ಫಟಾಫಟ್‌ ಕೋವಿಡ್‌ ಟೆಸ್ಟ್‌ಗೆ ಮೈಸೂರು ವಿವಿಯಿಂದ ಕಿಟ್‌: 10 ನಿಮಿಷಕ್ಕೆ ರಿಸಲ್ಟ್!

By Kannadaprabha NewsFirst Published Jun 8, 2021, 7:43 AM IST
Highlights

* ಹತ್ತೇ ನಿಮಿಷದಲ್ಲಿ ಫಲಿತಾಂಶ ಕೊಡುವ ಕಿಟ್

* ತುರ್ತು ಬಳಕೆ ಅನುಮತಿ ಕೋರಿ ಐಸಿಎಂಆರ್‌ಗೆ ರವಾನೆ

* ರೂಪಾಂತರಿ ಕೊರೋನಾ ಕೂಡ ಪತ್ತೆ

* ಹೈದರಾಬಾದ್‌ನ ಲಾರ್ವೆನ್‌ ಬಯೋಲಾಜಿಕ್ಸ್‌ ಕಂಪನಿಯ ಸಹಯೋಗದಲ್ಲಿ ಆ್ಯಂಟಿಜೆನ್‌ ರಾರ‍ಯಪಿಡ್‌ ಡಿಟೆಕ್ಷನ್‌ ಟೆಸ್ಟ್‌

 ಮೈಸೂರು(ಜೂ.08): 5ರಿಂದ 10 ನಿಮಿಷದಲ್ಲಿ ಫಲಿತಾಂಶ ನೀಡುವ ವಿಶಿಷ್ಟಕೊರೋನಾ ಪರೀಕ್ಷಾ ಕಿಟ್‌ವೊಂದನ್ನು ಮೈಸೂರು ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುವ ಮೂಲಕ ದೇಶದ ಗಮನ ಸೆಳೆದಿದೆ.

ಹೈದರಾಬಾದ್‌ ಮೂಲದ ಔಷಧ ಕಂಪನಿ ಲಾರ್ವೆನ್‌ ಬಯೋಲಾಜಿಕ್ಸ್‌ ಕಂಪನಿಯ ಸಹಯೋಗದಲ್ಲಿ ಆ್ಯಂಟಿಜೆನ್‌ ರಾರ‍ಯಪಿಡ್‌ ಡಿಟೆಕ್ಷನ್‌ ಟೆಸ್ಟ್‌ (ಎಆರ್‌ಡಿಟಿ) ಕಿಟ್‌ ಅನ್ನು ವಿವಿ ಅಭಿವೃದ್ಧಿಪಡಿಸಿದೆ. ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಿ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಗೆ ಕಿಟ್‌ ಕಳುಹಿಸಲಾಗುತ್ತಿದೆ ಎಂದು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ತಿಳಿಸಿದ್ದಾರೆ.

ಸದ್ಯ ಆರ್‌ಟಿ-ಪಿಸಿಆರ್‌ ಹಾಗೂ ರಾರ‍ಯಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ಗಳನ್ನು ಕೊರೋನಾ ಪರೀಕ್ಷೆಗೆ ಬಳಸಲಾಗುತ್ತಿದೆ. ಆರ್‌ಟಿ-ಪಿಸಿಆರ್‌ನಲ್ಲಿ ಫಲಿತಾಂಶ ಬರಲು ಕನಿಷ್ಠ 24 ತಾಸು ಸಮಯ ಹಿಡಿಯುತ್ತಿದೆ. ಆ್ಯಂಟಿಜೆನ್‌ ಟೆಸ್ಟ್‌ನಲ್ಲಿ ಫಲಿತಾಂಶಕ್ಕೆ 20ರಿಂದ 30 ನಿಮಿಷ ಕಾಯಬೇಕು. ಆದರೆ ಮೈಸೂರು ವಿವಿಯ ಕಿಟ್‌ ಅದಕ್ಕಿಂತ ತ್ವರಿತವಾಗಿ ಫಲಿತಾಂಶ ನೀಡುತ್ತದೆ ಎಂಬುದು ಗಮನಾರ್ಹ.

