ನಾಡಗೀತೆ ನಿಯಮ ಖಾಸಗಿ ಶಾಲೆಗೂ ಅನ್ವಯವೇ? ಸ್ಪಷ್ಟನೆ ಕೇಳಿದ ಹೈಕೋರ್ಟ್‌

By Kannadaprabha NewsFirst Published Feb 3, 2024, 11:39 AM IST
Highlights

ನಾಡಗೀತೆ ಹೇಗೆ ಹಾಡಬೇಕು, ಅದರ ನಿಯಮಗಳೇನು ಎಂಬ ಬಗ್ಗೆ ಸರ್ಕಾರ ಹೊರಡಿಸಿರುವ ತಿದ್ದುಪಡಿ ಆದೇಶ ಖಾಸಗಿ ಶಾಲೆಗಳಿಗೆ ಅನ್ವಯವಾಗುತ್ತದೆಯೇ ಇಲ್ಲವೇ ಈ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಡಬೇಕು ಎಂದು ಹೈಕೋರ್ಟ್ ನೋಟಿಸ್ ನೀಡಿದೆ

ಬೆಂಗಳೂರು (ಫೆ.3) ನಿರ್ದಿಷ್ಟ ಧಾಟಿಯಲ್ಲಿ ನಾಡಗೀತೆ ಹಾಡುವುದಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಆದೇಶವು ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ. ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ 2022ರ ಸೆ.25ರಂದು ಸರ್ಕಾರವು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿ, ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಎ.ಎಸ್‌. ಅಹ್ಮದ್‌ ಅವರು, ಹಿಂದಿನ ಆದೇಶಕ್ಕೆ ಸರ್ಕಾರ ತಿದ್ದುಪಡಿ ತಂದು 2024ರ ಫೆ.1ರಂದು ಆದೇಶ ಹೊರಡಿಸಲಾಗಿದೆ. ಅದರಂತೆ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಎಲ್ಲಾ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಇತರೆ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಬೇಕು ಎಂದು ಹಿಂದಿನ ಆದೇಶದಲ್ಲಿ ಹೇಳಲಾಗಿತ್ತು.

ಸದ್ಯ ಆ ಆದೇಶಕ್ಕೆ ತಿದ್ದುಪಡಿ ತರಲಾಗಿದ್ದು, ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು, ನಿಗಮ, ಮಂಡಳಿ, ಪ್ರಾಧಿಕಾರ ಮುಂದಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು ಎಂಬುದಾಗಿ ಸೂಚಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿ, ಆದೇಶ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದರು.

 

ನಾಡಗೀತೆಗೆ ಧಾಟಿ ನಿಗದಿ ಅಧಿಕಾರ ನಿಮಗಿದ್ಯಾ?: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ತಿದ್ದುಪಡಿ ಆದೇಶ ಪರಿಶೀಲಿಸಿದ ನ್ಯಾಯಪೀಠ, ಎಲ್ಲಾ ಶಾಲೆಗಳು ಎಂಬುದಾಗಿ ಸರ್ಕಾರ ಹೇಳಿದೆ. ಎಲ್ಲಾ ಶಾಲೆಗಳು ಎಂದರೆ ಯಾವುವು? ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೂ ಈ ಆದೇಶ ಅನ್ವಯಿಸಲಿದೆಯೇ? ಅಥವಾ ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯಿಸಲಿದೆಯೇ? ಎಂದು ಪ್ರಶ್ನಿಸಿದರು.

ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಉತ್ತರಿಸಿ, ಈ ಕುರಿತು ರಾಜ್ಯ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆದು ವಿವರಣೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ತಿದ್ದುಪಡಿ ಆದೇಶದಲ್ಲಿ ‘ಎಲ್ಲಾ ಶಾಲೆಗಳಲ್ಲಿ’ ಎಂಬ ಪದದ ಅರ್ಥವನ್ನು ಸ್ಪಷ್ಟಪಡಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.

