ಕಾಂಗ್ರೆಸ್‌ನ ಬೆಳವಣಿಗೆ ನೋಡಿ ಹೆಜ್ಜೆ ಇಡು!: ಪುತ್ರನಿಗೆ ದೇವೇಗೌಡ ಸಲಹೆ

By Web DeskFirst Published Jan 16, 2019, 10:24 AM IST
Highlights

ಪುತ್ರನಿಗೆ ದೇವೇಗೌಡ ಸಲಹೆ| ಉದ್ವೇಗ ಬೇಡ, ತಾಳ್ಮೆ ಇರಲಿ: ಪುತ್ರನಿಗೆ ದೇವೇಗೌಡರ ಸಲಹೆ| ತಂದೆಯನ್ನು ಭೇಟಿ ಮಾಡಿ ಚರ್ಚಿಸಿದ ಎಚ್‌ಡಿಕೆ| ಆಪರೇಷನ್‌ ಕಮಲ, ಪಕ್ಷೇತರರ ಬೆಂಬಲ ವಾಪಸ್‌ ಬಗ್ಗೆ ಚರ್ಚೆ

ಬೆಂಗಳೂರು[ಜ.16]: ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಮೇಲ್ನೋಟಕ್ಕೆ ಯಾವುದೇ ಆತಂಕ ವ್ಯಕ್ತಪಡಿಸದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ರಾಜಕೀಯವಾಗಿ ಇಡಬೇಕಾದ ಹೆಜ್ಜೆಗಳ ಬಗ್ಗೆ ಚರ್ಚಿಸಿದರು.

ಮಂಗಳವಾರ ಪದ್ಮನಾಭನಗರ ನಿವಾಸದಲ್ಲಿನ ದೇವೇಗೌಡರ ನಿವಾಸಕ್ಕೆ ತೆರಳಿ ಕೆಲ ಕಾಲ ಆಪರೇಷನ್‌ ಕಮಲ ಮತ್ತು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿರುವ ಬಗ್ಗೆ ಸಮಾಲೋಚನೆ ನಡೆಸಿದರು.

ಈ ವೇಳೆ ದೇವೇಗೌಡ ಅವರು ಕುಮಾರಸ್ವಾಮಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ಮುಂದುವರಿಬೇಕು. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬಾರದು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಎಚ್ಚರಿಕೆಯಿಂದ ಇರುವಂತೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ತಾಳ್ಮೆಯಿಂದ ವರ್ತನೆ ಮಾಡುವ ಮೂಲಕ ರಾಜಕೀಯ ಬೆಳವಣಿಗೆಯನ್ನು ನಿಭಾಯಿಸಬೇಕು. ಏಕಾಏಕಿ ಉದ್ವೇಗಕ್ಕೊಳಗಾಗಿ ಹೇಳಿಕೆಗಳನ್ನು ನೀಡಬಾರದು. ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕು. ರಾಜಕೀಯದಲ್ಲಿ ಯಾವ ಸಮಯದಲ್ಲಿ ಏನೂ ಬೇಕಾದರೂ ನಡೆಯಬಹುದು. ಹೀಗಾಗಿ ಸೂಕ್ಷ್ಮವಾಗಿ ಎಲ್ಲಾವನ್ನು ಗಮನಿಸಿ ಸೂಕ್ತವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಗೌಡರು ಹೇಳಿದ್ದಾರೆ ಎನ್ನಲಾಗಿದೆ.

ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆದಾಗ ರಾಜಕೀಯದಲ್ಲಿ ಮುಂದಿನ ಹೆಜ್ಜೆ ಯಾವ ರೀತಿ ಇಡಬೇಕು ಎಂಬುದರ ಬಗ್ಗೆ ದೇವೇಗೌಡ ಅವರಿಂದ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ. ದೇವೇಗೌಡ ಅವರು ರಾಜಕೀಯ ಜೀವನದಲ್ಲಿ ಇಂತಹ ಹಲವು ಪರಿಸ್ಥಿತಿಗಳನ್ನು ಎದುರಿಸಿದ್ದಾರೆ. ಇಂತಹ ಸಮಯದಲ್ಲಿ ಯಾವ ರೀತಿಯಲ್ಲಿ ಎಚ್ಚರಿಕೆಯ ಹೆಜ್ಜೆಗಳು ಇಡಬೇಕು ಎಂಬುದರ ಬಗ್ಗೆ ದೇವೇಗೌಡರು ಸಲಹೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ.

click me!