿಯಿತು ಈರುಳ್ಳಿ ಬೆಲೆ : ಈಗೆಷ್ಟು ...

ಬೆಂಗಳೂರು ಎಪಿಎಂಸಿಗೆ ಚಿತ್ರದುರ್ಗ, ದಾವಣಗೆರೆ, ಗದಗ, ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಈರುಳ್ಳಿ ಸರಬರಾಜಾಗುತ್ತದೆ. ಮಹಾರಾಷ್ಟ್ರ ಹಾಗೂ ರಾಜ್ಯದಿಂದ ಸರಬರಾಜಾಗುವ ಈರುಳ್ಳಿ ಪ್ರಮಾಣದಲ್ಲೂ ಇಳಿಕೆಯಾಗಿದೆ. ಮಂಗಳವಾರ 42,500 ಚೀಲ ಈರುಳ್ಳಿ ಬಂದಿದೆ. ಈ ಹಿಂದೆ ಮಹಾರಾಷ್ಟ್ರದಿಂದ ಬರುತ್ತಿದ್ದ 60ರಿಂದ 70 ಸಾವಿರ ಚೀಲ ಈರುಳ್ಳಿ ಪ್ರಮಾಣ, ಈಗ 2500 (5 ಗಾಡಿ ಲೋಡ್‌) ಚೀಲಗಳಿಗೆ ಇಳಿಕೆಯಾಗಿದೆ ಎಂದರು.

ಇನ್ನಷ್ಟುಏರಿಕೆ ಆಗಲೂಬಹುದು:  ವಿಪರೀತ ಮಳೆಗೆ ಕಟಾವಿಗೆ ಬಂದಿದ್ದ ಈರುಳ್ಳಿ ಬೆಳೆ ಭೂಮಿಯಲ್ಲೇ ಕೊಳೆತು ಹೋಗಿತ್ತು. ಬೆಳೆ ಹಾಳಾಗಿರುವುದರಿಂದ ಮಾರುಕಟ್ಟೆಗೆ ಸರಬರಾಜಬೇಕಿದ್ದ ಪ್ರಮಾಣವೂ ಕಡಿಮೆಯಾಗಿದೆ. ಇದ್ದ ಹಳೆಯ ದಾಸ್ತಾನು ಬರಿ​ದಾ​ಗು​ತ್ತಿದೆ. ಮುಂದಿನ ದಿನಗಳಲ್ಲಿ ಮಳೆ ನಿರಂತರವಾಗಿ ಸುರಿದರೆ ಬೆಳೆದ ಬೆಳೆಯೂ ನೆಲಕಚ್ಚುವ ಭೀತಿ ರೈತರದ್ದಾಗಿದೆ. ಪೂರೈಕೆ ಕೊರತೆ ಮುಂದು​ವ​ರೆ​ದರೆ ಮುಂಬ​ರುವ ದಿನ​ಗ​ಳಲ್ಲಿ ದರ ಮತ್ತೆ ಏರಿ​ಕೆಯ ಹಾದಿ ಹಿಡಿಯಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಹಾಫ್ಸ್‌ಕಾಮ್ಸ್‌ನಲ್ಲಿ ಈರುಳ್ಳಿ (ದಪ್ಪ ಗಾತ್ರ) ಕೆ.ಜಿ. 120 ರು.ಗೆ ಖರೀದಿಯಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸದ್ಯ ಕೆ.ಜಿ. 130ರಿಂದ 140 ರು.ಗೆ ಖರೀದಿಯಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ಇರುವುದರಿಂದ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಗೆ ಈರುಳ್ಳಿ ಬರುತ್ತಿಲ್ಲ. ಪೂರೈಕೆ ಕೊರತೆಯಿಂದ ದಿನಕ್ಕೊಂದು ಬೆಲೆ ನಿಗದಿಯಾಗುತ್ತಿದೆ. ಬೆಲೆಯ ಏರಿಳಿತದ ಬಗ್ಗೆ ನಿರ್ದಿಷ್ಟವಾಗಿ ಏನು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಜಯನಗರದ ತರಕಾರಿ ವ್ಯಾಪಾರಿ ರಂಜಿತ್‌.

click me!