
ಬೆಂಗಳೂರು(ನ.22): ನಾಡಿನ ಕಲೆ, ವೈಶಿಷ್ಟ್ಯತೆ, ಸಮೃದ್ಧಿ, ಭವ್ಯತೆ ಸೇರಿದಂತೆ ಹಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ಕಲಾವಿದ ಕೆ.ಸೋಮಶೇಖರ್ ಅವರು ರಚಿಸಿರುವ ನಾಡದೇವತೆಯ ಭಾವಚಿತ್ರವನ್ನು ಅಧಿಕೃತ ಚಿತ್ರವೆಂದು ಘೋಷಿಸುವಂತೆ ಲಲಿತಾ ಕಲಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಿ. ಮಹೇಂದ್ರ ಅವರ ಅಧ್ಯಕ್ಷತೆಯ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯದಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯದ ನಾಡದೇವತೆಯ ಭಾವಚಿತ್ರವಾಗಿ ದುರ್ಗಾದೇವಿ, ಸರಸ್ವತಿ ಇತ್ಯಾದಿ ದೇವತೆಗಳ ಚಿತ್ರಗಳನ್ನು ಬಳಸಲಾಗುತ್ತಿದ್ದು, ಒಂದು ನಿರ್ದಿಷ್ಟ ಚಿತ್ರಕೃತಿಯ ಕೊರತೆಯಿರುವುದನ್ನು ಮನಗಂಡ ಸರ್ಕಾರ ಚಿತ್ರವನ್ನು ಆಯ್ಕೆ ಮಾಡಲು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಡಿ.ಮಹೇಂದ್ರ ಅವರ ಅಧ್ಯಕ್ಷತೆಯ ಐವರು ಚಿತ್ರಕಲಾವಿದರ ಸಮಿತಿಯನ್ನು ರಚಿಸಿತ್ತು.
ಈ ಸಮಿತಿಯು ಕರ್ನಾಟಕ ರಾಜ್ಯದ ನಾಡದೇವತೆಯ ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ಚಿತ್ರ ರಚಿಸುವಂತೆ ಕಲಾವಿದರಾದ ಕೆ. ಸೋಮಶೇಖರ್ ಅವರಿಗೆ ಕೇಳಿತ್ತು. ಅದರಂತೆ ಕಲಾವಿದರು ಚಿತ್ರವನ್ನು ರಚಿಸಿ ಕಳೆದ 15 ದಿನಗಳ ಹಿಂದೆ ಸಮಿತಿಗೆ ಸಲ್ಲಿಸಿದ್ದರು. ಇದೀಗ ಸಮಿತಿಯು ಆ ಭಾವಚಿತ್ರವನ್ನು ಅಂಗೀಕರಿಸಿ ಅಧಿಕೃತ ನಾಡದೇವತೆಯ ಚಿತ್ರವೆಂದು ಘೋಷಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.
PM Modi in Mysuru ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ!
ರಾಜ್ಯದ ನಾಡದೇವತೆಯ ಚಿತ್ರವು ಸುಲಕ್ಷಣವಾಗಿ ಕರ್ನಾಟಕದ ಅಭಿಮಾನ, ಜ್ಞಾನ ಸಂಪತ್ತು, ಸಸ್ಯ ಸಮೃದ್ಧಿ, ಸಿರಿಸಂಪದವನ್ನು ಪ್ರತಿಬಿಂಬಿಸುವ ನೈಜ ಸ್ವರೂಪವಾಗಿದೆ. ಹೀಗಾಗಿ ಈ ಚಿತ್ರ ದಿವ್ಯ-ಭವ್ಯ ಕರ್ನಾಟಕ ನಾಡದೇವತೆಯ, ಕನ್ನಡಾಂಬೆಯ, ಕರ್ನಾಟಕ ಮಾತೆಯ ಚಿತ್ರದ ವೈಶಿಷ್ಟ್ಯಗಳಾಗಿವೆ. ಹಿಂದೆ ರಚಿಸಿರುವ ಚಿತ್ರಗಳು ಸುಂದರವಾಗಿದ್ದರೂ, ಅಲ್ಲಿ ಕರ್ನಾಟಕದ ವೈಶಿಷ್ಟ್ಯತೆಯನ್ನು ಬಿಂಬಿಸುವಲ್ಲಿ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿ ಒಂದು ಅಧಿಕೃತ ಕರ್ನಾಟಕ ರಾಜ್ಯದ ನಾಡದೇವತೆಯ ಚಿತ್ರದ ಅವಶ್ಯಕತೆ ಹಿನ್ನೆಲೆಯಲ್ಲಿ ಚಿತ್ರವನ್ನು ರಚಿಸಲಾಗಿದೆ ಎಂದು ಸಮಿತಿ ಹೇಳಿದೆ.
