ರಾಜ್ಯಕ್ಕೆ ಕೊರೋನಾ ಲಗ್ಗೆ ಇಟ್ಟು 1 ವರ್ಷ: ಸೋಂಕು, ಸಾವಿನಲ್ಲಿ ಈಗ ಕರ್ನಾಟಕ ದೇಶದ ಟಾಪ್‌ ರಾಜ್ಯ!

Published : Mar 08, 2021, 07:13 AM ISTUpdated : Mar 08, 2021, 08:32 AM IST
ರಾಜ್ಯಕ್ಕೆ ಕೊರೋನಾ ಲಗ್ಗೆ ಇಟ್ಟು 1 ವರ್ಷ: ಸೋಂಕು, ಸಾವಿನಲ್ಲಿ ಈಗ ಕರ್ನಾಟಕ ದೇಶದ ಟಾಪ್‌ ರಾಜ್ಯ!

ಸಾರಾಂಶ

ವರ್ಷದ ಹಿಂದೆ ಇದೇ ದಿನ ಪತ್ತೆಯಾಗಿತ್ತು ರಾಜ್ಯದ ಮೊದಲ ಪ್ರಕರಣ| ರಾಜ್ಯಕ್ಕೆ ಕೊರೋನಾ ಲಗ್ಗೆ ಇಟ್ಟು 1 ವರ್ಷ| ಸೋಂಕು, ಸಾವಿನಲ್ಲಿ ಈಗ ಕರ್ನಾಟಕ ದೇಶದ ಟಾಪ್‌ ರಾಜ್ಯ

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಜ.08): ಇಡೀ ಜಗತ್ತನ್ನು ತಲ್ಲಣಗೊಳಿಸಿ, ಮನುಕುಲದ ಜೀವನ ಕ್ರಮದ ಮೇಲೆ ಅಗಾಧ ಪರಿಣಾಮ ಬೀರಿ ಹೊಸ ಸಹಜತೆ (ನ್ಯೂ ನಾರ್ಮಲ್‌) ಎಂಬ ಪರಿಕಲ್ಪನೆಯನ್ನೇ ಸೃಷ್ಟಿಸಿರುವ ಕೊರೋನಾ ವೈರಸ್‌ ರಾಜ್ಯಕ್ಕೆ ಕಾಲಿಟ್ಟದ್ದು ದೃಢಪಟ್ಟು ಸೋಮವಾರಕ್ಕೆ ಒಂದು ವರ್ಷ ತುಂಬಲಿದೆ.

ಅಮೆರಿಕದ ಟೆಕ್ಸಾಸ್‌ನಿಂದ ಬೆಂಗಳೂರಿಗೆ 2020ರ ಫೆಬ್ರವರಿ 28ರಂದು ಮರಳಿದ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರಿಗೆ ವಿಪರೀತ ಜ್ವರ, ನೆಗಡಿ ಕಾಣಿಸಿಕೊಂಡಿತ್ತು. ಮಾಚ್‌ರ್‍ 8ರಂದು ಅವರಿಗೆ ಕೊರೋನಾ ದೃಢಪಟ್ಟಿತ್ತು. ಇದು ರಾಜ್ಯದಲ್ಲಿ ಕೊರೋನಾ ಕಾಣಿಸಿಕೊಂಡ ಮೊದಲ ಪ್ರಕರಣ ಎನ್ನಿಸಿತ್ತು.

ನಂತರದ ಒಂದು ವರ್ಷದ ಅವಧಿಯಲ್ಲಿ ಕೊರೋನಾದಿಂದ ಸಂಭವಿಸಿರುವ ಸಾವು- ನೋವುಗಳಲ್ಲಿ ದೇಶದಲ್ಲೇ ಅಗ್ರ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೊರೋನಾ ಸೋಂಕನ್ನು ಹತ್ತಿಕ್ಕುವಲ್ಲಿ ರಾಜ್ಯ ಯಶ ಪಡೆಯುತ್ತಿದೆ ಎಂಬ ಭಾವನೆ ಸೃಷ್ಟಿಯಾಗಿತ್ತು. ಆದರೆ ಇತ್ತೀಚಿನ 10-15 ದಿನಗಳ ವಿದ್ಯಮಾನ ಗಮನಿಸಿದರೆ ರಾಜ್ಯ ಮತ್ತೆ ಎರಡನೇ ಅಲೆಯ ಅಘಾತಕ್ಕೆ ಸಿಲುಕಲಿದೆಯೇ ಎಂಬ ಆತಂಕ ಮೂಡುತ್ತಿದೆ.

ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 9.55 ಲಕ್ಷ ಮಂದಿಯಲ್ಲಿ ಸೋಂಕು ಧೃಢಪಟ್ಟಿದೆ. 12,362 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. 1.92 ಕೋಟಿಯಷ್ಟುಕೊರೋನಾ ಪರೀಕ್ಷೆ ನಡೆದಿದೆ. ರಾಜ್ಯದ ಒಟ್ಟಾರೆ ಪಾಸಿಟಿವಿಟಿ ದರ ಶೇ. 4.96ರಷ್ಟಿದೆ. ಒಟ್ಟು ಸೋಂಕಿನ ಪ್ರಕರಣದಲ್ಲಿ ಮಹಾರಾಷ್ಟ್ರ ಮತ್ತು ಕೇರಳದ ಬಳಿಕದ ಸ್ಥಾನವನ್ನು ಕರ್ನಾಟಕ ಹೊಂದಿದೆ. ರಾಜ್ಯಕ್ಕಿಂತ ಹೆಚ್ಚು ಪ್ರಕರಣಗಳಿರುವ ಎರಡೂ ರಾಜ್ಯದಲ್ಲಿಯೂ ಈಗಾಗಲೇ ಎರಡನೇ ಅಲೆ ಕಾಣಿಸಿಕೊಂಡಿದೆ. ಕೋವಿಡ್‌ ಪೀಡಿತರ ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ, ತಮಿಳುನಾಡಿನ ಬಳಿಕದ ಸ್ಥಾನದಲ್ಲಿ ರಾಜ್ಯವಿದೆ.

ಏರಿಳಿತ, 2ನೇ ಅಲೆ ಭೀತಿ:

ಆಗಸ್ಟ್‌, ಸೆಪ್ಟೆಂಬರ್‌ಗಳಲ್ಲಿ ದಿನಕ್ಕೆ ಹತ್ತು ಸಾವಿರದಷ್ಟುದೈನಂದಿನ ಪ್ರಕರಣಗಳು ವರದಿಯಾಗುತ್ತಿದ್ದರೆ ಆ ಬಳಿಕ ಸೋಂಕಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ದಾಖಲಾಗಿದೆ. ಫೆಬ್ರವರಿಯ ಹೊತ್ತಿಗೆ ಪ್ರತಿದಿನ 350ರಿಂದ 400 ಪ್ರಕರಣಗಳಷ್ಟೇ ವರದಿಯಾಗಿವೆ. ಆದರೆ ಕಳೆದ ಒಂದೆರಡು ವಾರಗಳಲ್ಲಿ ಮತ್ತೆ ದೈನಂದಿನ ಪ್ರಕರಣಗಳ ಸಂಖ್ಯೆ 500ಕ್ಕೆ ಏರಿಕೆಯಾಗಿದ್ದು ಎರಡನೇ ಅಲೆಯ ಲಕ್ಷಣಗಳು ಗೋಚರಿಸಿವೆ.

ಈ ನಡುವೆ, ದೇಶದಲ್ಲೇ ಕೋವಿಡ್‌ನಿಂದ ಮೊದಲ ಸಾವು (ಮಾಚ್‌ರ್‍ 12) ರಾಜ್ಯದಲ್ಲಿ ವರದಿಯಾಗಿತ್ತು. ಹಾಗೆಯೇ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಲಾಕ್‌ಡೌನ್‌ ಹೇರಲಾಗಿತ್ತು. ಬಿಗಿಯಾದ ನಿಯಮಗಳಿಂದ ಮಾಚ್‌ರ್‍, ಏಪ್ರಿಲ್‌, ಮೇ ತಿಂಗಳುಗಳಲ್ಲಿ ರಾಜ್ಯದಲ್ಲಿ ಬೆರಳೆಣಿಕೆಯ ಪ್ರಕರಣಗಳಷ್ಟೇ ವರದಿಯಾಗುತ್ತಿದ್ದವು. ಆ ಬಳಿಕ ದೆಹಲಿ, ಮಹಾರಾಷ್ಟ್ರ, ಕೇರಳದಿಂದ ರಾಜ್ಯಕ್ಕೆ ಆಗಮಿಸಿದ ಪ್ರಯಾಣಿಕರಿಂದ ಮತ್ತು ಲಾಕ್‌ಡೌನ್‌ ನಿಯಮಗಳು ಸಡಿಲಗೊಂಡು ಆರ್ಥಿಕ ಚಟುವಟಿಕೆಗಳು ಪುನರಾಂಭಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಕೋವಿಡ್‌ ಪರಿಸ್ಥಿತಿ ಬಿಗಡಾಯಿಸಿತ್ತು.