"

ರೂಪಾಂತರಿ ಕೂಡ ಪತ್ತೆ:

ಈ ಟೆಸ್ಟ್‌ ಕಿಟ್‌ ಮೂಲಕ ಗಂಟಲು ದ್ರವ ಹಾಗೂ ಮೂಗಿನ ಸ್ವಾ್ಯಬ್‌ ಬಳಸಿ ಮನೆಯಲ್ಲೇ ಟೆಸ್ಟ್‌ ಮಾಡಬಹುದು. ಯಾವುದೇ ವ್ಯಕ್ತಿಗೆ ಸೋಂಕು ತಗುಲಿದೆಯೇ ಇಲ್ಲವೇ ಎಂಬುದು 10 ನಿಮಿಷದೊಳಗೆ ತಿಳಿದುಬರುತ್ತದೆ. ಈಗ ಕಂಡುಬರುತ್ತಿರುವ ರೂಪಾಂತರಿ ಕೊರೋನಾ ವೈರಸ್‌ ಆರ್‌ಟಿ-ಪಿಸಿಆರ್‌ ಟೆಸ್ಟ್‌ನಲ್ಲೂ ಪತ್ತೆಯಾಗುತ್ತಿಲ್ಲ. ಆದರೆ ಈಗ ನೂತನವಾಗಿ ಅಭಿವೃದ್ಧಿಪಡಿಸಲಾದ ಎಆರ್‌ಡಿಟಿ ಕಿಟ್‌ ಮೂಲಕ ಪರೀಕ್ಷಿಸಿದರೆ ಶೇ.90ರಷ್ಟುನಿಖರವಾಗಿ ಪತ್ತೆ ಹಚ್ಚಬಹುದು ಎಂದು ಸಂಶೋಧನಾ ತಂಡ ತಿಳಿಸಿದೆ.

