
ವಿಧಾನಸಭೆ : ‘ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ನಿರ್ಮಾಣವಾಗಿದೆ. ಆದರೂ, ಪ್ರತಿ ತಿಂಗಳು ಒಂದು ಕುಟುಂಬಕ್ಕೆ ಒಂದು ಎಲ್‌ಪಿಜಿ ಸಿಲಿಂಡರ್ ಪೂರೈಸುತ್ತೇವೆ. ದೇಶ ಸಂಕಷ್ಟದಲ್ಲಿರುವಾಗ ಜನ ಸಹಕಾರ ನೀಡಬೇಕು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಶೂನ್ಯ ವೇಳೆಯಲ್ಲಿ ಅಡುಗೆ ಅನಿಲ ಸಮಸ್ಯೆ ಕುರಿತು ಕಾಂಗ್ರೆಸ್ ಸದಸ್ಯ ಎಚ್.ಡಿ. ರಂಗನಾಥ್ ಪ್ರಸ್ತಾಪಿಸಿ ನಡೆದ ಚರ್ಚೆಯ ಬಳಿಕ ಸಚಿವರು ಉತ್ತರ ನೀಡಿದರು.
ದೇಶಕ್ಕೆ ಅಗತ್ಯವಿರುವ ಎಲ್‌ಪಿಜಿಯಲ್ಲಿ ಶೇ.70 ರಷ್ಟು ವಿದೇಶದಿಂದಲೇ ಬರಬೇಕು. ಇರಾನ್-ಇಸ್ರೇಲ್ ಯುದ್ಧದಿಂದ ಕಚ್ಚಾತೈಲ ಹಾಗೂ ಎಲ್‌ಪಿಜಿ ದೇಶಕ್ಕೆ ಬರುತ್ತಿಲ್ಲ. ಉಳಿದಂತೆ ಶೇ.30 ರಷ್ಟು ಎಲ್‌ಪಿಜಿ ಉತ್ಪಾದನೆ ನಮ್ಮ ದೇಶದಲ್ಲೇ ಆಗುತ್ತದೆ. ಆ ಎಲ್‌ಪಿಜಿಯಿಂದ ಗೃಹ ಬಳಕೆಗೆ ಸಮಸ್ಯೆಯಾಗದಂತೆ ಸರಬರಾಜು ಮಾಡಬಹುದು. ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಅಂದಾಜಿನ ಪ್ರಕಾರ 14 ಕೆ.ಜಿ.ಯ ಗ್ಯಾಸ್ ಸಿಲಿಂಡರ್ 4-5 ಮಂದಿ ಸದಸ್ಯರಿರುವ ಕುಟುಂಬಕ್ಕೆ 25 ದಿನಕ್ಕಿಂತಲೂ ಹೆಚ್ಚು ಕಾಲ ಬರುತ್ತದೆ. ಈ ಅಂದಾಜಿನಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಪೂರೈಸುತ್ತೇವೆ. ಮಿತವ್ಯಯಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ತೈಲ ಸರಬರಾಜು ಕಂಪೆನಿಗಳಾದ ಎಚ್.ಪಿ, ಇಂಡಿಯನ್ ಆಯಿಲ್, ಬಿಪಿಸಿಎಲ್ ಸೇರಿದಂತೆ ಇತರೆ ಕಂಪೆನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಮೇಲೆ ಮಾತ್ರ ನಿಯಂತ್ರಣ ಹೇರಲಾಗಿದೆ.
ಹೋಟೆಲ್, ಕಲ್ಯಾಣ ಮಂಟಪ ಹಾಗೂ ಇತರೆಡೆ ಸಹಕಾರ ನೀಡಬೇಕು. ಹಾಸ್ಟೆಲ್‌ಗಳು, ಆಸ್ಪತ್ರೆಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಮುನಿಯಪ್ಪ ಭರವಸೆ ನೀಡಿದರು.
ಸರಬರಾಜಿನಲ್ಲಿ ಸಮಸ್ಯೆ ಆಗಿಲ್ಲ:
ಇಲ್ಲಿಯವರೆಗೂ ಎಲ್ಲಿಯೂ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಿಲ್ಲ. ಯಾವುದೇ ದೇಶದಿಂದ ಗ್ಯಾಸ್ ಸರಬರಾಜು ಆಗಿಲ್ಲವೆಂದರೂ ನಾವು ಕನಿಷ್ಠ ಶೇ. 20ರಿಂದ 30ರಷ್ಟು ಸ್ವಂತವಾಗಿಯೇ ಅನಿಲ ಉತ್ಪಾದನೆ ಮಾಡಬಹುದು. ಈ ಪ್ರಮಾಣದಲ್ಲಿಯೇ ನಾವು ಅಡುಗೆ ಅನಿಲ ಗ್ಯಾಸ್ ಬಳಕೆ ಮಾಡಬಹುದಾಗಿದೆ. ಹೀಗಾಗಿ ಗ್ರಾಹಕರು ಆತಂಕಕ್ಕೆ ಒಳಗಾಗಿ ಮುಂಗಡವಾಗಿ ಕಾಯ್ದಿರಿಸಬಾರದು. ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಬಾರದು ಎಂದರು.
ಈ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ಅವರ ಉತ್ತರಕ್ಕೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ಯಾರಿಗೆ ವಾಣಿಜ್ಯ ಎಲ್‌ಪಿಜಿ ದೊರೆಯುತ್ತದೆ?
