ಆನ್‌ಲೈನಲ್ಲಿ ಮದ್ಯ ಮಾರಾಟ ಇಲ್ಲ: ಹೈಕೋರ್ಟ್| ಏಕಸದಸ್ಯ ಪೀಠದ ತೀರ್ಪು ಎತ್ತಿಹಿಡಿದ ದ್ವಿಸದಸ್ಯ ಪೀಠ| ಅಬಕಾರಿ ಇಲಾಖೆ ಅನುಮತಿ ನೀಡಿದರೆ ಮಾರಬಹುದು| ಚೆನ್ನೈ ಮೂಲದ ಎಚ್‌ಐಪಿ ಬಾರ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿ|
ಬೆಂಗಳೂರು(ಫೆ.21): ರಾಜ್ಯದಲ್ಲಿ ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶವಿಲ್ಲವೆಂದು ಏಕಸದಸ್ಯ ಪೀಠ ನೀಡಿದ್ದ ತೀರ್ಪುನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ದ್ವಿಸದಸ್ಯ ಪೀಠ, ಈ ಸಂಬಂಧ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಕರ್ನಾಟಕ ಅಬಕಾರಿ ಕಾಯಿದೆ-1965ರ ಅಡಿ ಅನುಮತಿ ಅಥವಾ ಪರವಾನಗಿ ನೀಡದ ಹೊರತು ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂಬ ಏಕ ಸದಸ್ಯಪೀಠದ ಆದೇಶವನ್ನು ಮರು ಸ್ಥಾಪಿಸಿದೆ.
ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಚೆನ್ನೈ ಮೂಲದ ಎಚ್‌ಐಪಿ ಬಾರ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಲು ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮ ಮತ್ತು ನ್ಯಾ.ವಿ.ಶ್ರೀಶಾನಂದ್ ಅವರಿದ್ದ ವಿಭಾಗೀಯ ಪೀಠ ನಿರಾಕರಿಸಿದೆ.
undefined
ಅಬಕಾರಿ ಕಾಯಿದೆಯಡಿ ಆನ್‌ಲೈನ್ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಮತ್ತು ಕಾಯಿದೆಯಡಿ ಬರುವ ಪಾನೀಯಗಳ ಮಾರಾಟಕ್ಕೆ ಲೈಸನ್ಸ್ ಕಡ್ಡಾಯವಾಗಿದೆ. ಹಾಗಾಗಿ ಆನ್‌ಲೈನ್ ಮದ್ಯ ಮಾರಾಟಕ್ಕೆ ನೀಡಿದ್ದ ಅನುಮತಿ ರದ್ದು ಮಾಡಿರುವುದರಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ. ಆ ಕುರಿತು ಏಕ ಸದಸ್ಯಪೀಠದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಮದ್ಯ ಮಾರಾಟ ನಿಷೇಧ : ಯಾವಾಗಿನಿಂದ ಸಿಗೋದಿಲ್ಲ..?
ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಶೋಕಾಸ್ ನೋಟಿಸ್ ನೀಡದೆ ಏಕಾಏಕಿ ಅನುಮತಿ ಪತ್ರ ವಾಪಸ್ ಪಡೆದಿರುವುದು ಕಾನೂನು ಬಾಹಿರವಾಗಿದೆ. ನಮ್ಮ ವಹಿವಾಟಿನಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿರುವುದು ಸಂವಿಧಾನದ ಕಲಂ 14 ಮತ್ತು 19 (1) (ಜಿ) ಅಡಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರ ಸಂಸ್ಥೆ ವಾದಿಸಿತ್ತು.
ಪ್ರಕರಣದ ಹಿನ್ನೆಲೆ:
ಅರ್ಜಿದಾರ ಸಂಸ್ಥೆಗೆ ಡೈರಿ ಉತ್ಪನ್ನಗಳನ್ನು ಹೊರತುಪಡಿಸಿ ಆನ್‌ಲೈನ್ ಮೂಲಕ ಸಿದ್ಧ ಆಹಾರ ಪದಾರ್ಥಗಳು ಮತ್ತು ಪಾನೀಯಗಳನ್ನು ಮಾರಾಟ ಮಾಡಲು ಸರ್ಕಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕಾಯಿದೆಯ ಅನುಸಾರ ಅನುಮತಿ ನೀಡಿತ್ತು. ಈ ಮಧ್ಯೆ 2017ರ ಆ. 1ರಂದು ಅಬಕಾರಿ ಇಲಾಖೆ ಆಯುಕ್ತರು ಅರ್ಜಿದಾರ ಸಂಸ್ಥೆಗೆ ಬಿಯರ್, ವೈನ್ ಸೇರಿ ಭಾರತ ಮತ್ತು ವಿದೇಶಗಳ ಮದ್ಯ ಮಾರಾಟ ನಡೆಸಲು ಅನುಮತಿ ಪತ್ರ ನೀಡಿತ್ತು.
ಈ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಏಕಾಏಕಿ ಅನುಮತಿಯನ್ನು ಹಿಂಪಡೆದಿದ್ದ ಇಲಾಖೆ, ಆನ್‌ಲೈನ್ ಮದ್ಯ ಮಾರಾಟ ಸ್ಥಗಿತಗೊಳಿಸಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಏಕಸದಸ್ಯಪೀಠ 2019ರಲ್ಲಿ ಅವರ ಅರ್ಜಿಯನ್ನು ವಜಾಗೊಳಿಸಿ, ಅಬಕಾರಿ ಇಲಾಖೆ ನಿರ್ಧಾರವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಮೇಲ್ಮನವಿಯನ್ನು ಸಲ್ಲಿಸಿತ್ತು.