ಈ ಟೆಸ್ಟ್‌ ಕಿಟ್‌ನ ವಿಶೇಷತೆ ಎಂದರೆ ಮೊಬೈಲ್‌ ಆ್ಯಪ್‌ ಜತೆ ಸಂಪರ್ಕ ಹೊಂದಿರುವ ಬಾರ್‌ಕೋಡ್‌ ಸ್ಟ್ರಿಪ್‌. ಬಾರ್‌ಕೋಡ್‌ ಅನ್ನು ಸ್ಕಾ್ಯನ್‌ ಮಾಡುತ್ತಿದ್ದಂತೆ ಯಾವುದೇ ವ್ಯಕ್ತಿ ಕೋವಿಡ್‌ ಪಾಸಿಟಿವ್‌ ಅಥವಾ ನೆಗೆಟಿವ್‌ ಆಗಿರಲಿ ಆತನ ಆರೋಗ್ಯ ಸ್ಥಿತಿ ಸರ್ವರ್‌ನಲ್ಲಿ ಅಪ್‌ಡೇಟ್‌ ಆಗುತ್ತದೆ. ತನ್ಮೂಲಕ ಸರ್ಕಾರಿ ಸಂಸ್ಥೆಗಳಿಗೆ ಕೊರೋನಾ ಪ್ರಕರಣಗಳ ಮೇಲೆ ನಿಗಾ ಇಡಲು ಅನುಕೂಲವಾಗುತ್ತದೆ. ಈ ಕಿಟ್‌ ಅಭಿವೃದ್ಧಿಪಡಿಸಲು ಮಾಲಿಕ್ಯುಲರ್‌ ಬಯೋಲಜಿ, ನ್ಯಾನೋ ಟೆಕ್ನಾಲಜಿ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದೆ.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರ ಮಾರ್ಗದರ್ಶನದಲ್ಲಿ ಮೈಸೂರು ವಿವಿ ವಿಜ್ಞಾನ ಭವನ ಸಂಚಾಲಕ ಡಾ.ಎಸ್‌. ಚಂದ್ರನಾಯಕ್‌ ಮತ್ತು ಮೈಸೂರು ವಿವಿ ಮಾಲಿಕ್ಯೂಲರ್‌ ಬಯೋಲಜಿ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಡಿ. ಮೋಹನ್‌ ನೇತೃತ್ವದಲ್ಲಿ ಸಂಶೋಧನೆ ನಡೆಸಿ ಈ ಕಿಟ್‌ ಅಭಿವೃದ್ಧಿಪಡಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಪ್ರೊ.ಕೆ.ಎಸ್‌.ರಂಗಪ್ಪ, ಜಾಗತಿಕವಾಗಿ ಕಾಡುತ್ತಿರುವ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಯೋಚಿಸಿ ಸಂಶೋಧನೆಗೆ ಮುಂದಾದಾಗ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಕೂಡ ಅಗತ್ಯ ನೆರವಿಗೆ ಮುಂದಾದರು. ಆಗ ಹೈದರಾಬಾದ್‌ನ ಲಾರ್ವೆನ್‌ ಬಯೋಲಾಜಿಕ್ಸ್‌ ಕಂಪನಿ ನಿರ್ದೇಶಕ ಡಾ.ವೆಂಕಟರಮಣ ಅವರೊಡನೆ ಮಾತುಕತೆ ನಡೆಸಲಾಯಿತು. ಈಗಾಗಲೇ ಕ್ಯಾನ್ಸರ್‌ ಸಂಬಂಧ ಯಶಸ್ವಿ ಸಂಶೋಧನೆ ನಡೆಸಿದ ಅನುಭವ ಇರುವುದರಿಂದ ಒಂದು ವರ್ಷದ ನಿರಂತರ ಸಂಶೋಧನೆಯ ಫಲವಾಗಿ ಕೋವಿಡ್‌-19 ಪತ್ತೆ ಹಚ್ಚುವ ಸುಲಭ ಸಾಧನೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಪ್ರೆಗ್ನೆನ್ಸಿ ಟೆಸ್ಟ್‌ ಕಿಟ್‌ ಮಾದರಿಯಲ್ಲಿ ಎಆರ್‌ಡಿಟಿ ಕಿಟ್‌ ಅನ್ನು ಅತ್ಯಂತ ಸುಲಭಾಗಿ ಬಳಸಬಹುದಾಗಿದೆ. ಇದರ ಫಲಿತಾಂಶ ಶೇ.90ರಷ್ಟುನಿಖರತೆ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್‌ ಪರೀಕ್ಷೆ ವಿಳಂಬ ಅಥವಾ ಕಡೆಗಣಿಸಿದ ಪರಿಣಾಮ ಸೋಂಕು ಉಲ್ಬಣಗೊಂಡು ವ್ಯಕ್ತಿಗಳು ಮೃತಪಟ್ಟಅನೇಕ ಘಟನೆ ನಡೆದಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಸುಲಭದ ವಿಧಾನದ ಮೂಲಕ ಸೋಂಕು ಪತ್ತೆ ಹಚ್ಚಬಹುದು ಎಂದು ಅವರು ತಿಳಿಸಿದರು.

ಕಿಟ್‌ ಅನ್ನು ವಿಶ್ವವಿದ್ಯಾನಿಲಯವು (ಸರ್ಕಾರಿ ಸಂಸ್ಥೆ) ಅಭಿವೃದ್ಧಿಪಡಿಸಿರುವುದರಿಂದ, ಇದು ಕಡಿಮೆ ವೆಚ್ಚವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ವಿವರಿಸಿದರು.

ಔಷಧ ತಯಾರಿಕೆಗೂ ಯತ್ನ:

ಹೈದರಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕೆಮಿಕಲ್‌ ಟೆಕ್ನಾಲಜಿ (ಐಐಸಿಟಿ) ಮತ್ತು ಲಖನೌದ ಸೆಂಟರ್‌ ಡ್ರಗ್‌ ರೀಸಚ್‌ರ್‍ ಇನ್‌ಸ್ಟಿಟ್ಯೂಟ್‌ ಸಹಯೋಗದಲ್ಲಿ ಕೋವಿಡ್‌-19 ಔಷಧ ರೂಪಿಸಲು ಪ್ರಯತ್ನಿಸಲಾಗುತ್ತಿದೆ. ಈವರೆಗೆ ಉತ್ತಮ ಫಲಿತಾಂಶ ಪಡೆದುಕೊಂಡಿದ್ದು, ಸದ್ಯದಲ್ಲಿಯೇ ಒಳ್ಳೆಯ ಸುದ್ದಿ ಲಭ್ಯವಾಗಲಿದೆ ಎಂದು ಪ್ರೊ.ರಂಗಪ್ಪ ತಿಳಿಸಿದರು.

click me!