ನಾಳೆಯಿಂದ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ರೈಲು ಸಂಚಾರ| ಸೆ.11ರಿಂದ ಮೆಟ್ರೋ ರೈಲು ಸಂಚಾರ ಸಾಮಾನ್ಯ ಸ್ಥಿತಿಗೆ ಬರಲಿದೆ| ದಟ್ಟಣೆ ಅವಧಿಯಲ್ಲಿ ಪ್ರತಿ 5 ನಿಮಿಷ ಉಳಿದಂತೆ 10 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ನಡೆಸಲಿದೆ|
ಬೆಂಗಳೂರು(ಸೆ.10): ನಾಗಸಂದ್ರ- ಯಲಚೇನಹಳ್ಳಿ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ ರೈಲು ಬುಧವಾರ ಸಂಚಾರ ಆರಂಭಿಸಿದ್ದು, ಬೆಳಗ್ಗೆ ಮತ್ತು ಸಂಜೆ ತಲಾ ಮೂರು ಗಂಟೆಗಳ ಕಾಲ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಿದೆ.
ಸೆ.7ರಿಂದ ಬೈಯಪ್ಪನಹಳ್ಳಿ- ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ (ನೇರಳೆ ಮಾರ್ಗ) ಮೆಟ್ರೋ ರೈಲು ಸಂಚಾರ ಆರಂಭಿಸಿತ್ತು. ಬುಧವಾರ ಹಸಿರು ಮಾರ್ಗದಲ್ಲಿ ಬೆಳಗ್ಗೆ 8ರಿಂದ 11 ಮತ್ತು ಸಂಜೆ 4.30ರಿಂದ 7.30ರವರೆಗೆ ರೈಲು ಸಂಚರಿಸಿತು. ಬುಧವಾರ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ರೈಲುಗಳು ಸಂಚರಿಸಿದ್ದು ಅಂದಾಜು ಆರು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ಮೂಲಗಳು ತಿಳಿಸಿವೆ.
ಇಂದಿನಿಂದ ಹಸಿರು ಮಾರ್ಗದಲ್ಲೂ ಮೆಟ್ರೋ ಸಂಚಾರ
ಸೆ.11ರಿಂದ ಮೆಟ್ರೋ ರೈಲು ಸಂಚಾರ ಸಾಮಾನ್ಯ ಸ್ಥಿತಿಗೆ ಬರಲಿದ್ದು, ಶುಕ್ರವಾರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಸಂಚಾರ ನಡೆಸಲಿದೆ. ದಟ್ಟಣೆ ಅವಧಿಯಲ್ಲಿ ಪ್ರತಿ 5 ನಿಮಿಷ ಉಳಿದಂತೆ 10 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ನಡೆಸಲಿದೆ. ಆದರೂ ಕೋವಿಡ್-19 ನಿಯಮದಂತೆ ಒಮ್ಮೆ ಒಂದು ರೈಲಿನಲ್ಲಿ 400 ಜನರು ಮೀರದಂತೆ ಮತ್ತು ನಿಲ್ದಾಣಗಳಲ್ಲಿ 50 ಜನಕ್ಕಿಂತ ಹೆಚ್ಚು ನಿಲ್ಲದಂತೆ ಕ್ರಮ ಮುಂದುವರೆಸಲಾಗುವುದು ಎಂದು ನಮ್ಮ ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.