
ಬೆಂಗಳೂರು (ಫೆ.14): ಕದ್ದ ವಸ್ತುಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ಇಲ್ಲವೇ ಸಂಸ್ಥೆಗೆ ಅಂತಹ ವಸ್ತುಗಳನ್ನು ಒಪ್ಪಿಸುವಂತೆ ಪೊಲೀಸರು ಕೇಳಿದಾಗ ಹಸ್ತಾಂತರಿಸಲು ವಿಳಂಬ ಮಾಡುವ ಅಥವಾ ನಿರಾಕರಿಸುವ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ಹೈಕೋರ್ಟ್ ಆದೇಶಿಸಿದೆ.
ಕೆಂಗೇರಿಯ ಕರೂರ್ ವೈಶ್ಯ ಬ್ಯಾಂಕ್ ಶಾಖೆಯಿಂದ ಕಳವು ಮಾಡಲಾದ ಚಿನ್ನಾಭರಣ ಅಡವಿಟ್ಟುಕೊಂಡು ಸಾಲ ವಿತರಿಸಿದ ಪ್ರಕರಣದಲ್ಲಿ ಚಿನ್ನಾಭರಣ ತಮಗೆ ಒಪ್ಪಿಸುವಂತೆ ಸೂಚಿಸಿ ಕೆಂಗೇರಿ ಪೊಲೀಸರು ಜಾರಿಗೊಳಿಸಿದ್ದ ನೋಟಿಸ್ ರದ್ದತಿ ಕೋರಿ ಐಐಎಫ್ಎಲ್ ಫೈನಾನ್ಸ್ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಕದ್ದ ವಸ್ತುಗಳ ವಿಷಯದಲ್ಲಿ ಅದು ಚಿನ್ನದ ಸಾಲದ ಕಂಪನಿಯಾಗಿದ್ದರೂ ಸಹ ಕದ್ದ ವಸ್ತುಗಳನ್ನು ಹಿಂದಿರುಗಿಸಬೇಕು. ಆರ್ಥಿಕವಾಗಿ ನಷ್ಟ ಉಂಟಾಗುವ ಅಥವಾ ಬಡ್ಡಿ ಮತ್ತು ಭದ್ರತೆಯ ಕಾರಣ ನೀಡಿ ಕದ್ದ ವಸ್ತುಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳಲಾಗದು. ಅಂತಹ ವಸ್ತುಗಳನ್ನು ತನಿಖಾಧಿಕಾರಿ ಜಪ್ತಿ ಮಾಡುವಾಗ ವಿರೋಧ ವ್ಯಕ್ತಪಡಿಸುವುದು ಸಲ್ಲ ಎಂದು ಆದೇಶಿಸಿದೆ.
ಅಲ್ಲದೆ, ಅಡವಿಟ್ಟುಕೊಂಡ ಕದ್ದ ಒಡವೆಗಳನ್ನು ಹಿಂದಿರುಗಿಸಿದರೆ, ತಮಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂಬ ಕಂಪನಿಯ ಕಾರಣ ಒಪ್ಪಿಕೊಂಡರೆ, ಅದು ಅಪಾಯಕಾರಿ ಪೂರ್ವ ನಿರ್ದೇಶನವಾಗಲಿದೆ. ಈ ರೀತಿಯ ವಾದಗಳು ತನಿಖೆಗೆ ಅಡ್ಡಿಯಾಗಲಿದೆ. ಆರ್ಥಿಕ ಅಪರಾಧಿಗಳಿಗೆ ಧೈರ್ಯ ನೀಡಿದಂತಾಗಲಿದೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಕುಗ್ಗಿಸಿದಂತಾಗಲಿದೆ. ಹಾಗಾಗಿ, ಅರ್ಜಿದಾರರ ಮನವಿ ಪುರಸ್ಕರಿಸಲು ಬಲವಾದ ಕಾರಣಗಳಿಲ್ಲ ಎಂದು ಪೀಠ ಹೇಳಿದೆ.
ಅಂತಿಮವಾಗಿ ಅಡವಿಟ್ಟುಕೊಂಡಿರುವ ಕದ್ದ ಚಿನ್ನಾಭರಣ ಪೊಲೀಸರಿಗೆ ಒಪ್ಪಿಸಬೇಕು. ಈ ಚಿನ್ನಾಭರಣಗಳು ಕೆಂಗೇರಿಯ ಕರೂರ್ ವೈಶ್ಯ ಬ್ಯಾಂಕ್ ಶಾಖೆಯಿಂದ ಕಳವು ಮಾಡಲಾಗಿದೆ ಎಂಬುದನ್ನು ದೃಢಪಟ್ಟರೆ, ಆ ಸಂಬಂಧ ತನಿಖಾಧಿಕಾರಿ ಮುಂದಿನ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಪೀಠ ಹೇಳಿದೆ.
