ರಾಮನಗರ ಇನ್ನು ಬೆಂಗಳೂರು ದಕ್ಷಿಣ ಜಿಲ್ಲೆ: ಹೆಸರು ಬದಲಿಸಿ ಸರ್ಕಾರದಿಂದ ಆದೇಶ

Kannadaprabha News   | Kannada Prabha
Published : May 24, 2025, 08:04 AM IST
Vidhana Soudha

ಸಾರಾಂಶ

ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ಯಾಗಿ ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ ರಾಜ್ಯ ಸರ್ಕಾರ ಶುಕ್ರವಾರ ಅಧಿಕೃತ ಆದೇಶ ಮಾಡಿದೆ. ಇದರೊಂದಿಗೆ ಇನ್ನು ಮುಂದೆ ರಾಮನಗರ ಜಿಲ್ಲೆ ಇತಿಹಾಸ ಪುಟ ಸೇರಿದಂತಾಗಿದೆ.

ಬೆಂಗಳೂರು (ಮೇ.24): ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ಯಾಗಿ ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ ರಾಜ್ಯ ಸರ್ಕಾರ ಶುಕ್ರವಾರ ಅಧಿಕೃತ ಆದೇಶ ಮಾಡಿದೆ. ಇದರೊಂದಿಗೆ ಇನ್ನು ಮುಂದೆ ರಾಮನಗರ ಜಿಲ್ಲೆ ಇತಿಹಾಸ ಪುಟ ಸೇರಿದಂತಾಗಿದೆ. ಕೇಂದ್ರ ಸರ್ಕಾರದ ಗೃಹ ಇಲಾಖೆಯ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ 2024ರ ಜುಲೈನಲ್ಲಿ ನಡೆದ ಸಂಪುಟ ಸಭೆಯಲ್ಲೇ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಬಗ್ಗೆ ನಿರ್ಣಯ ಕೈಗೊಂಡು, ಇದಕ್ಕೆ ನಿರಾಕ್ಷೇಪಣಾ ಪತ್ರ ನೀಡಲು ಕೋರಿ ಕೇಂದ್ರ ಸರ್ಕಾರವನ್ನು ಕೋರಿತ್ತು. ಆದರೆ ಕೇಂದ್ರ ಗೃಹ ಇಲಾಖೆಯು ಈ ಪ್ರಸ್ತಾವನೆ ತಿರಸ್ಕರಿಸಿ ಯಥಾಸ್ಥಿತಿ ಉಳಿಸಿಕೊಳ್ಳಲು ಸೂಚಿಸಿತ್ತು. ಆದರೂ, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಭೂಮಿ, ಭೂ ಕಂದಾಯ, ಜಿಲ್ಲೆಗಳ ಮರುನಾಮಕರಣ ವಿಷಯಗಳು ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು. ಹಾಗಾಗಿ ಕೇಂದ್ರದ ಒಪ್ಪಿಗೆ ಬೇಕಿಲ್ಲ ಎಂದು ಮರು ನಾಮಕರಣಕ್ಕೆ ನಿರ್ಣಯ ಕೈಗೊಳ್ಳಲಾಗಿತ್ತು.

ಯಥಾಸ್ಥಿತಿಗೆ ಸೂಚನೆ ನೀಡಿದ್ದ ಕೇಂದ್ರಕ್ಕೆ ಸಡ್ಡು: ಕೇಂದ್ರ ಗೃಹ ಇಲಾಖೆಯ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರು ನಾಮಕರಣ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಲು 2024ರ ಜುಲೈನಲ್ಲೇ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿತ್ತು.

ಈ ನಿರ್ಣಯವನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಕೋರಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯವು ಈ ಪ್ರಸ್ತಾವನೆಯನ್ನು ತಿರಸ್ಕರಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಇದರ ನಡುವೆಯೂ ಇದೀಗ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಷಯ ಮಂಡಿಸಿ, ಮರು ನಾಮಕರಣ ಪ್ರಸ್ತಾವನೆಗೆ ಅನುಮೋದನೆ ಪಡೆದಿದ್ದಾರೆ.

ಈ ವೇಳೆ ಪ್ರಸ್ತಾವನೆಯಲ್ಲಿ, ‘ಸಂವಿಧಾನ 7ನೇ ಪರಿಚ್ಛೇದವು ಒಕ್ಕೂಟ ಪಟ್ಟಿಯಲ್ಲಿ ಬರುವ ವಿವಿಧ ವಿಷಯಗಳ ಬಗ್ಗೆ ವಿವರಿಸುತ್ತದೆ. ರಾಜ್ಯ ಪಟ್ಟಿಯ ಸಂಖ್ಯೆ 18ರಲ್ಲಿ ಬರುವ ಭೂಮಿ ವಿಷಯವು ರಾಜ್ಯ ವಿಷಯ. ಜತೆಗೆ ರಾಜ್ಯಪಟ್ಟಿಯ ವಿಷಯ ಸಂಖ್ಯೆ 45ರಲ್ಲಿ ಬರುವ ಭೂ ಕಂದಾಯ ವಿಷಯವೂ ರಾಜ್ಯದ ವಿಷಯ. ಹೀಗಾಗಿ ಜಿಲ್ಲೆಯ ಹೆಸರು ಮರುನಾಮಕರಣ ಮಾಡಲು ಕೇಂದ್ರದ ಒಪ್ಪಿಗೆ ಅಗತ್ಯವಿಲ್ಲ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ (4) ರಲ್ಲಿ ರಾಜ್ಯಕ್ಕೆ ವಲಯ, ತಾಲೂಕು, ಜಿಲ್ಲೆ ರಚನೆ, ಬದಲಾವಣೆ, ರದ್ದುಪಡಿಸುವ ಹಾಗೂ ಹೆಸರು ಮರುನಾಮಕರಣ ಮಾಡುವ ಅವಕಾಶವಿದೆ. ಹೀಗಾಗಿ ಅನುಮೋದನೆ ನೀಡಬೇಕು’ ಎಂದು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್