ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಮತ್ತು ಶುಲ್ಕಗಳ ವಸೂಲಿಗೆ ಹೊಸ ಕರಡು

Kannadaprabha News   | Kannada Prabha
Published : Jul 06, 2025, 08:01 AM IST
GP_832

ಸಾರಾಂಶ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮಬದ್ಧವಾಗಿ ತೆರಿಗೆ ಮತ್ತು ಶುಲ್ಕಗಳ ವಸೂಲಿ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಸುಗಳು) ಕರಡು ನಿಯಮ 2025ನ್ನು ರೂಪಿಸಿ ರಾಜ್ಯ ಸರ್ಕಾರ ಪ್ರಕಟಿಸಿದೆ.

ಬೆಂಗಳೂರು : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮಬದ್ಧವಾಗಿ ತೆರಿಗೆ ಮತ್ತು ಶುಲ್ಕಗಳ ವಸೂಲಿ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಸುಗಳು) ಕರಡು ನಿಯಮ 2025ನ್ನು ರೂಪಿಸಿ ರಾಜ್ಯ ಸರ್ಕಾರ ಪ್ರಕಟಿಸಿದೆ.

ಗ್ರಾ.ಪಂ. ವ್ಯಾಪ್ತಿಗಳಲ್ಲಿ ತೆರಿಗೆ ವ್ಯಾಪ್ತಿಗೊಳಪಡದ (ಬಿ ಖಾತಾ-199ಸಿ) ಆಸ್ತಿಗಳನ್ನು ಪತ್ತೆ ಮಾಡಿ, ಅವುಗಳಿಂದಲೂ ತೆರಿಗೆ, ಶುಲ್ಕ ವಸೂಲಿ ಮಾಡುವುದು ಹಾಗೂ ಎಲ್ಲ ಗ್ರಾಪಂಗಳಲ್ಲೂ ಏಕರೂಪ ತೆರಿಗೆ, ಶುಲ್ಕ ವಿಧಿಸುವ ಸಂಬಂಧ ಹೊಸ ಕರಡು ನಿಯಮ ರೂಪಿಸಲಾಗಿದೆ.

ಕರಡು ನಿಯಮದ ಪ್ರಕಾರ ಗ್ರಾಪಂ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಶುಲ್ಕ ವಿಧಿಸಿ, ನಂತರ ಅನುಮತಿ ನೀಡುವಂತೆ ಸೂಚಿಸಲಾಗಿದೆ. ಅದರೊಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ವಸತಿ, ವಸತಿಯೇತರ ಕಟ್ಟಡ, ವಾಣಿಜ್ಯ ಉದ್ದೇಶದ ಭೂಮಿ ಸೇರಿದಂತೆ ಇನ್ನಿತರ ಎಲ್ಲ ಆಸ್ತಿಗಳಿಗೆ ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ನೀಡಿ, ನೋಂದಣಿ ಮಾಡುವಂತೆಯೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ವಸತಿ, ವಾಣಿಜ್ಯ ಕಟ್ಟಡಗಳು, ನಿವೇಶನ, ವಾಣಿಜ್ಯ ಉದ್ದೇಶದ ಭೂಮಿ, ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ), ಮೊಬೈಲ್‌ ಟವರ್‌ ಸೇರಿದಂತೆ ಇನ್ನಿತರ ಆಸ್ತಿಗಳಿಗೆ ಪ್ರತ್ಯೇಕ ತೆರಿಗೆ ಮತ್ತು ಶುಲ್ಕಗಳನ್ನು ನಿಗದಿ ಮಾಡಲಾಗಿದೆ. ನೂತನ ಕರಡು ನಿಯಮಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಅದಾದ ನಂತರ ಆಕ್ಷೇಪಣೆಗಳನ್ನು ಗಮನಿಸಿ ನಿಯಮದಲ್ಲಿ ಬದಲಾವಣೆ ತಂದು ಅಂತಿಮ ನಿಯಮ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಮೊದಲ ವರ್ಷ 2 ಪಟ್ಟು ತೆರಿಗೆ