ಅಂತಿಮವಾಗಿ, ನಿರ್ದಿಷ್ಟ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂಬುದಾಗಿ ಅರ್ಜಿದಾರರು ಹೇಳುತ್ತಿದ್ದಾರೆ. ಅರ್ಜಿದಾರರ ಮನವಿ ಪುರಸ್ಕರಿಸುವುದರಿಂದ ಅನಪೇಕ್ಷಿತ ಬೆಳವಣಿಗೆಗಳಿಗೆ ನಾಂದಿ ಹಾಡಿದಂತಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಎರಡೂ ಕಡೆಯ ವಾದವನ್ನು ನ್ಯಾಯಾಲಯ ಆಲಿಸಿದೆ. ಆದರೆ, ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲ ಪಾಲುದಾರರೂ ಒಟ್ಟಾಗಿ ಹಾಗೂ ಸೌಹಾರ್ದಯುತವಾಗಿ ಚರ್ಚಿಸಬೇಕು. ಆ ಕುರಿತ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ನ್ಯಾಯಪೀಠ ಇದೇ ವೇಳೆ ಸರ್ಕಾರ ಹಾಗೂ ಅರ್ಜಿದಾರರಿಗೆ ಮೌಖಿಕವಾಗಿ ಸೂಚಿಸಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ವಕೀಲರು, ಸರ್ಕಾರದ ತಿದ್ದುಪಡಿ ಆದೇಶದ ಪ್ರಕಾರ ಎಲ್ಲಾ ಶಾಲೆಗಳಲ್ಲಿ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ನಾಡಗೀತೆ ಹಾಡಬೇಕು ಎಂದು ಹೇಳಲಾಗಿದೆ. ಹಾಗಾದರೆ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡು ಹಾಡುವಂತಿಲ್ಲ ಎಂದು ತೋರಿಸುತ್ತದೆ. ಈ ಆದೇಶ ಜಾರಿಯಾದರೆ ರಾಜ್ಯದಲ್ಲಿ ಶೇ.75ರಷ್ಟು ಶಾಲೆಗಳು ನಾಡಗೀತೆಯನ್ನು ಹಾಡುವುದನ್ನೇ ನಿಲ್ಲಿಸುವ ಸಾಧ್ಯತೆಯಿದೆ. ಆದೇಶ ಮಾಡುವ ಭರದಲ್ಲಿ ಖಾಸಗಿ ಶಾಲೆಗಳು ಹಾಡುವಂತಿಲ್ಲ ಎಂಬ ಭಾವನೆ ಬರುವ ರೀತಿಯಲ್ಲಿ ಆದೇಶ ಪ್ರಕಟಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಅಲ್ಲದೆ, ಸಂವಿಧಾನದ ಕಲ್ಪಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ರಾಜ್ಯ ಅಥವಾ ರಾಷ್ಟ್ರಗೀತೆಯನ್ನು ತನ್ನ ಇಚ್ಛೆಯ ರಾಗದಲ್ಲಿ ಹಾಡುವ ಹಕ್ಕು ಸೇರಿದೆ. ಸರ್ಕಾರಿ ಶಾಲೆ, ಅನುದಾನಿತ, ಅನುದಾನರಹಿತ ಶಾಲೆ, ಶಾಸನಬದ್ಧ ನಿಗಮ ಮಂಡಳಿಗೂ ಇದು ಅನ್ವಯಿಸುತ್ತದೆ. ನಿರ್ದಿಷ್ಟ ಧಾಟಿಯಲ್ಲಿ ನಾಡಗೀತೆ ಹಾಡುವಂತೆ ಕಡ್ಡಾಯಗೊಳಿಸಿರುವುದು ವಾಕ್‌ ಸ್ವಾತಂತ್ರ್ಯದ ಹರಣವಾಗಿದೆ. ಮೇಲಾಗಿ ಇದೇ ಧಾಟಿಯಲ್ಲಿ ಹಾಡಲು ಬಲವಂತ ಮಾಡುವ ಹಾಗೂ ಅಂತಹ ಆದೇಶ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಶಾಸನದ ಅಧಿಕಾರವೇ ಇಲ್ಲ. ಶಾಸನದ ಬೆಂಬಲವಿಲ್ಲದೇ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲಾಗದು. ಹಕ್ಕು ಮೊಟಕಗೊಳಿಸಲು ಕಾರ್ಯಕಾರಿ ಅಧಿಕಾರ ಬಳಸಲಾಗದು ಎಂದು ವಾದ ಮಂಡಿಸಿದರು.

