ಬೆಂಗಳೂರು: ಲಕ್ಷದ ಅಂಚಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ

By Kannadaprabha NewsFirst Published Aug 21, 2020, 7:58 AM IST
Highlights

ಬೆಂಗಳೂರು ನಗರದಲ್ಲಿ 99,822 ಮಂದಿಗೆ ಸೋಂಕು|ಇಂದು ಲಕ್ಷ ದಾಟುವ ಸಾಧ್ಯತೆ|ಬೆಂಗಳೂರಿನಲ್ಲಿ ಗುರುವಾರ ಒಟ್ಟು 25 ಮಂದಿ ಕೊರೋನಾ ಸೋಂಕಿಗೆ ಮೃತಪಟ್ಟ ವರದಿ|  ದೇಶದಲ್ಲಿ ಈವರೆಗೆ ನವ ದೆಹಲಿ, ಮುಂಬೈ, ಚೆನ್ನೈನಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಕೊರೋನಾ ಸೋಂಕು ಕೇಸ್‌ ಪತ್ತೆ| 

ಬೆಂಗಳೂರು(ಆ.21): ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ 2,912 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಒಟ್ಟು ಸಂಖ್ಯೆ ಲಕ್ಷದ ಅಂಚಿಗೆ ಬಂದಿದೆ.

ದೇಶದಲ್ಲಿ ಈವರೆಗೆ ನವ ದೆಹಲಿ, ಮುಂಬೈ, ಚೆನ್ನೈನಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಕೊರೋನಾ ಸೋಂಕು ಪತ್ತೆಯಾಗಿದ್ದಾರೆ. ಇಂದು(ಶುಕ್ರವಾರ) ಬೆಂಗಳೂರು ಸಹ ಈ ಪಟ್ಟಿಗೆ ಸೇರ್ಪಡೆಯಾಗಲಿದೆ. ಗುರುವಾರದ ವೇಳೆ ಬೆಂಗಳೂರಿನಲ್ಲಿ 99,822 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಶುಕ್ರವಾರ ಒಂದು ಲಕ್ಷದ ಗಡಿ ದಾಟಲಿದೆ.

ಕೊರೋನಾ ಲಕ್ಷಣವಿರುವ ಶೇ.34 ಜನಕ್ಕೆ ಪಾಸಿಟಿವ್‌!

ಇನ್ನು ಗುರುವಾರ 2,912 ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ. 1981 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಗುಣ ಮುಖರಾದವರ ಸಂಖ್ಯೆ 64,022ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ 34,186 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

25 ಮಂದಿ ಬಲಿ

ಬೆಂಗಳೂರಿನಲ್ಲಿ ಗುರುವಾರ ಒಟ್ಟು 25 ಮಂದಿ ಕೊರೋನಾ ಸೋಂಕಿಗೆ ಮೃತಪಟ್ಟ ವರದಿಯಾಗಿದೆ. ಈ ಪೈಕಿ 10 ವರ್ಷದ ಬಾಲಕಿ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಉಳಿದಂತೆ 13 ಮಂದಿ ವೃದ್ಧರು ಹಾಗೂ 11 ಜನರು 60 ವರ್ಷದ ಒಳಗಿನವರಾಗಿದ್ದಾರೆ. ಒಟ್ಟಾರೆ ಬೆಂಗಳೂರಿನಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1613ಕ್ಕೆ ಏರಿಕೆಯಾಗಿದೆ. 334 ಮಂದಿ ನಗರದ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
 

click me!