ಆಸ್ಪತ್ರೆ, ಹಾಸ್ಟೆಲ್‌ಗಳು, ಶಾಲಾ ಕಾಲೇಜು ಹಾಗೂ ತುರ್ತು ಸೇವೆಗಳಿಗೆ ವಾಣಿಜ್ಯ ಸಿಲಿಂಡರ್‌ನ್ನು ಆದ್ಯತೆಯಾಗಿ ಪರಿಗಣಿಸಿ ಪೂರೈಸುತ್ತೇವೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಯಾರಿಗೆ ವಾಣಿಜ್ಯ ಸಿಲಿಂಡರ್ ವ್ಯತ್ಯಯ?
ಹೋಟೆಲ್ ಮತ್ತು ರೆಸ್ಟೋರೆಂಟ್, ಕಲ್ಯಾಣ ಮಂಟಪಗಳ ಮಾಲೀಕರು ಸಹಕರಿಸಬೇಕು ವಾಣಿಜ್ಯ ಸಿಲಿಂಡರ್ ಪೂರೈಕೆ ವಿಚಾರದಲ್ಲಿ ಸಹಕರಿಸಬೇಕು ಎಂದು ಮುನಿಯಪ್ಪ ಮನವಿ ಮಾಡಿದ್ದಾರೆ.
ಪ್ರತಿ ವಾರ ಸಿಎಸ್ ಅಧ್ಯಕ್ಷತೆಯಲ್ಲಿ ಸಭೆ
ಎಲ್‌ಪಿಜಿ ಸಿಲಿಂಡರ್ ಲಭ್ಯತೆ ಹಾಗೂ ಪೂರೈಕೆ ಕುರಿತು ಗೇಲ್, ತೈಲ ಕಂಪೆನಿಗಳ ಜತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಪ್ರತಿ ವಾರ ಸಭೆ ನಡೆಸಿ ವರದಿ ಪಡೆಯಲಿದ್ದಾರೆ. ಅದರ ಪ್ರಕಾರ ಜನರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಕೆ.ಎಚ್. ಮುನಿಯಪ್ಪ ಹೇಳಿದರು.
ಕೈ-ಬಿಜೆಪಿ ಸದಸ್ಯರ ನಡುವೆ ತೀವ್ರ ಗದ್ದಲ
ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಎಚ್.ಡಿ. ರಂಗನಾಥ್ ಅವರು ಕೆ.ಎಚ್. ಮುನಿಯಪ್ಪ ಅವರ ಉತ್ತರಕ್ಕೆ ಉಪಪ್ರಶ್ನೆ ಕೇಳಿದರು. 900 ರು. ಇದ್ದ ಸಿಲಿಂಡರ್ ಕಾಳಸಂತೆಯಲ್ಲಿ 1,800 ರು. ಆಗಿದೆ. ನರೇಂದ್ರ ಮೋದಿ ಸರ್ಕಾರದ ದುರ್ಬಲ ವಿದೇಶಾಂಗ ನೀತಿಯೇ ಇದಕ್ಕೆ ಕಾರಣ ಎಂದು ಹೇಳಿದರು.
ಮೋದಿ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಎದ್ದು ನಿಂತ ಬಿಜೆಪಿ ಸದಸ್ಯರು ತೀವ್ರ ಗದ್ದಲ ಸೃಷ್ಟಿಸಿದರು. ಬಿಜೆಪಿಯ ಆರ್.ಅಶೋಕ್, ಸುನಿಲ್‌ಕುಮಾರ್, ಎಸ್.ಸುರೇಶ್‌ಕುಮಾರ್ ರಂಗನಾಥ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ಸುನಿಲ್‌ಕುಮಾರ್, ಯುದ್ಧ ನಡೆಯುವಾಗ ಸಮಸ್ಯೆ ಉದ್ಬವಿಸುತ್ತದೆ. ಇಡೀ ವಿಶ್ವಕ್ಕೆ ಸಮಸ್ಯೆಯಾಗಿದೆ. ಅದನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಬಾರದು. ಕರಾವಳಿಯಲ್ಲಿ ಮರಳು ಸಿಗುತ್ತಿಲ್ಲ. ನೌಕರರಿಗೆ ಸಂಬಳ ಆಗುತ್ತಿಲ್ಲ ಯೋಗ್ಯತೆ ಇದ್ದರೆ ಇದರ ಬಗ್ಗೆ ಮಾತನಾಡಿ ಎಂದು ಹೇಳಿದರು.
ಆಗ ಸಚಿವ ಪ್ರಿಯಾಂಕ್ ಖರ್ಗೆ, ಎಸ್ಮಾ ಜಾರಿ ಮಾಡಿದ್ದು ಯಾರು? ಆರ್ಥಿಕ ನೀತಿ ಏನಾಗಿದೆ? ವಿದೇಶಾಂಗ ನೀತಿ ಏನಾಗಿದೆ? ಮೋದಿ ಅವರು ಎಲ್ಲಿದ್ದಾರೆ. ಇದರ ಬಗ್ಗೆ ಯಾಕೆ ಬಾಯಿಬಿಡುತ್ತಿಲ್ಲ? ಇಂಡಿಯಾ ಟೀಮ್‌ಗೆ ವಿಶ್ ಮಾಡುತ್ತಾರೆ. ಈ ವಿಚಾರ ಯಾಕೆ ಮಾತಾಡ್ತಿಲ್ಲ? ಎಂದು ತಿರುಗೇಟು ನೀಡಿದರು. ಈ ವೇಳೆ ಕೆಲ ಕಾಲ ವಾಗ್ವಾದದಿಂದಾಗಿ ಗದ್ದಲ ಉಂಟಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