7ನೇ ಕ್ಲಾಸ್‌ಗೆ ‘ಪಬ್ಲಿಕ್‌’ ಪರೀಕ್ಷೆ ಇಲ್ಲ

By Suvarna NewsFirst Published Jan 9, 2020, 8:11 AM IST
Highlights

7ನೇ ಕ್ಲಾಸ್‌ಗೆ ‘ಪಬ್ಲಿಕ್‌’ ಪರೀಕ್ಷೆ ಇಲ್ಲ| ಮಾಚ್‌ರ್‍ನಲ್ಲಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ| ಹಿಂದಿನಂತೆ ಈ ಪರೀಕ್ಷೆಯಲ್ಲೂ ಯಾರನ್ನೂ ಫೇಲ್‌ ಮಾಡುವುದಿಲ್ಲ: ಸಚಿವ ಸುರೇಶ್‌| ಶಿಕ್ಷಣ ಸಚಿವ ಸುರೇಶಕುಮಾರ್‌ ಸಭೆಯಲ್ಲಿ ನಿರ್ಧಾರ| 7ನೇ ಕ್ಲಾಸ್‌ನ ಭಾಗ-2 ಪಠ್ಯದಿಂದ ಮಾತ್ರ ಪ್ರಶ್ನೆ ಆಯ್ಕೆ

ಬೆಂಗಳೂರು[ಜ.09]: 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಜಾರಿಗೆ ತರಲುದ್ದೇಶಿಸಿದ್ದ ಪಬ್ಲಿಕ್‌ ಪರೀಕ್ಷೆಯ ಬದಲಾಗಿ ‘ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ’ಯನ್ನು ಮುಂದಿನ ಮಾಚ್‌ರ್‍ ತಿಂಗಳಿನಲ್ಲಿ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು ನಗರದ ಶಿಕ್ಷಕರ ಸದನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೌಲ್ಯಾಂಕನ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವುದಿಲ್ಲ. ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸುವುದಕ್ಕಾಗಿ ವ್ಯಾಸಂಗ ನಡೆಸುತ್ತಿರುವ ಶಾಲೆಗಳಲ್ಲಿಯೇ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಉತ್ತರ ಪತ್ರಿಕೆಗಳನ್ನು ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಮಾಡಿಸಿ ರಿಪೋರ್ಟ್‌ ಕಾರ್ಡ್‌ ನೀಡಲಿದೆ ಎಂದು ಹೇಳಿದರು.

ಈ ಬಾರಿ 7ನೇ ತರಗತಿಯ ಭಾಗ-2ರ ಪಠ್ಯದಲ್ಲಿರುವ ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಪರೀಕ್ಷೆಯಲ್ಲಿ ಕೇಳಲಾಗುತ್ತದೆ. ಇದನ್ನು ಅಂಕಗಳ ಪರೀಕ್ಷೆ ಎನ್ನುವುದಕ್ಕಿಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಕಲಿಕಾ ಮೌಲ್ಯಮಾಪನ ಪರೀಕ್ಷೆ ಎನ್ನುವುದು ಸೂಕ್ತ ಎಂದರು.

ಪಬ್ಲಿಕ್‌ ಪರೀಕ್ಷೆ ನಡೆಸುವ ಕುರಿತು ಅಧಿಕಾರಿಗಳು, ಶಿಕ್ಷಣ ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಅಂತಿಮವಾಗಿ ಪರೀಕ್ಷೆ ಸ್ವರೂಪ ಬದಲು ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಬೆಳಗಾವಿ ಜಿಲ್ಲೆ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದೆ. ಕಲಬುರಗಿ, ವಿಜಯಪುರದಂತಹ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ತುಂಬಾ ಹಿಂದುಳಿದಿದ್ದಾರೆ. ಇವರಿಗೆ ವಿಶೇಷ ಮಾರ್ಗದರ್ಶನ ನೀಡಲು ಈ ಪರೀಕ್ಷೆ ಸಹಾಯ ಮಾಡಲಿದೆ ಎಂದರು.

ರಿಪೋರ್ಟ್‌ ಕಾರ್ಡ್‌:

ನಿರಂತರ ಕಲಿಕಾ ಮೌಲ್ಯಮಾಪನ (ಸಿಸಿಇ) ಮಾದರಿಯಲ್ಲಿ ಈಗಾಗಲೇ ಶಾಲಾ ಹಂತದಲ್ಲಿ ಪರೀಕ್ಷೆ ನಡೆಯುತ್ತಿವೆ. ಇದರ ಭಾಗವಾಗಿ ಈ ಪರೀಕ್ಷೆ ನಡೆಸುತ್ತೇವೆ. ಎಸ್ಸೆಸ್ಸೆಲ್ಸಿ ಮಂಡಳಿಯಲ್ಲಿರುವ ಕರ್ನಾಟಕ ಶಾಲಾ ಗುಣಮಟ್ಟಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್‌ಕ್ಯೂಎಎಸಿ) ಪರೀಕ್ಷೆಯನ್ನು ನಡೆಸಲಿದೆ. ಪರೀಕ್ಷೆಯ ನಂತರ ಮೌಲ್ಯಮಾಪನವನ್ನು ಡಯಟ್‌ ಕೇಂದ್ರಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಿ ರಿಪೋರ್ಟ್‌ ಕಾರ್ಡ್‌ ಸಿದ್ಧಮಾಡಿ ಪ್ರತಿ ವಿದ್ಯಾರ್ಥಿಗಳಿಗೆ ನೀಡುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಹಾಗೂ ಆಯುಕ್ತರಾದ ಡಾ. ಕೆ.ಜಿ. ಜಗದೀಶ್‌ ಉಪಸ್ಥಿತರಿದ್ದರು.