ಕರಡು ನಿಯಮದಂತೆ ಗ್ರಾಮ ಪಂಚಾಯತಿಗಳಲ್ಲಿ 199ಸಿ ಅಡಿಯಲ್ಲಿ ಪ್ರತಿ ಆಸ್ತಿಗಳ, ತೆರಿಗೆ ಮತ್ತು ದರ ವಸೂಲಿ ಮಾಡಬಹುದಾದ ಆಸ್ತಿಗಳ ನೋಂದಣಿ ಮಾಡಿಕೊಂಡು, ಅದಕ್ಕೆ ಪ್ರತ್ಯೇಕ ಪಿಐಡಿ ಸಂಖ್ಯೆಯನ್ನು ರೂಪಿಸಬೇಕು. ಅಲ್ಲದೆ, ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಎಲ್ಲ ನೋಂದಣಿಯಾಗಿರುವ (ಎ ಖಾತಾ-199ಬಿ) ಮತ್ತು ಅನುಮತಿ ಪಡೆಯದ, ನೊಂದಣಿಯಾಗದ ಆಸ್ತಿ (199ಸಿ)ಗಳಿಗೂ ಪಿಐಡಿ ಸಂಖ್ಯೆಯನ್ನು ಸೃಜಿಸಬೇಕು. ಒಂದು ವೇಳೆ ಅಧಿಸೂಚನೆ ನಂತರ ನೋಂದಣಿಯಾಗದ ಅನಧಿಕೃತ ಆಸ್ತಿಗಳಿಗೆ ಪಿಐಡಿ ಸಂಖ್ಯೆ ಅಥವಾ ಖಾತಾ ನೀಡಿದರೆ ಅದನ್ನು ಕಾನೂನುಬಾಹಿರ ಎಂದು ನಿಯಮದಲ್ಲಿ ತಿಳಿಸಲಾಗಿದೆ.

ಹೊಸದಾಗಿ ಪಿಐಡಿ ಸಂಖ್ಯೆ ಸೃಜಿಸಿ ಬಿ ಖಾತಾ ವ್ಯಾಪ್ತಿಗೆ ಬರುವ ಆಸ್ತಿಗಳಿಂದ ಮೊದಲ ವರ್ಷ 2 ಪಟ್ಟು ತೆರಿಗೆ ವಸೂಲಿ ಮಾಡಬೇಕು ಹಾಗೂ ಅದಾದ ನಂತರದ ವರ್ಷಗಳಿಂದ ನಿಗದಿತ ತೆರಿಗೆ ವಸೂಲಿ ಮಾಡಬೇಕು ಎಂದೂ ನಿಯಮದಲ್ಲಿ ತಿಳಿಸಲಾಗಿದೆ. ಇನ್ನು, ಹೊಸದಾಗಿ ನಿರ್ಮಾಣವಾಗುವ ಕಟ್ಟಡಗಳಿಗೆ ಗ್ರಾಮ ಪಂಚಾಯಿತಿಯಿಂದ ಶುಲ್ಕ ವಸೂಲಿ ಮಾಡಿ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ನೀಡಿದ ದಿನದಿಂದಲೇ ತೆರಿಗೆ ವ್ಯಾಪ್ತಿಗೆ ತರಬೇಕು ಎಂದೂ ಹೇಳಲಾಗಿದೆ.

ಸೈನಿಕರಿಗೆ, ಎಚ್‌ಐವಿ ರೋಗಿಗಳಿಗೆ ತೆರಿಗೆ ವಿನಾಯಿತಿ

ಗ್ರಾಪಂ ವ್ಯಾಪ್ತಿಯಲ್ಲಿ ಧರ್ಮಾರ್ಥವಾಗಿ ನಡೆಸಲಾಗುವ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಇನ್ನಿತರ ಸಂಸ್ಥೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತಿದೆ. ಜತೆಗೆ ಸೈನಿಕರು, ಮಾಜಿ ಸೈನಿಕರು, ಮೃತ ಸೈನಿಕರ ಪತ್ನಿಯರು, ಕುಷ್ಠ ರೋಗಿಗಳು, ಎಚ್‌ಐವಿ ರೋಗಿಗಳು, ವಿಶೇಷಚೇತನರು, ಸ್ವ ಸಹಾಯ ಗುಂಪುಗಳಿಗೆ ಸೇರಿದ ಆಸ್ತಿಗಳಿಗೆ ಇರುವ ಶೇ. 50ರಷ್ಟು ತೆರಿಗೆ ವಿನಾಯಿತಿ ಕ್ರಮ ಮುಂದುವರಿಸಲು ನಿಯಮದಲ್ಲಿ ತಿಳಿಸಲಾಗಿದೆ. ಜತೆಗೆ, ಎಲ್ಲ ಆಸ್ತಿಗಳಿಗೂ ಆರ್ಥಿಕ ವರ್ಷದ ಮೊದಲ 3 ತಿಂಗಳಲ್ಲಿ ತೆರಿಗೆ ಪಾವತಿಸಿದರೆ ಶೇ. 5ರಷ್ಟು ತೆರಿಗೆ ವಿನಾಯಿತಿ ನೀಡುವ ಕುರಿತು ಉಲ್ಲೇಖಿಸಲಾಗಿದೆ.