ಭಾವಚಿತ್ರದ ಪ್ರಮುಖ ವೈಶಿಷ್ಟ್ಯತೆ
ನಾಡದೇವತೆಯ ಬಲಗೈಯಲ್ಲಿ ಅಭಯ ಮುದ್ರೆ, ಸಾಂಕೇತಿಕವಾಗಿ ರಕ್ಷಣೆ ನೀಡುತ್ತಿದ್ದರೆ, ಎಡಗೈಯಲ್ಲಿರುವ ತಾಳೆಗರಿಯು ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿ ಪ್ರವಹಿಸುವುದನ್ನು ಸೂಚಿಸುತ್ತಿದೆ. ಕರ್ನಾಟಕದ ಧ್ವಜ ಕನ್ನಡಾಭಿಮಾನದ ಸಂಕೇತವಾಗಿದೆ. ಹಸಿರು ಸೀರೆ, ಸಿರಿ ಸಂಪದ ಸಮೃದ್ಧಿ ಸೂಚಿಸುತ್ತಿದೆ. ಕರ್ನಾಟಕದ ಭವ್ಯ ವೈಶಿಷ್ಟ್ಯವನ್ನು ಸಾರುವ ಆಭರಣಗಳು, ನಾಡನ್ನು ಆಳಿದ ಸಾಮ್ರಾಜ್ಯಗಳ ವೈಭವವನ್ನು ಸಾರುತ್ತವೆ.
ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ-ಕೌಶಲ್ಯ ಕರ್ಣಪರ್ಯಗಳು, ಭುಜದ ಮೇಲೆ ಕರ್ನಾಟಕ ವೈಶಿಷ್ಟ್ಯದ ಸಿಂಹ ಲಾಂಛನ ಭುಜಕೀರ್ತಿಗಳು, ಕುತ್ತಿಗೆಯಲ್ಲಿ ಕಂಠಿ, ಕಟ್ಟಾಣಿ, ಹಾರಗಳು, ಕರ್ನಾಟಕ ಲಾಂಛನ - ಗಂಡ ಭೇರುಂಡ ಪದಕ, ಕಟಿಯ ಆಭರಣವಾದ ಬೆಳ್ಳಿಯ ಡಾಬು, ಕಟಿಯಲ್ಲಿ ಕೀರ್ತಿಮುಖ ಲಾಂಛನದ ವಡ್ಯಾಣ, ಉದ್ದನೆಯ ವೈಜಯಂತಿ ಹಾರ, ನಡುವೆ ಹೊಯ್ಸಳ ಲಾಂಛನದ ಪದಕ ನಾಡದೇವತೆಯನ್ನು ಅಲಂಕರಿಸಿದೆ. ಕಾಲಿನಲ್ಲಿ ಕಡಗ, ಋುಳಿ ಮತ್ತು ಕಾಲುಂಗುರಗಳು, ಹಣೆಯ ಲಲಾಟ ತಿಲಕ, ಶಿರದಲ್ಲಿ ಮುಡಿದಿರುವ ಹೂವು ಸೌಭಾಗ್ಯ ದ್ಯೋತಕಗಳಾಗಿವೆ. ಹೂವಿನ ತೋಮಾಲೆಯು ನಾಡದೇವತೆಯ ಸಂಪೂರ್ಣ ಅಲಂಕಾರಕ್ಕೆ ಮೆರುಗು ನೀಡಿದೆ. ತಾವರೆ ಹೂವು(ಕಮಲ) ದೇವಿಯ ಕಾಲುಗಳಿಗೆ ಆಸರೆ ನೀಡಿದೆ. ಪಶ್ಚಿಮ ಘಟ್ಟ, ಸಸ್ಯಕಾಶಿಯು ಸೊಬಗನ್ನು ಹೆಚ್ಚಿಸಿವೆ.
ಹೊಸ ಚಿತ್ರ ಏಕೆ?
ರಾಜ್ಯದ ವಿವಿಧೆಡೆ ಹಲವಾರು ಕಾರ್ಯಕ್ರಮಗಳಲ್ಲಿ ನಾಡದೇವತೆಯ ಭಾವಚಿತ್ರವಾಗಿ ದುರ್ಗಾದೇವಿ, ಸರಸ್ವತಿ ಇತ್ಯಾದಿ ದೇವತೆಗಳ ಚಿತ್ರಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಒಂದು ನಿರ್ದಿಷ್ಟಚಿತ್ರಕೃತಿಯ ಕೊರತೆಯಿರುವುದನ್ನು ಮನಗಂಡ ಸರ್ಕಾರ ಚಿತ್ರವನ್ನು ಆಯ್ಕೆ ಮಾಡಲು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಡಿ.ಮಹೇಂದ್ರ ಅವರ ಅಧ್ಯಕ್ಷತೆಯ ಐವರು ಚಿತ್ರಕಲಾವಿದರ ಸಮಿತಿಯನ್ನು ರಚಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