ಏರಿಕೆಯಾಗುತ್ತಾ ಹಾಲಿನ ದರ..?

By Web DeskFirst Published Nov 15, 2018, 8:50 AM IST
Highlights

ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ರೀತಿಯಾದ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು :  ರಾಜ್ಯದಲ್ಲಿ ರೈತರಿಂದ ಖರೀದಿಸುವ ಹಾಲಿನ ದರದಲ್ಲಾಗಲಿ, ಮಾರಾಟದ ದರದಲ್ಲಾಗಲಿ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಸ್ಪಷ್ಟಪಡಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ರೈತರಿಂದ ಖರೀದಿಸುವ ಮತ್ತು ಗ್ರಾಹಕರಿಗೆ ಮಾರಾಟ ಮಾಡುವ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲು ಉತ್ಪಾದಕರಿಗೆ ನೀಡುತ್ತಿರುವ ಐದು ರು. ಪ್ರೋತ್ಸಾಹ ಧನ ಮುಂದುವರಿಸಲಾಗುವುದು. ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ ಮಾರುಕಟ್ಟೆಮುಕ್ತವಾಗಿದೆ. ಯಾರು ಎಲ್ಲಿ ಬೇಕಾದರೂ ಹೋಗಿ ಮಾರಾಟ ಮಾಡಬಹುದು. ಹೀಗಾಗಿ ಹೊರ ರಾಜ್ಯದ ಹಾಲು ರಾಜ್ಯದಲ್ಲಿ ಮಾರಾಟ ಆಗುತ್ತಿದೆ. ಆದರೆ ಅವುಗಳಿಗೆ ಪ್ರತಿಸ್ಪರ್ಧೆ ನೀಡಲು ರಾಜ್ಯದ ಕೆಎಂಎಫ್‌ ಸಮರ್ಥವಾಗಿದ್ದು, ಜನರಿಗೆ ಗುಣಮಟ್ಟದ ಹಾಲು ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಹೊರ ರಾಜ್ಯದ ಹಾಲನ್ನು ರಾಜ್ಯದಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲು ಸಾಧ್ಯವಿಲ್ಲ. ಹಾಲಿನಲ್ಲಿ ಕಲಬೆರಕೆ ಅಥವಾ ಆರೋಗ್ಯಕ್ಕೆ ಹಾನಿಕಾರಕ ಅಂಶವಿರುವುದು ಗೊತ್ತಾದರೆ ಮಾತ್ರ ಕ್ರಮ ಕೈಗೊಳ್ಳಬಹುದು. ಕೆಎಂಎಫ್‌ ಹಾಲಿಗೆ ಭಾರೀ ಬೇಡಿಕೆ ಇದ್ದು, ಮಾರುಕಟ್ಟೆವಿಸ್ತರಣೆಯತ್ತ ಗಮನ ಹರಿಸಲಾಗುವುದು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಾಡಗೌಡ, ಕೆಎಂಎಫ್‌ ವಿಚಾರದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅವರು ಹಸ್ತಕ್ಷೇಪ ಮಾಡಿಲ್ಲ. ಅವರು ಕಟ್ಟಿಬೆಳೆಸಿದ ಸಂಸ್ಥೆಯಾಗಿದ್ದರಿಂದ ಹಾನಿಯಾದರೆ ನೋವುಂಟಾಗುವುದು ಸಹಜ. ಆಗ ಸಿಡಿದೇಳಬಹುದು. ಕೆಎಂಎಫ್‌ ಬಗ್ಗೆ ಅವರು ಮಾತನಾಡಿದರೆ ಅದರ ಹಿತದೃಷ್ಟಿಯಿಂದಲೇ ಹೊರತು ಬೇರೆ ಯಾವ ಅರ್ಥದಿಂದಲ್ಲ. ಕೆಎಂಎಫ್‌ ಸಂಸ್ಥೆ ಬೆಳೆಯಲು ಅವರ ಕೊಡುಗೆ ಬಹಳಷ್ಟಿದೆ ಎಂದು ಹೇಳಿದರು.

click me!