ಹಲವು ವಾಣಿಜ್ಯ ಚಟುವಟಿಕೆಗೆ ಶುಲ್ಕ

ತೆರಿಗೆಯ ಜತೆಗೆ ವಿವಿಧ ವಾಣಿಜ್ಯ ಚಟುವಟಿಕೆಗಳಿಂದ ಶುಲ್ಕ ವಸೂಲಿಗೆ ಗ್ರಾಮ ಪಂಚಾಯತಿಗಳಿಗೆ ಅಧಿಕಾರ ನೀಡಲಾಗಿದೆ. ಅದರಂತೆ ವಾಹನ ನಿಲ್ದಾಣ ಶುಲ್ಕ, ಸಂತೆ, ಮಾರುಕಟ್ಟೆ, ರಸ್ತೆ ಬದಿ ಮಾರಾಟ ಸ್ಥಳಗಳಿಗೆ, ಒಎಫ್‌ಸಿ, ಪೈಪ್‌ಲೈನ್‌ ಅಳವಡಿಕೆಯಿಂದಲೂ ಶುಲ್ಕ ವಸೂಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದರೊಂದಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ, ನಕ್ಷೆ ಮಂಜೂರಾತಿ, ಒಸಿ ನೀಡುವುದು ಸೇರಿದಂತೆ ಇನ್ನಿತರ ಅನುಮತಿ ಮತ್ತು ಪ್ರಮಾಣಪತ್ರ ನೀಡುವುದರಿಂದಲೂ ಶುಲ್ಕ ವಸೂಲಿ ಮಾಡಬಹುದಾಗಿದೆ.

ಚರಾಸ್ತಿ-ಸ್ಥಿರಾಸ್ತಿ ಜಪ್ತಿ

ನಿಗದಿತ ತೆರಿಗೆ ಅಥವಾ ಶುಲ್ಕ ಪಾವತಿಸಲು ವಿಫಲರಾಗುವವರಿಗೆ ಮೊದಲಿಗೆ ತಗಾದೆ ನೋಟಿಸ್‌ ನೀಡಬೇಕು. ಅದಾದ ನಂತರ ತಗಾದೆ ಆದೇಶ ಜಾರಿ ಮಾಡಿ, ಅದರಿಂದಲೂ ತೆರಿಗೆ ಅಥವಾ ಶುಲ್ಕ ಪಾವತಿಸದಿದ್ದರೆ ಆಸ್ತಿ ಮಾಲೀಕರ ಚರಾಸ್ತಿ ಅಥವಾ ಸ್ಥಿರಾಸ್ತಿ ಜಪ್ತಿ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಚರಾಸ್ತಿ ಅಥವಾ ಸ್ಥಿರಾಸ್ತಿ ಜಪ್ತಿ ನಂತರದ 7 ದಿನಗಳಲ್ಲಿ ತೆರಿಗೆ ಅಥವಾ ಶುಲ್ಕ ಪಾವತಿಸದಿದ್ದರೆ ಅವುಗಳನ್ನು ಹರಾಜು ಅಥವಾ ಮಾರಾಟ ಮಾಡಿ ತೆರಿಗೆ, ಶುಲ್ಕ ವಸೂಲಿ ಮಾಡುವ ಅಧಿಕಾರ ನೀಡಲಾಗಿದೆ. ಇನ್ನು, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಮೇಲ್ಮನವಿ ಪ್ರಾಧಿಕಾರವನ್ನಾಗಿ ಮಾಡಲಾಗಿದ್ದು, ಗ್ರಾಮ ಪಂಚಾಯತಿಗಳ ಕ್ರಮದ ವಿರುದ್ಧ ಅಸಮಧಾನವಿದ್ದರೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.

ಆದಾಯ ಹೆಚ್ಚಳ:

ಹಾಲಿ ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೆರಿಗೆ, ಶುಲ್ಕಗಳ ಮೂಲಕ ಸುಮಾರು ₹1,500 ಕೋಟಿಗಳಷ್ಟು ಆದಾಯ ಸಂಗ್ರಹವಾಗುತ್ತಿತ್ತು. ಇದೀಗ ಹೊಸ ನಿಯಮ ರೂಪಿಸಿ, ಅನುಷ್ಠಾನದ ನಂತರ ಅದರ ಆಧಾರದಲ್ಲಿ ತೆರಿಗೆ ಅಥವಾ ಶುಲ್ಕ ವಸೂಲಿ ಮಾಡಿದರೆ ಗ್ರಾಪಂಗಳಿಂದ ಬರುವ ಆದಾಯ ಅಂದಾಜು ₹4,500 ಕೋಟಿಗೆ ತಲುಪುವ ನಿರೀಕ್ಷೆ ಹೊಂದಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