ಕರೂರ್ ವೈಶ್ಯ ಬ್ಯಾಂಕ್ ಕೆಂಗೇರಿ ಶಾಖೆಯ ಅಧಿಕಾರಿಯೊಬ್ಬರು, ಗ್ರಾಹಕರು ಅಡವಿಟ್ಟಿದ್ದ ನೈಜ ಚಿನ್ನಾಭರಣಗಳನ್ನು ರಹಸ್ಯವಾಗಿ ತೆಗೆದು ನಕಲಿ ವಸ್ತುಗಳನ್ನು ಇಟ್ಟು, ನೈಜ ಆಭರಣಗಳನ್ನು ಐಐಎಫ್ಎಲ್ ಫೈನಾನ್ಸ್ ಕಂಪನಿ ಸೇರಿ ವಿವಿಧೆಡೆ ಅಡವಿಟ್ಟು ಸಾಲ ಪಡೆದುಕೊಂಡಿದ್ದ ಪ್ರಕರಣ 2025ರಲ್ಲಿ ಬೆಳಕಿಗೆ ಬಂದಿತ್ತು. ಈ ಕುರಿತು ಕರೂರು ವೈಶ್ಯ ಬ್ಯಾಂಕ್ ದೂರು ನೀಡಿತ್ತು. ತನಿಖೆ ನಡೆಸಿದ್ದ ಕೆಂಗೇರಿ ಠಾಣಾ ಪೊಲೀಸರು, ಅರ್ಜಿದಾರ ಫೈನಾನ್ಸ್ ಕಂಪನಿಗೆ ನೋಟಿಸ್ ಜಾರಿಗೊಳಿಸಿ, ಚಿನ್ನ ಮರಳಿಸಲು ಸೂಚಿಸಿದ್ದರು.
ಆ ನೋಟಿಸ್ ರದ್ದತಿಗೆ ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಕಂಪನಿ, ಅಡವಿಟ್ಟವರಿಂದ ಚಿನ್ನವನ್ನು ಉತ್ತಮ ನಂಬಿಕೆಯಿಂದ ಸ್ವೀಕರಿಸಲಾಗಿದೆ. ಸೂಕ್ತ ಕಾರ್ಯವಿಧಾನ ಅನುಸರಿಸಿದ ನಂತರ ಸಾಲ ವಿತರಿಸಲಾಗಿದೆ. ಸಾಲು ಮಂಜೂರಾತಿ ಒಪ್ಪಂದ / ಷರತ್ತುಗಳ ಪ್ರಕಾರ ಅಡವಿಟ್ಟ ಚಿನ್ನ ಮರಳಿಸಲು ಸಾಧ್ಯವಿಲ್ಲ. ಚಿನ್ನ ವಶಪಡಿಸಿಕೊಳ್ಳದೆ ತನಿಖೆ ನಡೆಸಲು ಸಾಧ್ಯವಿದೆ ಎಂದು ವಾದಿಸಿತ್ತು.
ಕರೂರು ವೈಶ್ಯ ಬ್ಯಾಂಕ್ ಪರ ವಕೀಲರು, ಕಳವು ಆದ ಚಿನ್ನವನ್ನು ತನ್ನ ಗ್ರಾಹಕರಿಗೆ ಹಿಂದಿರುಗಿಸುವ ಕಾನೂನು ಬದ್ಧ ಕರ್ತವ್ಯ ತನ್ನ ಮೇಲಿದೆ ಎಂದು ವಾದಿಸಿದ್ದರು. ಸರ್ಕಾರದ ಪರ ವಕೀಲರು, ಐಐಎಫ್ಎಲ್ ಕಂಪನಿಯಲ್ಲಿ ಅಡವಿಟ್ಟ ಚಿನ್ನ ಆರೋಪಿಯಾಗಿರುವ ಬ್ಯಾಂಕ್ ಸಿಬ್ಬಂದಿಯೇ ಕದ್ದಿದ್ದಾರೆಂದು ಬಹಿರಂಗಪಡಿಸಿದೆ. ಹಾಗಾಗಿ, ತನಿಖೆ ಮುಂದುವರಿಸಬೇಕಿರುವ ಹಿನ್ನೆಲೆಯಲ್ಲಿ ಚಿನ್ನವನ್ನು ಪೊಲೀಸರ ವಶಕ್ಕೆ ನೀಡಲು ಕಂಪನಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