ಟಿಪ್ಪುವಿನ ಇತಿಹಾಸ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.ಸರ್ಕಾರ ಪಠ್ಯ ಪುಸ್ತಕದಿಂದ ಟಿಪ್ಪುವನ್ನು ತೆಗೆಯಬಹುದಷ್ಟೇ. ಆದರೆ, ಇತಿಹಾಸದಿಂದ ತೆಗೆಯಲು ಸಾಧ್ಯವೆ? ಎಂದು ಪ್ರಶ್ನೆ ಮಾಡಿದರು.
ದಾವಣಗೆರೆ (ನ.04): ಟಿಪ್ಪುವಿನ ಇತಿಹಾಸ ಪಠ್ಯ ಪುಸ್ತಕದಿಂದ ತೆಗೆದು ಹಾಕುವುದರಿಂದ ವಿದ್ಯಾರ್ಥಿಗಳಿಗೆ ನಷ್ಟವಾಗುತ್ತದಷ್ಟೇ. ಟಿಪ್ಪುವಿನ ಇತಿಹಾಸ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಮೈಸೂರು ದೊರೆ ಟಿಪ್ಪುವಿನ ಇತಿಹಾಸ ಮತ್ತು ವ್ಯಕ್ತಿತ್ವ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಅನ್ಯ ದೇಶಗಳಲ್ಲಿ, ಇಂಗ್ಲೇಂಡ್‌ನ ಮ್ಯೂಸಿಯಂನಲ್ಲಿ ಇತಿಹಾಸದ ಕುರುಹುಗಳಿವೆ. ಸರ್ಕಾರ ಪಠ್ಯ ಪುಸ್ತಕದಿಂದ ಟಿಪ್ಪುವನ್ನು ತೆಗೆಯಬಹುದಷ್ಟೇ. ಆದರೆ, ಇತಿಹಾಸದಿಂದ ತೆಗೆಯಲು ಸಾಧ್ಯವೆ? ಪಠ್ಯ ಪುಸ್ತಕದಿಂದ ಟಿಪ್ಪುವಿನ ಪಾಠ ತೆಗೆಯಲು ಹೊರಟಿರುವುದು ಸರ್ಕಾರದ ತೀರ್ಮಾನ. ಅದನ್ನು ಪ್ರಶ್ನಿಸುವುದಿಲ್ಲ. ಅದರಿಂದ ನಮಗೇನೂ ನಷ್ಟವೂ ಇಲ್ಲ. ಆದರೆ, ಮುಂದಿನ ಯುವ ಜನಾಂಗಕ್ಕೆ ನಷ್ಟವಾಗಲಿದೆ ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಟಿಪ್ಪುವಿನ ವಿರೋಧಿಗಳಾಗಿದ್ದ ಬ್ರಿಟೀಷರೇ ತಮ್ಮ ದೇಶದ ಮ್ಯೂಸಿಯಂನಲ್ಲಿ ಟಿಪ್ಪುವಿನ ಆಧುನಿಕ ತಂತ್ರಜ್ಞಾನದ ಮಾಹಿತಿ ಸಂಗ್ರಹಿಸಿಟ್ಟಿದ್ದಾರೆ. ಆದರೆ, ಈ ದೇಶದ ಜನರು ಟಿಪ್ಪುವನ್ನು ದ್ವೇಷ ಮಾಡುತ್ತಿದ್ದಾರೆ. ಟಿಪ್ಪು ವಿಚಾರ ಮುಂದಿಟ್ಟುಕೊಂಡು ಬಿಜೆಪಿಯವರು ಜನರ ಮನಸ್ಸು ಮತ್ತು ಭಾವನೆಗಳನ್ನು ಬೇರೆಡೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಆಡಳಿತ ನಡೆಸುವವರಲ್ಲಿ ಸಂಕುಚಿತ ಮನೋಭಾವ ಇರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಟಿಪ್ಪುವಿನ ಜೀವನ ಚರಿತ್ರೆಯನ್ನು ಪಠ್ಯದಿಂದ ತೆರೆಯಲು ಹೊರಟಿರುವ ಸರ್ಕಾರ ಶೃಂಗೇರಿಯ ಶಾರದಾಂಬೆ ಮತ್ತು ಕೊಲ್ಲೂರಿನ ಮೂಕಾಂಬಿಕಾ ದೇವಾಲಯದಲ್ಲಿ ನಿತ್ಯವೂ ಸಂಜೆ ಟಿಪ್ಪು ಸಲಾಂ ಹೆಸರಿನಲ್ಲಿ ನಡೆಯುವ ಪೂಜೆಯನ್ನು ತಡೆಗಟ್ಟುವರೇ? ಇದು ನಿಮ್ಮಿಂದ ಸಾಧ್ಯವೇ ಎಂದು ಬಿಜೆಪಿ ಸರ್ಕಾರಕ್ಕೆ ಮಾಜಿ ಸಚಿವ ಖಾದರ್ ಸವಾಲೆಸೆದರು.