ಮೇಕೆದಾಟು ವಿಚಾರದಲ್ಲಿ ರಾಜಿ ಮಾತಂತೂ ಇಲ್ಲವೇ ಇಲ್ಲ: ಅಶ್ವತ್ಥನಾರಾಯಣ

By Suvarna News  |  First Published Aug 13, 2021, 3:52 PM IST

* ಮೇಕೆದಾಟು ಯೋಜನೆ ಬಗ್ಗೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಕ್ರಿಯೆ
* ರಾಜಿ ಮಾತಂತೂ ಇಲ್ಲವೇ ಇಲ್ಲ ಎಂದ ಅಶ್ವತ್ಥನಾರಾಯಣ 
* ರಾಮನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ


ರಾಮನಗರ, (ಆ.13): ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕವು ತನ್ನ ಹಕ್ಕನ್ನು ಮಾತ್ರ ಪ್ರತಿಪಾದಿಸುತ್ತಿದೆ. ನೆರೆ ರಾಜ್ಯದ ಒಂದು ಹನಿ ನೀರೂ ನಮಗೆ ಬೇಕಿಲ್ಲ ಎಂದು ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. 

ರಾಮನಗರದಲ್ಲಿ ಇಂದು (ಆ.13) ಮಾಧ್ಯಮಗಳ ಜತೆ ಮಾತನಾಡಿದ ಅವರು, ನ್ಯಾಯ ಸಮ್ಮತವಾಗಿ ಹಾಗೂ ಕಾನೂನಾತ್ಮಕವಾಗಿ ನಮಗೆ ಹಂಚಿಕೆಯಾಗಿರುವ ನೀರನ್ನು ಮಾತ್ರ ನಾವು ಕೇಳುತ್ತಿದ್ದೇವೆ ಹಾಗೂ ಅದನ್ನು ಬಳಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

Tap to resize

Latest Videos

ಮೇಕೆದಾಟು ವಿಚಾರದಲ್ಲಿ ಸಿ. ಟಿ. ಯೂಟರ್ನ್: ಕರ್ನಾಟಕದ ಹಿತಾಸಕ್ತಿ ಕಡೆಗಣಿಸಿದ ನಾಯಕ!

ಮೇಕೆದಾಟು ಯೋಜನೆಯ ಬಗ್ಗೆ ರಾಜ್ಯ ಸರಕಾರಕ್ಕೆ ಸ್ಪಷ್ಟತೆ ಇದೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಈ ಯೋಜನೆ ಬಗ್ಗೆ ಉಪೇಕ್ಷೆ ಮಾಡುವ ಪ್ರಶ್ನೆಯೂ ಇಲ್ಲ, ರಾಜಿ ಮಾತಂತೂ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ನೀಡಿದ ಅಭಿಪ್ರಾಯವನ್ನೇ ತಮಿಳುನಾಡು ತನಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದೆ. ಕಾನೂನು ಎಂಬುದು ಎಲ್ಲರಿಗೂ ಒಂದೇ. ನ್ಯಾಯ ಸಮ್ಮತವಾಗಿಯೇ ಈ ಯೋಜನೆ ಆಗುತ್ತಿದೆ. ನ್ಯಾಯಾಧೀಕರಣ ಹೇಳಿದ್ದನ್ನೇ ನಾವು ಕೇಳುತ್ತಿದ್ದೇವೆ. ಮೇಕೆದಾಟು ಯೋಜನೆ ಯಾವ ಕಾರಣಕ್ಕೂ ನಿಲ್ಲದು ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು; ಮೇಕೆದಾಟು ವಿಚಾರದಲ್ಲಿ ನಮಗೆ ದೇಶವೇ ಮುಖ್ಯ ಎಂದು ಹೇಳಿರುವ ಬಗ್ಗೆ ಗಮನ ಸೆಳೆದಾಗ, ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಆದರೆ, ಮೇಕೆದಾಟು ಯೋಜನೆ ಬಗ್ಗೆ ರಾಜ್ಯದ ನಿಲವು ಬದಲಾಗುವವ ಪ್ರಶ್ನೆಯೇ ಇಲ್ಲ ಎಂದರು ಅಶ್ವತ್ಥನಾರಾಯಣ. 

ಬಹಿರಂಗ ಪೈಪೋಟಿ ಬೇಡ 
ಎಲ್ಲರಿಗೂ ರಾಜಕೀಯ ಸ್ಥಾನಮಾನ, ಸಚಿವ ಸ್ಥಾನ ಬೇಕೆಂಬ ಬಯಕೆ ಇರುವುದು ಸಹಜ. ಆದರೆ, ಆ ಎಲ್ಲ ಪ್ರಯತ್ನಗಳನ್ನು ಬಹಿರಂಗವಾಗಿ ಮಾಡದೇ ನಾಲ್ಕು ಗೋಡೆಗಳ ಮಧ್ಯೆ ಕೂತು ಪಕ್ಷದ ಚೌಕಟ್ಟಿನಲ್ಲಿ ನಡೆಸಬೇಕು. ಮಾಧ್ಯಮಗಳ ಮುಂದೆ ಹೋಗಿ ರಂಪ ಮಾಡುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು. 

ನಮ್ಮ ಪಕ್ಷ ರಾಷ್ಟ್ರೀಯ ಪಕ್ಷ. ಅದಕ್ಕೊಂದು ನೀತಿ-ಸಿದ್ಧಾಂತ ಇದೆ. ಅದನ್ನು ಎಲ್ಲರೂ ಗೌರವಿಸಬೇಕು ಎಂದ ಅವರು, ಮನೆ ವಿಷಯವನ್ನು ಯಾವ ಕಾರಣಕ್ಕೂ ಬೀದಿಗೊಯ್ಯುವುದು ಸಲ್ಲ ಎಂದರು.

click me!