ಜೂನ್‌ನಿಂದ ಆಕ್ಟೋಬರ್‌ ತನಕ ರಾಜ್ಯದ ಕೋವಿಡ್‌ ವಿಷಮ ಸ್ಥಿತಿ ಉತ್ತುಂಗದಲ್ಲಿತ್ತು. ದಿನಕ್ಕೆ ನೂರಾರು ಸಾವು, ಹತ್ತು ಸಾವಿರದಷ್ಟುಪ್ರಕರಣಗಳು, ಲಕ್ಷಕ್ಕೂ ಮೀರಿದ ಸಕ್ರಿಯ ಪ್ರಕರಣ ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲೆ ಅಗಾಧ ಒತ್ತಡ ಸೃಷ್ಟಿಸಿತ್ತು. ಆ ಬಳಿಕದ ದಿನಗಳಲ್ಲಿ ಕೋವಿಡ್‌ ಸೋಂಕು ಇಳಿಕೆ ಹಾದಿಯಲ್ಲಿ ಸಾಗಿತ್ತು. ಆದರೆ ಇದೀಗ ಕೋವಿಡ್‌ ಲಸಿಕೆ ಅಭಿಯಾನ ನಡೆಯುತ್ತಿದ್ದರೂ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳತ್ತ ಜನರ ನಿರ್ಲಕ್ಷ್ಯ ವಹಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಎರಡನೇ ಅಲೆ ಅಪ್ಪಳಿಸುವ ಆತಂಕವನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಹೊಸ ಪಾಠ ಕಲಿತಿದ್ದೇವೆ

ಆರೋಗ್ಯ ಕ್ಷೇತ್ರದಲ್ಲಿನ ಬಂಡವಾಳ ಹೂಡಿಕೆ ಮತ್ತು ಜನರೊಂದಿಗೆ ಸೇರಿ ಯೋಜನೆಗಳನ್ನು ಜಾರಿಗೆ ತರಬೇಕು ಎಂಬ ಪಾಠವನ್ನು ನಾವು ಕಲಿತಿದ್ದೇವೆ. ಕೋವಿಡ್‌ ಬಂದ ಹೊತ್ತಿನಲ್ಲಿ ರಾಜ್ಯದಲ್ಲಿ ಮೂರು ಪ್ರಯೋಗಾಲಯಗಳಿದ್ದರೆ ಈಗ ನೂರಕ್ಕೂ ಹೆಚ್ಚು ಲ್ಯಾಬ್‌ಗಳಿವೆ. ತೀವ್ರ ನಿಗಾ ವಿಭಾಗಗಳಲ್ಲಿ ಉತ್ತಮ ವ್ಯವಸ್ಥೆ ಸೃಷ್ಟಿಯಾಗಿದೆ. ಆರೋಗ್ಯ ವಲಯದಲ್ಲಿನ ಸಾವಿರಾರು ಖಾಲಿ ಹುದ್ದೆಗಳನ್ನು ತುಂಬಲಾಗಿದೆ. ಟೆಲಿ-ಐಸಿಯು ತಂತ್ರಜ್ಞಾನ ನೂರಾರು ಜನರ ಪ್ರಾಣ ಉಳಿಸಿದೆ.

- ಗಿರಿಧರ್‌ ಬಾಬು, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ

ಮಾರಕ ವೈರಸ್‌

-ಅಮೆರಿಕದಿಂದ ಆಗಮಿಸಿದ ಬೆಂಗಳೂರಿನ ಸಾಫ್ಟ್‌ವೇರ್‌ ಉದ್ಯೋಗಿಯಲ್ಲಿ ಪತ್ತೆಯಾಗಿತ್ತು ಮೊದಲ ಸೋಂಕು

9.55 ಲಕ್ಷ:

ರಾಜ್ಯದ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ

12362 ಸಾವು:

ಕೋವಿಡ್‌ಗೆ ಒಂದೇ ವರ್ಷದಲ್ಲಿ ಬಲಿಯಾದವರು

1.92 ಕೋಟಿ ಟೆಸ್ಟ್‌:

ಕರ್ನಾಟಕದಲ್ಲಿ ಈವರೆಗೆ ನಡೆದಿರುವ ಪರೀಕ್ಷೆಗಳು

10000 ಪ್ರಕರಣ:

ಆಗಸ್ಟ್‌, ಸೆಪ್ಟೆಂಬರಲ್ಲಿ ನಿತ್ಯ ದಾಖಲಾಗುತ್ತಿದ್ದ ಕೇಸ್‌

350 ಕೇಸ್‌:

ಫೆಬ್ರವರಿಯಲ್ಲಿ ಸೋಂಕಿತರ ಸಂಖ್ಯೆ ಭಾರಿ ಕುಸಿತ

500 ಪ್ರಕರಣ:

ಇದೀಗ ದಿಢೀರ್‌ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ. 2ನೇ ಅಲೆ ಭೀತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!