
ಬೆಂಗಳೂರು(ಜು.17): ಪ್ರಾಥಮಿಕ ಶಿಕ್ಷಣ ಹಾಗೂ ಆರೋಗ್ಯ ವಲಯದ ಇನ್ನಷ್ಟು ಅಭಿವೃದ್ಧಿಯಾಗಬೇಕಾದ ಅಗತ್ಯತೆ ಇದ್ದು, ಅದಕ್ಕಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ಇಸ್ಫೋಸಿಸ್ ಕಂಪನಿ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಿಂದ ಹಮ್ಮಿಕೊಂಡಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಸಿವು ನೀಗಿಸುವಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಶಿಕ್ಷಣದಲ್ಲಿ ಹೆಚ್ಚು ಸ್ಪರ್ಧೆ ಇರುವ ಪ್ರಸ್ತುತ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ವೀಕೆಂಡ್ ವಿತ್ ರಮೇಶ್ ಗೆ ಮೂರ್ತಿ ದಂಪತಿ, ನೀವು ಪ್ರಶ್ನೆ ಕೇಳ್ಬಹುದು!
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಎಂದ ತಕ್ಷಣ 65 ವರ್ಷದ ಹಿಂದೆ ಮಂಡ್ಯದ ಹಳ್ಳಿಯೊಂದರ ಶಾಲೆಯಲ್ಲಿನ ನನ್ನ ಹೈಸ್ಕೂಲಿನ ಸಂದರ್ಭ ನೆನೆಪಿಗೆ ಬರುತ್ತದೆ. ಈ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವಿಷ್ಯದ ಅಭಿವೃದ್ಧಿಯಲ್ಲಿ ಹೆಚ್ಚು ಮಹತ್ವದ ಪಾತ್ರ ವಹಿಸುತ್ತದೆ. ಇದರಲ್ಲಿ ಮೌಲ್ಯಯುತ ಶಿಕ್ಷಣ, ಸಾಮಾಜಿಕ ನ್ಯಾಯ ಸೇರಿದಂತೆ ಹಲವು ಅಗತ್ಯ ಅಂಶಗಳು ಇವೆ ಎಂದರು.
ವೈರಸ್‌ನಿಂದ ಆರ್ಥಿಕ ಹಿನ್ನೆಡೆ:
ಭಾರತ 1991ರ ನಂತರ ಆರ್ಥಿಕವಾಗಿ ಸಬಲವಾಗುತ್ತಾ ಬಂದಿದೆ. 2019ರ ವೇಳೆಯಲ್ಲಿ ಆರ್ಥಿಕತೆಯಲ್ಲಿ ದೇಶದ ಉತ್ಪನ್ನಗಳ ರಫ್ತಿನಿಂದಾಗಿ ಶೇ.25ರಷ್ಟುಏರಿಕೆ ಸಾಧಿಸಿದೆ. ಸದ್ಯ ಕೊರೋನಾ ವೈರಸ್‌ನಿಂದಾಗಿ ಇಡೀ ಜಗತ್ತೆ ಆರ್ಥಿಕತೆ ಹಿನ್ನಡೆ ಸಾಧಿಸಿದೆ. ಜಗತ್ತಿನಲ್ಲಿ ಸುಮಾರು 140 ಮಿಲಿಯನ್ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದರು.
ಕೇಂದ್ರ ಸರ್ಕಾರ ಕೊರೋನಾ ವಿರುದ್ಧ ಸೂಕ್ತ ರೀತಿಯಲ್ಲಿ ಹೋರಾಡುತ್ತಿದೆ. ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳವುದು, ಲಕ್ಷಣ ಕಂಡು ಬಂದರೆ ಸ್ವಯಂ ಕ್ವಾರಂಟೈನ್ ಆಗುವುದು, ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಬಳಸುವ ಮುಖೇನ ಶಿಸ್ತುಬದ್ಧವಾಗಿ ನಿಯಮ ಪಾಲಿಸಬೇಕು. ಮುಂದುವರಿದ ತಂತ್ರಜ್ಞಾನದ ಭಾಗವಾದ ಆನ್‌ಲೈನ್ ಶಾಪಿಂಗ್ ಆ್ಯಪ್ ಬಳಸಬೇಕು. ಆನ್‌ಲೈನ್‌ನಲ್ಲೇ ಮಕ್ಕಳು ಮತ್ತು ಸಂಬಂಧಿಕರನ್ನು ಕಾಣುವ ಮೂಲಕ ಸರ್ಕಾರದ ಹೋರಾಟಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಹಲವು ಪ್ರಶ್ನೆಗಳಿಗೆ ನಾರಾಯಣ ಮೂರ್ತಿ ಉತ್ತರಿಸಿದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹಾಗೂ ಮಧುಸೂದನ್ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