
ಪ್ರತಿದಿನ ಲಕ್ಷಾಂತರ ಭಾರತೀಯರು ಹೆಲ್ಮೆಟ್ ಬಳಸ್ತಾರೆ. ಆದರೆ ಅದನ್ನು ಎಷ್ಟು ಬಾರಿ ಸ್ವಚ್ಛಗೊಳಿಸ್ತೇವೆ ಎಂಬ ಪ್ರಶ್ನೆ ಬಂದಾಗ ಬಹುತೇಕರ ಉತ್ತರ ನೋ ಅಂತಾನೇ ಇರುತ್ತೆ. ಹೆಲ್ಮೆಟ್ ಕ್ಲೀನ್ ಮಾಡೋದು ಕಷ್ಟದ ಕೆಲ್ಸ ಅಂತ ಬಹುತೇಕರ ಭಾವನೆ. ಹೆಲ್ಮೆಟ್ ಹೊರಗಿನಿಂದ ಸ್ವಚ್ಛವಾಗಿ ಕಂಡರೂ, ಒಳಭಾಗದಲ್ಲಿ ಬೆವರು, ಧೂಳು ಮತ್ತು ದುರ್ವಾಸನೆಯಿಂದ ಕೂಡಿರುತ್ತದೆ. ಈ ಸಮಸ್ಯೆಗೆ ಪರಿಹಾರ ನೀಡಲು ಮೈಸೂರಿನ Helmify ಸ್ಟಾರ್ಟ್ಅಪ್ ಹೊಸ ಪ್ರಯತ್ನಕ್ಕೆ ಕೈಹಾಕಿದೆ.
ರಸ್ತೆಯಲ್ಲಿ ನಮ್ಮ ಜೀವ ರಕ್ಷಿಸುವ ಹೆಲ್ಮೆಟ್ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಆದರೆ ಹೆಲ್ಮೆಟ್ಗಳನ್ನು ವೃತ್ತಿಪರವಾಗಿ ಸ್ವಚ್ಛಗೊಳಿಸುವ ಸೇವೆಗಳು ಎಲ್ಲೆಡೆ ಸುಲಭವಾಗಿ ಲಭ್ಯವಿಲ್ಲ. ಇದೇ ಸಮಸ್ಯೆಯನ್ನು ಗಮನಿಸಿದ Helmify, ಸ್ವಯಂಚಾಲಿತ ಹೆಲ್ಮೆಟ್ ಕ್ಲೀನಿಂಗ್ ಯಂತ್ರಗಳನ್ನು ಅಭಿವೃದ್ಧಿಪಡಿಸಿದೆ.
ಈ ಯಂತ್ರಗಳನ್ನು ಬಳಸುವುದು ಕೂಡ ಸುಲಭ. ಮೊದಲು ಯಂತ್ರದಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಬೇಕು. ನಂತರ UPI ಮೂಲಕ ಹಣ ಪಾವತಿಸಿ, ಹೆಲ್ಮೆಟ್ ಅನ್ನು ಯಂತ್ರದೊಳಗೆ ಇಡಬೇಕು. ಕ್ಲೀನಿಂಗ್ ಪ್ರಕ್ರಿಯೆ ಮುಗಿದ ಬಳಿಕ ಹೆಲ್ಮೆಟ್ ನಿಮ್ಮ ಕೈ ಸೇರುತ್ತೆ. ಇದಕ್ಕಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಮೂರು ರೀತಿಯ ಕ್ಲೀನಿಂಗ್ ಆಯ್ಕೆಗಳನ್ನು ಕಂಪನಿ ನೀಡುತ್ತಿದೆ.
• 49 ರೂಪಾಯಿ ಪ್ಯಾಕೇಜ್ ನಲ್ಲಿ ಡ್ರೈ ಕ್ಲೀನಿಂಗ್ ಮತ್ತು ದುರ್ವಾಸನೆ ಕಡಿಮೆ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಸುಮಾರು 5 ನಿಮಿಷ ಬೇಕಾಗುತ್ತದೆ.
• ಇನ್ನು 79ರ ಪ್ಯಾಕೇಜ್ ನಲ್ಲಿ ಸ್ಟೀಮ್ ವಾಷಿಂಗ್ ಮತ್ತು ಸ್ಟೆರಿಲೈಸೇಶನ್ ಒಳಗೊಂಡ ಡೀಪ್ ಕ್ಲೀನಿಂಗ್ ನಡೆಯುತ್ತದೆ. ಸುಮಾರು 4 ನಿಮಿಷಗಳಲ್ಲಿ ಕ್ಲೀನಿಂಗ್ ಪೂರ್ಣಗೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.
• 99ರ ಪ್ಯಾಕೇಜ್ ನಲ್ಲಿ ಫೋಮ್ ಕ್ಲೀನಿಂಗ್, ಸ್ಟೀಮ್, ಸ್ಟೆರಿಲೈಸೇಶನ್ ಮತ್ತು ಪಾಲಿಶಿಂಗ್ ಒಳಗೊಂಡ ಅಡ್ವಾನ್ಸ್ಡ್ ಕ್ಲೀನಿಂಗ್ ನಡೆಯುತ್ತದೆ. ಸುಮಾರು 6 ನಿಮಿಷ ಬೇಕಾಗುತ್ತದೆ.
ಕಂಪನಿಯ ಪ್ರಕಾರ, ಈ ಯಂತ್ರಗಳಲ್ಲಿ UV-C ಲೈಟ್, ಓಝೋನ್ ಟ್ರೀಟ್ಮೆಂಟ್, ಸ್ಟೀಮ್ ಮತ್ತು ನಿಯಂತ್ರಿತ ಡ್ರೈಯಿಂಗ್ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಒಂದೇ ಸಮಯದಲ್ಲಿ ಎರಡು ಹೆಲ್ಮೆಟ್ಗಳನ್ನು ಸ್ವಚ್ಛಗೊಳಿಸುವ ಸಾಮರ್ಥ್ಯವೂ ಈ ಯಂತ್ರಗಳಿಗಿದೆ.
ಮೈಸೂರಿನಿಂದ ತನ್ನ ಪ್ರಯಾಣ ಆರಂಭಿಸಿರುವ Helmify, ಮುಂದಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಿಗೆ ತನ್ನ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಿದೆ. ಪೆಟ್ರೋಲ್ ಬಂಕ್ಗಳು, ಮಾಲ್ಗಳು, ಕಾಲೇಜುಗಳು ಮತ್ತು ವಾಹನ ಸರ್ವಿಸ್ ಸೆಂಟರ್ಗಳಲ್ಲಿ ಈ ಯಂತ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಕಂಪನಿ ಹೊಂದಿದೆ. ಪ್ರತಿದಿನ ಬಳಸುವ ಹೆಲ್ಮೆಟ್ಗಳ ಸ್ವಚ್ಛತೆಯನ್ನು ಬಹುತೇಕ ಜನರು ನಿರ್ಲಕ್ಷಿಸುತ್ತಾರೆ. ಈ ಸಮಸ್ಯೆಗೆ ಸುಲಭವಾದ ಮತ್ತು ಕೈಗೆಟುಕುವ ಸೇವೆ ಒದಗಿಸುವ ಮೂಲಕ Helmify ಹೊಸ ಉದ್ಯಮದ ಅವಕಾಶವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