ವಿಚಾರಣೆ ವೇಳೆ ಹಿರಿಯ ಸುಗಮ ಸಂಗೀತ ಗಾಯಕ ಮುದ್ದು ಕೃಷ್ಣ ಅವರು, 1993ರಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ಹಾಜರಿದ್ದ ಸ್ವತಃ ಅನಂತ ಸ್ವಾಮಿ ಅವರೇ, ತಾನು ನಾಡಗೀತೆಯ ಎಲ್ಲಾ ಚರಣಗಳಿಗೆ ರಾಗ ಸಂಯೋಜಿಸಿಲ್ಲ. ಕೇವಲ ಮೊದಲ ಹಾಗೂ ಕೊನೆಯ ಚರಣಗಳಿಗೆ ರಾಗ ಸಂಯೋಜನೆ ಮಾಡಿದ್ದೇನೆ. ಸಿ. ಅಶ್ವತ್ಥ್‌ ಅವರು ನಾಡಗೀತೆಯ ಎಲ್ಲಾ ಚರಣಗಳಿಗೂ ರಾಗ ಸಂಯೋಜನೆ ಮಾಡಿದ್ದು, ಅವರ ಧಾಟಿಯನ್ನೇ ಬಳಕ ಮಾಡಬೇಕು ಎಂದು ಸೂಚಿಸಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಹೈಕೋರ್ಟ್‌ನಲ್ಲಿ ಮೊಳಗಿದ ನಾಡಗೀತೆ: 5 ರಾಗಗಳಲ್ಲಿ ಹಾಡಿ ಕೋರ್ಟ್‌ನಲ್ಲಿ ವಾದ

ಹೆಚ್ಚುವರಿ ಅಡ್ವೋಕೇಟ್‌ ಜನರಲ್‌,. ಇಂತಹ ಆದೇಶ ಹೊರಡಿಸಲು ಸರ್ಕಾರ ಶಾಸನಾತ್ಮಕ ಅಧಿಕಾರ ಹೊಂದಿರಬೇಕು ಎಂಬುದು ಅರ್ಜಿದಾರರು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರದ ತಿದ್ದುಪಡಿ ಆದೇಶದಿಂದ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ನಾಡಗೀತೆ/ರಾಷ್ಟ್ರಗೀತೆ ಹಾಡುವುದು ಕಾರ್ಯಕಾರಿ ಸೂಚನೆಯಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ 1983ಯ ಸೆಕ್ಷನ್ 113 (3), 7(2)ಯಲ್ಲಿ ಅಧಿಕಾರ ನೀಡಲಾಗಿದೆ. ನಾಡಗೀತೆಯನ್ನು ಇಂತಹುದೇ ಧಾಟಿಯಲ್ಲಿ ಹಾಡಬೇಕು ಎಂದು ಸರ್ಕಾರದ ಆದೇಶ ಹೊರಡಿಸಿರುವಾಗ ಮತ್ತೊಂದು ಧಾಟಿಯಲ್ಲಿ (ದಿ.ಗಾಯಕ ಸಿ.ಅಶ್ವತ್ಥ್ ಸಂಯೋಜಿಸಿದ ರಾಗದಲ್ಲಿ) ಹಾಡಲು ನಿರ್ದೇಶಿಸಬೇಕೆಂಬ ಅರ್ಜಿದಾರ ಮನವಿ ನ್ಯಾಯಾಲಯ ಪುರಸ್ಕರಿಸಬಾರದು.

click me!