
ಬೆಂಗಳೂರು(ಡಿ.27): ಅರ್ಧ ಲೀಟರ್ ಹಾಲಿನ ಜತೆಗೆ 50 ಎಂಎಲ್ ಹೆಚ್ಚುವರಿ ಹಾಲು ಕೊಟ್ಟು 2 ರು. ದರ ಹೆಚ್ಚಿಸಿದ್ದ ಆರು ತಿಂಗಳ ನಿರ್ಧಾರ ಹಿಂಪಡೆಯುವ ಹಾಗೂ ಪ್ರತಿ ಲೀಟರ್ ಹಾಲಿನ ದರ 5 ರು. ಏರಿಕೆಗೆ ಹಾಲು ಉತ್ಪಾದಕ ರೈತರು ಸಲ್ಲಿಸಿದ್ದ ಬೇಡಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕ್ರಾಂತಿ ನಂತರ ಸಭೆ ಕರೆದು ನಿರ್ಧಾರ ಮಾಡಲಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದಾರೆ. ಈ ಮೂಲಕ ಸಂಕ್ರಾಂತಿ ಹಬ್ಬದ ಬಳಿಕ ಹಾಲಿನ ದರ ಏರಿಕೆಯಾಗುವ ಸುಳಿವು ನೀಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಾಲು ಉತ್ಪಾದಕ ರೈತರು ಪ್ರತಿ ಲೀಟರ್ ಹಾಲಿನ ದರ 5 ರು. ಏರಿಕೆಗೆ ಬೇಡಿಕೆ ಸಲ್ಲಿಸಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಎಲ್ಲವನ್ನೂ ಪರಿಶೀಲಿಸಿ ಸೂಕ್ತ ನಿರ್ಧಾರ ಮಾಡಲಿದೆ ಎಂದು ಭೀಮಾನಾಯ್ಕ ಹೇಳಿದ್ದಾರೆ.
ಹಾಲು ಉತ್ಪಾದಕ ರೈತರು ತೀವ್ರ ಸಂಕಷ್ಟದಲ್ಲಿರುವುದನ್ನು ಸಿದ್ದರಾಮಯ್ಯ ಗಮನಿಸಿದ್ದಾರೆ. ಹೀಗಾಗಿ ಸಿಎಂ ಶೀಘ್ರ ರಾಜ್ಯದ ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು, ಹಾಲು ಉತ್ಪಾದಕ ರೈತರ ಹಿತಕ್ಕಾಗಿ ಅಗತ್ಯ ನಿರ್ಣಯ ಕೈಗೊಳ್ಳಲಿದ್ದಾರೆ ಎಂದರು.
ಸಂಕ್ರಾಂತಿ ಬಳಿಕ ಸಿಎಂ ಜೊತೆ ಸಭೆ ಮಾಡಿ ಹಾಲಿನ ದರ ಹೆಚ್ಚಳ ಬಗ್ಗೆ ಚರ್ಚೆ ಮಾಡುತ್ತೇವೆ. ರೈತರ ಬೇಡಿಕೆ ಬಗ್ಗೆ ಚರ್ಚಿಸಿ ಸಭೆಯಲ್ಲಿ ಅವರು ಅಂತಿಮ ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಈವರೆಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
50 ಎಂಎಲ್ ಹೆಚ್ಚುವರಿ ಹಾಲು ಕಡಿತ?:
ಆರು ತಿಂಗಳ ಹಿಂದಷ್ಟೇ 500 ಎಂ.ಎಲ್. ಹಾಲಿನ ಬದಲಿಗೆ 550 ಎಂ.ಎಲ್. ಹಾಲು ನೀಡಿ ಹೆಚ್ಚುವರಿ ಹಾಲಿನ ಪ್ರಮಾಣಕ್ಕೆ ತಕ್ಕಂತೆ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಹೆಚ್ಚುವರಿ 50 ಎಂಎಲ್ ಹಾಲು ನೀಡುವ ನಿರ್ಧಾರ ಹಿಂಪಡೆದು ಹೆಚ್ಚುವರಿಯಾಗಿ ವಿಧಿಸಿದ್ದ 2 ರು. ಬೆಲೆ ಏರಿಕೆ ನಿರ್ಧಾರ ಹಿಂಪಡೆಯಲಿದ್ದಾರೆ. ಬಳಿಕ ರೈತರ ಮನವಿ ಆಧಾರದ ಮೇಲೆ ಚರ್ಚಿಸಿ ದರ ಏರಿಕೆ ನಿರ್ಧಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
5 ಸಾವಿರ ಟನ್ ಹಿಟ್ಟು ಮಾರಾಟ ಗುರಿ:
ಬುಧವಾರ ಸಿಎಂ ಬಿಡುಗಡೆ ಮಾಡಿದ ನಂದಿನಿ ದೋಸೆ ಮತ್ತು ಇಡ್ಲಿ ಹಿಟ್ಟಿನ ಬಗ್ಗೆ ಮಾತನಾಡಿ, ಸದ್ಯ ಇದು ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಾಗುತ್ತಿದೆ. ಬೇರೆ ಕಂಪನಿಗಳು ದಿನಕ್ಕೆ 30 ಸಾವಿರ ಟನ್‌ನಷ್ಟು ಹಿಟ್ಟು ಮಾರಾಟ ಮಾಡುತ್ತಿವೆ. ನಾವು 5 ಸಾವಿರ ಟನ್ ಮಾರಾಟ ಮಾಡುವ ಮೂಲಕ ಶೇ. 15-20 ರಷ್ಟು ಮಾರುಕಟ್ಟೆ ನಮ್ಮದಾಗಿಸಿಕೊಳ್ಳುವ ಗುರಿ ಹೊಂದಿದ್ದೇವೆ ಎಂದರು.
ಅಮುಲ್ ಮತ್ತು ನಂದಿನಿ ಮರ್ಜ್ ಆಗಲ್ಲ; KMFಅಧ್ಯಕ್ಷ!
ಶಿರಡಿಗೂ ನಂದಿನಿ ತುಪ್ಪ:
ತಿರುಪತಿ ಜತೆಗೆ ಅಯೋಧ್ಯೆಯಲ್ಲಿರುವ ಆಂಜನೇಯ ದೇವಾಲಯದಲ್ಲೂ 10 ವರ್ಷದಿಂದ ನಂದಿನಿ ತುಪ್ಪ ಬಳಕೆ ಆಗುತ್ತಿದೆ. ಶಿರಡಿಯಿಂದಲೂ ಬೇಡಿಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಶಿರಡಿಗೂ ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತೇವೆ. ದೆಹಲಿ, ರಾಜಸ್ಥಾನದಲ್ಲೂ ಮಾರಾಟ ಹೆಚ್ಚಳ ಮಾಡುವ ಗುರಿಯೊಂದಿಗೆ ಕೆಲಸಮಾಡುತ್ತಿದ್ದೇವೆ ಎಂದು ಭೀಮಾನಾಯ್ ಹೇಳಿದರು.
ಆರ್‌ಸಿಬಿ ಪ್ರಾಯೋಜಕತ್ವಕ್ಕೂ ಸಿದ್ದ:
ನಮ್ಮ ಬಜೆಟ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಒಪ್ಪಿಕೊಂಡರೆ ಐಪಿಎಲ್‌ನಲ್ಲಿ ತಂಡದ ಪರ ಪ್ರಾಯೋಜಕತ್ವ ವಹಿಸಲು ಸಹ ಸಿದ್ದವಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಸೇರಿ ಹಲವರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