ಪಬ್ಲಿಕ್‌ ಪರೀಕ್ಷೆ ಏಕೆ ಇಲ್ಲ?

7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸುತ್ತೇನೆಂದು ಅಕ್ಟೋಬರ್‌ನಲ್ಲಿ ಸಚಿವರು ಮೊದಲ ಬಾರಿಗೆ ಹೇಳಿಕೆ ನೀಡಿದ್ದರು. ಆನಂತರ ಇದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಯಿತು. ಆರ್‌ಟಿಇ ನಿಯಮದ ಪ್ರಕಾರ ಪಬ್ಲಿಕ್‌ ಪರೀಕ್ಷೆ ನಡೆಸುವಂತಿಲ್ಲವೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೋಟಿಸ್‌ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹೆಸರು ಬದಲಾಯಿಸಿ ಶಾಲಾ ಹಂತದಲ್ಲಿ ಪರೀಕ್ಷೆ ಮಾಡಲು ನಿರ್ಧರಿಸಿದೆ.

ಏನಿದು ಮೌಲ್ಯಾಂಕನ ಪರೀಕ್ಷೆ?

ಈ ವರ್ಷದಿಂದ ರಾಜ್ಯ ಪಠ್ಯಕ್ರಮದಲ್ಲಿ ಓದುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 7ನೇ ತರಗತಿಯ ಮಕ್ಕಳಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ವಾರ್ಷಿಕ ಪರೀಕ್ಷೆಯನ್ನು ನಡೆಸಲಿದೆ. ಅದಕ್ಕೆ ನೀಡಿರುವ ಹೆಸರು ‘ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ.’ ಇಷ್ಟುವರ್ಷ ಆಯಾ ಶಾಲೆಗಳೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ತಾವೇ ಪರೀಕ್ಷೆ ಹಾಗೂ ಮೌಲ್ಯಮಾಪನವನ್ನು ಮಾಡುತ್ತಿದ್ದವು. ಆದರೆ, ಮೌಲ್ಯಾಂಕನ ಪರೀಕ್ಷೆಯಲ್ಲಿ ಪ್ರೌಢಶಿಕ್ಷಣ ಮಂಡಳಿಯು ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಪರೀಕ್ಷೆ ನಡೆಸಲಿದೆ. ನಂತರ ಜಿಲ್ಲಾ ಕೇಂದ್ರದಲ್ಲಿ ಮೌಲ್ಯಮಾಪನ ನಡೆಸಿ ಫಲಿತಾಂಶ ಘೋಷಿಸಲಾಗುತ್ತದೆ. ಇನ್ನು, ಈ ಹಿಂದೆಯೂ 7ನೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ನಪಾಸು ಮಾಡುತ್ತಿರಲಿಲ್ಲ, ಈಗಿನ ಪರೀಕ್ಷೆಯಲ್ಲೂ ನಪಾಸು ಮಾಡುವುದಿಲ್ಲ.

ಶಿಕ್ಷಣ ಇಲಾಖೆ ಸಹಾಯವಾಣಿ

ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ತಮ್ಮ ಶಾಲೆಗಳ ಬಗ್ಗೆ ಕುಂದು ಕೊರತೆಗಳನ್ನು ಸರ್ಕಾರದ ಗಮನಕ್ಕೆ ತರುವುದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಸಹಾಯವಾಣಿ ಆರಂಭಿಸುತ್ತಿದೆ. ಸಹಾಯವಾಣಿಯನ್ನು ಮಾ.31ರೊಳಗೆ ಅನುಷ್ಠಾನ ಮಾಡಲಾಗುತ್ತದೆ ಎಂದು ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

ಉತ್ತಮ ಸೈಕಲ್‌ ವಿತರಿಸದ ಕಂಪನಿ ಮೇಲೆ ಕ್ರಮ

ರಾಜ್ಯ ಸರ್ಕಾರವು 8ನೇ ತರಗತಿ ಮಕ್ಕಳಿಗೆ ವಿತರಿಸಿರುವ ಸೈಕಲ್‌ ಜೋಡಣೆಯಲ್ಲಿ ಕೆಲವು ತಾಂತ್ರಿಕ ವ್ಯತ್ಯಾಸವಾಗಿರುವುದು ತಜ್ಞರ ಸಮಿತಿ ನೀಡಿದ ವರದಿಯಲ್ಲಿ ತಿಳಿದು ಬಂದಿದೆ. ಬೆಳಗಾವಿ ವಿಭಾಗದಲ್ಲಿ ಟೆಂಡರ್‌ನಲ್ಲಿ ಹೇಳಿದ್ದಂತೆ ಸೈಕಲ್‌ ಜೋಡಣೆ ಮಾಡದಿರುವುದರಿಂದ ಸೈಕಲ್‌ ವಿತರಿಸಿದ ಕಂಪನಿಗೆ ದಂಡ ವಿಧಿಸಲು ಸರ್ಕಾರವನ್ನು ಕೇಳಿದ್ದೇವೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್‌ ಹೇಳಿದರು.

click me!